ಅಂಕೋಲಾ :ತಾಲೂಕಿನಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬೋಗ್ರಿಬೈಲ್ ಜಮೀನು ಅಕ್ರಮ ಹಗರಣದ ಕರಾಳ ಮುಖ ಕೊನೆಗೂ ಬಯಲಾಗಿದ್ದು, ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಸಲು ಯತ್ನಿಸಿದ್ದ ಖತರ್ನಾಕ್ ಕಿಲಾಡಿಗಳು ಈಗ ಕಂಬಿ ಎಣಿಸುವಂತಾಗಿದೆ. “ಉಪ್ಪು ತಿಂದವರು ನೀರು ಕುಡಿಯಲೇಬೇಕು” ಎಂಬ ಗಾದೆಯಂತೆ, ಬೋಗ್ರಿಬೈಲ್ ಗ್ರಾಮದ ಸರ್ವೇ ನಂಬರ್ 79/ಅ4 ರ 1 ಎಕರೆ 14 ಗುಂಟೆ ಜಮೀನನ್ನು ಮೂಲ ಮಾಲೀಕರಾದ ಇಮ್ತಿಯಾಜ್ ಸೈಯದ್ ಮತ್ತು ಅವರ ಸಹೋದರನ ಹೆಸರಿನಲ್ಲಿ ನಕಲಿ ವ್ಯಕ್ತಿಗಳನ್ನು ನಿಲ್ಲಿಸಿ, ನಕಲಿ ಆಧಾರ್ ಹಾಗೂ ಸಹಿ ಬಳಸಿ ಅಕ್ರಮವಾಗಿ ನೋಂದಣಿ ಮಾಡಿಸಲಾಗಿತ್ತು. ಈ ವಂಚನೆ ವಿರುದ್ಧ ಮಾಲೀಕರು ನೀಡಿದ ದೂರಿನನ್ವಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 171/2026 ರಡಿ ಪ್ರಕರಣ ದಾಖಲಾಗುತ್ತಿದ್ದಂತೆ, ಕಾರವಾರ ಉಪವಿಭಾಗದ ಡಿವೈಎಸ್ಪಿ ಎಸ್.ವಿ. ಗಿರೀಶ್ ನೇತೃತ್ವದ ತನಿಖಾ ತಂಡ ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ ಕೆಲವೇ ದಿನಗಳಲ್ಲಿ ಐವರು ಪ್ರಮುಖ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಬಂಧಿತರಲ್ಲಿ ಪ್ರಮುಖ ಸಂಚು ಕೋರ ಬಾಳೆಗುಳಿಯ 1)ಮಂಜುನಾಥ ಆನಂದು ಗೌಡ, ಅವರಿಗೆ ಸಾಥ್ ನೀಡಿದ್ದ ಅಂಕೋಲಾ ಉಪನೋಂದಣಾಧಿಕಾರಿ ಕಚೇರಿಯ.ಡಾಟಾ ಎಂಟ್ರಿ ಆಪರೇಟರ 2)ಶಂಕರ ರಾಮದಾಸ ಅಣ್ವೇಕರ ಹೊನ್ನಿಕೇರಿ ನಿವಾಸಿ , ಹಾಗೂ ಅಕ್ರಮಕ್ಕೆ ಸಹಕರಿಸಿದ 3)ಚೆನ್ನಪ್ಪ@ರವಿ ಜಟ್ಟಿ ನಾಯ್ಕ ಕೃಷ್ಣಾಪುರ ಬಾಳೆಗೂಳಿ ನಿವಾಸಿ.4)ದರ್ಶನ ನಾರಾಯಣ ಗೌಡ.ಸಾಕಿನ್ನ ಬೆಳಸೆ.ಮತ್ತು 5)ಯಂಕು ಹುಲಿಯಾ ಗೌಡ.ಸಾಕಿನ್ನ ಬೆಳಸೆ ಸೇರಿದ್ದಾರೆ.
ಎಫ್ಐಆರ್ನಲ್ಲಿ ಆರಂಭದಲ್ಲಿ 11 ಜನರ ಹೆಸರು ಉಲ್ಲೇಖವಾಗಿದ್ದರೂ, ಪೋಲಿಸರ ಚಾಣಕ್ಷ ತನಿಖೆಯಿಂದಾಗಿ ನಿಜವಾದ ಅಪರಾಧಿಗಳು ಸಿಕ್ಕಿಬಿದ್ದಿದ್ದಾರೆ. ಇದರಿಂದಾಗಿ ಅಮಾಯಕರ ಆಧಾರ್ ಕಾರ್ಡ್ಗಳನ್ನು ದುರುಪಯೋಗಪಡಿಸಿಕೊಂಡು, ಅವರ ಅರಿವಿಗೇ ಬಾರದಂತೆ ನಕಲಿ ಸಾಕ್ಷಿಗಳನ್ನಾಗಿ ಬಳಸಿ ತೊಂದರೆಗೀಡುಮಾಡಿದ್ದ ಭೂ ಮಾಫಿಯಾದ ಮುಸುಕು ಸಾಚಾ ಸಾರ್ವಜನಿಕರ ಮುಂದೆ ಕಳಚಿಬಿದ್ದಂತಾಗಿದೆ. ಭೂಮಾಪಿಯಾದವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾಡಿದ ಸಂಚಿಗೆ ತಾವೇ ಬಲಿಯಾಗಿದ್ದಾರೆ.
ಈ ಪ್ರಕರಣದಿಂದ ಅನಗತ್ಯ ಗೊಂದಲ ಮತ್ತು ಮಾನಸಿಕ ಕಿರುಕುಳದಿಂದ ಅನೇಕ ಅಮಾಯಕರು ಮುಕ್ತಿ ಪಡೆದು ನಿಟ್ಟುಸಿರು ಬಿಡುವಂತಾಗಿದ್ದು, ಪೊಲೀಸರ ಈ ಮಿಂಚಿನ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.ಆದರೆ ಈ ಜಾಲದ ಅಟ್ಟಹಾಸ ಇಷ್ಟಕ್ಕೇ ನಿಂತಂತೆ ಕಾಣುತ್ತಿಲ್ಲ. ಈ ಹಿಂದಿನ ದಿನಗಳಲ್ಲಿ ಬೋಗ್ರಿಬೈಲ್ ಗ್ರಾಮದ 3 ಎಕರೆ 24 ಗುಂಟೆ ಐಗಳ ಕುಟುಂಬದ ಜಮೀನು, ಬೋಗ್ರಿಬೈಲ್ ಗ್ರಾಮದ ಸರ್ವೇ ನಂ. 25/1.ಕ್ಷೆತ್ರ 7 ಎಕರೆ 26 ಗುಂಟೆ ಪೈ ಕುಟುಂಬದ ಜಮೀನು ಹಾಗೂ ತಳಗದ್ದೆ ಗ್ರಾಮದ ಸರ್ವೇ ನಂಬರ್ 98.ಕ್ಷೆತ್ರ 23 ಗುಂಟೆ ಜಮೀನುಗಳಲ್ಲೂ ಇದೇ ರೀತಿ ನಕಲಿ ಆಧಾರ್, ನಕಲಿ ಜಿಪಿಎ ಮತ್ತು ನಕಲಿ ವ್ಯಕ್ತಿಗಳನ್ನು ನಿಲ್ಲಿಸಿ ಅಕ್ರಮ ನೋಂದಣಿ ಮಾಡಿಸಿರುವುದು ಈಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
ಈ ಎಲ್ಲಾ ಬೇರೆ ಬೇರೆ ಸರ್ವೇ ನಂಬರ್ ಗಳ ದಸ್ತಾವೇಜುಗಳಿಗೆ ಸಹಿ ಹಾಕಿದ ವಕೀಲರು ಒಬ್ಬರೇ ಆಗಿರುವುದು ಹಾಗೂ ಬಂಧಿತ ಆರೋಪಿಗಳಲ್ಲೊಬ್ಬನೇ ಈ ಎಲ್ಲಾ ಅಕ್ರಮಗಳ ನಕಲಿ ದಸ್ತಾವೇಜು ಆನ್ಲೈನ್ಗೆ ಅಪ್ಲೋಡ್ ಕೆಲಸ ಮಾಡಿರುವುದು ಈ ಸಂಶಯಕ್ಕೆ ಬಲವಾದ ಸಾಕ್ಷಿಯಾಗಿದೆ.ಆಶ್ಚರ್ಯದ ಸಂಗತಿಯೆಂದರೆ, ಬಾಕಿ ಉಳಿದಿರುವ ಈ ಮೂರು ಬೃಹತ್ ಅಕ್ರಮಗಳ ಕುರಿತು ಈಗಾಗಲೇ ಸಾರ್ವಜನಿಕರು ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತ ಮನವಿ ಸಲ್ಲಿಸಿದ್ದರೂ ಸಹ, ಇದುವರೆಗೆ ಯಾವುದೇ ಅಧಿಕೃತ ಪೊಲೀಸ್ ದೂರು ದಾಖಲಾಗಿಲ್ಲ ಅಥವಾ ಆಡಳಿತ ವ್ಯವಸ್ಥೆಯಿಂದ ಸ್ವಯಂಪ್ರೇರಿತ (Suo Moto) ಪ್ರಕರಣವೂ ದಾಖಲಾಗಿಲ್ಲ! ಈ ಬಾಕಿ ಪ್ರಕರಣಗಳಲ್ಲೂ ಉಪನೋಂದಣಿ ಕಾರ್ಯಾಲಯದ ಅಧಿಕಾರಿಗಳ ಪಾತ್ರ, ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ ಕಿಲಾಡಿಗಳು, ದಸ್ತಾವೇಜು ಬರೆದ ಬರಹಗಾರರು ಹಾಗೂ ದಸ್ತಾವೇಜಾದ ನಂತರ ಜೆ-ಫಾರ್ಮ್ಗೆ ಕಂದಾಯ ಇಲಾಖೆಯ 21 ನೋಟೀಸ್ಗೆ ಸಹಿ ಪಡೆಯುವ ಸಂದರ್ಭದಲ್ಲಿ ಶಾಮಿಲಾದ ಕಂದಾಯ ಅಧಿಕಾರಿಗಳ ಪಾತ್ರವೇನು ಎಂಬುದು ಸಂಪೂರ್ಣವಾಗಿ ತನಿಖೆಯಾಗಿ ಕದೀಮರ ಜಾಲ ತಾಲೂಕಿನಿಂದ ಕೊನೆಗೊಳ್ಳಬೇಕಿದೆ.
ಇಷ್ಟೆಲ್ಲಾ ಸರಣಿ ಅಕ್ರಮಗಳು ನಡೆಯುತ್ತಿದ್ದರೂ ಅತ್ತ ಉಪನೋಂದಣಿ ಕಚೇರಿಯಲ್ಲಾಗಲಿ, ಇತ್ತ ದಂಡಾಧಿಕಾರಿಗಳ ಕಚೇರಿಯಲ್ಲಾಗಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸದಿರುವುದು ಮತ್ತಷ್ಟು ಅನಾಹುತ ಹಾಗೂ ಅಕ್ರಮಗಳಿಗೆ ಮುಕ್ತ ಎಡೆಮಾಡಿಕೊಡುತ್ತಿದ್ದು, ಸರ್ಕಾರ ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ಸಮಗ್ರ ತನಿಖೆಗೆ ಆದೇಶಿಸಬೇಕಿದೆ.
✍️ಕಿರಣ ಗಾಂವಕರ. ಕ್ರಾಂತಿಕಾರಿ ನ್ಯೂಸ್ ಅಂಕೋಲಾ













Leave a Reply