ಗೋವಾ ಮುಖ ನೋಡದ ಬಸ್ಸಿಗೆ ಅಂತರರಾಜ್ಯ ಬೋರ್ಡ್: ಮೇಲಾಧಿಕಾರಿಗಳ ಒತ್ತಡವೋ, ಡಿಪೋ ಮ್ಯಾನೇಜರ್ ಹುಚ್ಚಾಟವೋ? ಶಕ್ತಿ ಯೋಜನೆಗೆ ಎಗ್ಗಿಲ್ಲದೆ ಕನ್ನ!

ಅಂಕೋಲಾ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ ಸಿಕ್ಕಿದೆ ನಿಜ, ಆದರೆ ಅಂಕೋಲಾ ಸಾರಿಗೆ ಘಟಕದ ಅಧಿಕಾರಿಗಳ ಕಳ್ಳಾಟದಿಂದಾಗಿ ಹೆಣ್ಣುಮಕ್ಕಳ ಜೇಬಿಗೆ ಕತ್ತರಿ ಬೀಳುತ್ತಿದೆ. ಅಂತರರಾಜ್ಯ ಬಸ್‌ಗಳಿಗೆ ಉಚಿತವಿಲ್ಲ ಎಂಬ ನಿಯಮವನ್ನೇ ಬಂಡವಾಳ ಮಾಡಿಕೊಂಡಿರುವ ಇಲ್ಲಿನ ಅಧಿಕಾರಿಗಳು, ಬಸ್ಸೊಂದು ಗೋವಾ ಗಡಿಯನ್ನೂ ದಾಟದಿದ್ದರೂ ನಾಮಫಲಕದಲ್ಲಿ ಮಾತ್ರ ಅಂತರರಾಜ್ಯವಾದ ಕಾಣಕೋಣ ಪ್ರದೇಶವನ್ನು ಬರೆಸಿ ಅಕ್ಷರಶಃ ಪಂಗನಾಮ ಹಾಕುತ್ತಿರುವ ಘಟನೆ ವ್ಯವಸ್ಥವಾಗಿ ನಡೆಯುತ್ತಿದೆ.

ಅಂಕೋಲಾ ಘಟಕದ 91/92 ಶೆಡ್ಯೂಲ್ ಬಸ್ ಪ್ರತಿದಿನ ಬೆಳಿಗ್ಗೆ 8:30ಕ್ಕೆ ಕಾರವಾರದಿಂದ ಹೊರಟು ಚಿಕ್ಕಮಗಳೂರಿಗೆ ತಲುಪುತ್ತದೆ. ವಾಪಸ್ ಚಿಕ್ಕಮಗಳೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಸಂಜೆ 4:00 ಗಂಟೆಗೆ ಕಾರವಾರಕ್ಕೆ ಮರಳುತ್ತದೆ. ಈ ಬಸ್ ಎಲ್ಲಿಯೂ ಗೋವಾ ರಾಜ್ಯದ ಕಾಣಕೋಣಕ್ಕೆ ಹೋಗುವುದೇ ಇಲ್ಲ, ಕೇವಲ ಕರ್ನಾಟಕದ ಒಳಗೆ ಮಾತ್ರ ಸಂಚರಿಸುತ್ತದೆ. ಆದರೂ ಬಸ್‌ನ ಮುಂದೆ ‘ಕಾಣಕೋಣ ಟು ಚಿಕ್ಕಮಗಳೂರು‘ ಮತ್ತು ವಾಪಸ್ ಬರುವಾಗ ‘ಚಿಕ್ಕಮಗಳೂರು ಟು ಕಾಣಕೋಣ‘ ಎಂದು ಬರೆಸಿ “ಶಕ್ತಿ ಯೋಜನೆಯ ಲಾಭವನ್ನು ಮಹಿಳೆಯರು ಪಡೆದುಕೊಳ್ಳದಂತೆ ದಾರಿ ತಪ್ಪಿಸುವ ಸಲುವಾಗಿ ಸುಳ್ಳು ಬೋರ್ಡ್ ಹಾಕಲಾಗುತ್ತಿದೆ. ಬಸ್ ಒಳಗೆ ಕುಳಿತು ಪ್ರಯಾಣಿಸುವ ಮಹಿಳೆಯರಿಗೆ ಮಾತ್ರ ಇದು ಅಂತರರಾಜ್ಯ ಬಸ್ ಎಂಬ ಕಾರಣ ಹೇಳಿ ಜೇಬಿನಿಂದ ಹಣ ಕೀಳಲಾಗುತ್ತಿದೆ.ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಹಾಗೆ, ಸರ್ಕಾರ ಉಚಿತ ಪ್ರಯಾಣ ನೀಡಿದ್ದರೂ ಸ್ಥಳೀಯ ಅಧಿಕಾರಿಗಳ ವಂಚನೆಯಿಂದ ಮಹಿಳೆಯರು ನಗದು ಹಣ ಕೊಟ್ಟು ಟಿಕೆಟ್ ಪಡೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಬರೀ ನಾಮಫಲಕದಲ್ಲಿ ಮಾತ್ರ ಗೋವಾ ರಾಜ್ಯದ ಕಾಣಕೋಣ್ ಸೇರಿಸಿ , ರಾಜ್ಯದ ಒಳಗಡೆಯೇ ಓಡಾಡಿಕೊಂಡು ಕಳೆದ ಆರೇಳು ತಿಂಗಳಿಂದ ಈ ಅಕ್ರಮ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಸರ್ಕಾರದ ಸೌಲಭ್ಯವನ್ನು ಜನರಿಗೆ ತಲುಪಿಸಬೇಕಾದವರೇ ಈ ರೀತಿ ಜನರಿಗೆ ಟೋಪಿ ಹಾಕಿ ವಂಚಿಸುತ್ತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಹಾಗಾದರೆ ಈ ಹಸಿಬಿಸಿ ವಂಚನೆಯ ಹಿಂದೆ ಯಾರ ಕೈವಾಡವಿದೆ ಎಂಬ ಗಂಭೀರ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಇಲ್ಲಿನ ಘಟಕ ವ್ಯವಸ್ಥಾಪಕರಿಗೆ ಎಲ್ಲವೂ ತಿಳಿದಿದ್ದರೂ ತಮ್ಮ ಕುರ್ಚಿ ಉಳಿಸಿಕೊಳ್ಳಲು ಸ್ವಯಂಪ್ರೇರಿತರಾಗಿ ಈ ತಪ್ಪು ಮಾಡುತ್ತಿದ್ದಾರೋ, ಅಥವಾ ವಿಭಾಗೀಯ ಕಚೇರಿಯ ಮೇಲಧಿಕಾರಿಗಳ ಒತ್ತಡದಿಂದ ಈ ರೀತಿ ಅಕ್ರಮ ಎಸಲಾಗುತ್ತಿದೆಯೋ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ಮೇಲಧಿಕಾರಿಗಳ ಕೃಪಾಕಟಾಕ್ಷವಿಲ್ಲದೆ ಇಷ್ಟು ದೊಡ್ಡ ಮಟ್ಟದ ನಾಟಕ ಆಡಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

ಮತ್ತೊಂದೆಡೆ, ಬಸ್ಸಿನಲ್ಲಿ ಗೋವಾ ಫಲಕ ಹಾಕಿಕೊಂಡು ದಿನವೂ ರಾಜ್ಯದೊಳಗೆ ಮಾತ್ರ ತಿರುಗಾಡುವ ಈ ವ್ಯವಸ್ಥೆಯಿಂದಾಗಿ ಪ್ರತಿನಿತ್ಯ ಇದೇ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕ ಹಾಗೂ ನಿರ್ವಾಹಕರಿಗೆ ತಲೆಬಿಸಿಯಾಗಿದೆ. ಬಸ್ಸಿನಲ್ಲಿ ಬೋರ್ಡ್ ಬೇರೆ ಇದ್ದು, ಪ್ರಯಾಣಿಕ ಮಹಿಳೆಯರು ‘ಶಕ್ತಿ’ ಯೋಜನೆಯಡಿ ಉಚಿತ ಪ್ರಯಾಣ ಕೇಳಿದಾಗ ಕೊಂಡುಕೊಳ್ಳಲು ಬರುವ ಬೈಗುಳ ಹಾಗೂ ಹೈಡ್ರಾಮಾವನ್ನು ನುಂಗಿಕೊಳ್ಳಲಾರದೆ ಆ ಸಿಬ್ಬಂದಿ ಪ್ರತಿನಿತ್ಯ ಹೈರಾಣಾಗುತ್ತಿದ್ದಾರೆ. ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿಯಬೇಕಾದ ಅನಿವಾರ್ಯತೆಯಲ್ಲಿರುವ ಸಿಬ್ಬಂದಿ ನಿತ್ಯವೂ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ.ಮತ್ತೊಂದೆಡೆ, ಈ ಕಳ್ಳಾಟ ಕೇವಲ ಟಿಕೆಟ್‌ ವಂಚನೆಗೆ ಮಾತ್ರ ಸೀಮಿತವಾಗಿಲ್ಲ ಎಂಬ ಗಂಭೀರ ಅನುಮಾನವೂ ಹುಟ್ಟಿಕೊಂಡಿದೆ.

ಕಾರವಾರದಿಂದ ಕಾಣಕೋಣಕ್ಕೆ ಬಸ್ ಹೋಗಿ ಬಂದರೆ ಕಿಲೋಮೀಟರ್ ವ್ಯತ್ಯಾಸವಾಗುತ್ತದೆ. ಬಸ್ ಕಾಣಕೋಣಕ್ಕೂ ಹೋಗದಿದ್ದರೂ, ಕಾಗದದಲ್ಲಿ ಮಾತ್ರ ಕಾರವಾರದಿಂದ ಕಾಣಕೋಣಕ್ಕೆ ಹೋಗಿ ಬಂದಿದೆ ಎಂದು ನಮೂದಿಸಿ ಡೀಸೆಲ್ ಹಣವನ್ನು ನುಂಗಲಾಗುತ್ತಿದೆಯೇ ಎಂಬ ಸಂಶಯ ಬರದೇ ಇರಲಾರದು.

ವಾಸ್ತವವಾಗಿ ಡಿಪೋಗೆ ಬಸ್ ವಾಪಸಾದಾಗ ಘಟಕದ ಸೆಕ್ಯೂರಿಟಿ ಗಾರ್ಡ ದಾಖಲಿಸಬೇಕಾಗುತ್ತದೆ. ಗೋವಾ ಗಡಿಯೇ ಮುಖ ನೋಡದ ಬಸ್ ಕಾಣಕೋಣಕ್ಕೆ ಹೋಗಿದೆ ಎಂದು ಅಲ್ಲಿ ಹೇಗೆ ಎಂಟ್ರಿ ಆಗುತ್ತಿದೆ? ಕಿಲೋಮೀಟರ್ ಲೆಕ್ಕದಲ್ಲಿ ಗೋಲ್‌ಮಾಲ್ ನಡೆಸಿ ಡೀಸೆಲ್ ಬಿಲ್ ಕರಗಿಸಲಾಗುತ್ತಿದೆಯೇ? ಈ ಹಗರಣದ ಹಿಂದೆ ಬೃಹತ್ ದಂಧೆಯೇ ಅಡಗಿದೆಯೇ ಎಂಬ ಬಲವಾದ ಅನುಮಾನಗಳು ಕೂಡ ವ್ಯಕ್ತವಾಗಿದೆ. ಸರ್ಕಾರದ ಬೊಕ್ಕಸಕ್ಕೆ, ಡೀಸೆಲ್‌ಗೆ ಮತ್ತು ಬಡ ಮಹಿಳೆಯರಿಗೆ ಕನ್ನ ಹಾಕಿರುವ ಈ ವ್ಯವಸ್ಥಿತ ಕಳ್ಳಾಟದಲ್ಲಿ ಸಾರಿಗೆ ಘಟಕದ ಅಧಿಕಾರಿಗಳು ಹಾಗೂ ಮೇಲಾಧಿಕಾರಿಗಳ ಪ್ರಭಾವ ಇದೆ ಎನ್ನಲಾಗುತ್ತಿದ್ದು, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕಿದೆ.

✍️ಕಿರಣ ಗಾಂವಕರ.ಅಂಕೋಲಾ

Leave a Reply

Your email address will not be published. Required fields are marked *

error: Content is protected !!