ಪಶ್ಚಿಮ ಪದವೀಧರರ ಚುನಾವಣೆಯ ಅಖಾಡಕ್ಕೆ KRS ಪಕ್ಷ: ನಿಶಾಂತ ಬಂಕಾಪೂರ ಕಣಕ್ಕೆ.

ಉತ್ತರ ಕನ್ನಡ: ಮುಂಬರುವ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಕಣಕ್ಕಿಳಿಯಲು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷವು ಸಿದ್ಧತೆ ನಡೆಸಿದ್ದು, ಯುವ ಸಾವಯವ ಕೃಷಿ ತಜ್ಞ ನಿಶಾಂತ ಶಂಕರ ಬಂಕಾಪೂರ ಅವರನ್ನು ತನ್ನ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಪ್ರಾಮಾಣಿಕ ಹಾಗೂ ಜನಪರ ರಾಜಕಾರಣವನ್ನು ಕಟ್ಟುವ ನಿಟ್ಟಿನಲ್ಲಿ ಯುವಜನರಿಗೆ ಆದ್ಯತೆ ನೀಡುತ್ತಿರುವ ಕೆಆರ್‌ಎಸ್ ಪಕ್ಷವು, ರಾಜ್ಯದ ಪದವೀಧರರ ಮತ್ತು ಯುವಜನರ ಧ್ವನಿಯಾಗಿ ಕೆಲಸ ಮಾಡಲು ನಿಶಾಂತ ಬಂಕಾಪೂರ ಅವರನ್ನು ಆಯ್ಕೆ ಮಾಡಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ. ಹಾಗೂ ಪ್ರಸಿದ್ಧ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ (BHU) ‘ತಳಿ ಶಾಸ್ತ್ರ ಮತ್ತು ಸಸ್ಯ ತಳಿ ಅಭಿವೃದ್ಧಿ’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಸಾವಯವ ಕೃಷಿಕರಾಗಿ ಕ್ಷೇತ್ರ ಮಟ್ಟದಲ್ಲಿ ರೈತರೊಂದಿಗೆ ನಿರಂತರವಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ರಾಜ್ಯದಲ್ಲಿ ನಿರುದ್ಯೋಗ ಗಂಭೀರ ಸಮಸ್ಯೆಯಾಗಿ ಬೆಳೆದಿದ್ದು, ಕೆಪಿಎಸ್‌ಸಿ ಭ್ರಷ್ಟಾಚಾರದ ಕೂಪವಾಗಿದೆ ಮತ್ತು ಸರ್ಕಾರಿ ನೇಮಕಾತಿಗಳಲ್ಲಿ ಅಕ್ರಮಗಳು ಹೆಚ್ಚಾಗಿವೆ ಎಂದು ಪಕ್ಷವು ಕಿಡಿಕಾರಿದೆ. ಖಾಸಗಿ ವಲಯದಲ್ಲಿ ಹೊರರಾಜ್ಯದವರ ಆಕ್ರಮಣದಿಂದಾಗಿ ಸ್ಥಳೀಯ ಯುವಜನರಿಗೆ ಉದ್ಯೋಗ ಸಿಗದಂತಾಗಿದೆ ಹಾಗೂ ಸ್ವಉದ್ಯೋಗದ ಸಾಲ ಸೌಲಭ್ಯಗಳ ಹೆಸರಿನಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ.ಎಲ್ಲಾ ಖಾಲಿ ಸರ್ಕಾರಿ ಹುದ್ದೆಗಳನ್ನು ಪಾರದರ್ಶಕವಾಗಿ ಭರ್ತಿ ಮಾಡುವುದು, ಗುತ್ತಿಗೆ ನೇಮಕಾತಿಯನ್ನು ತಡೆಯುವುದು ಹಾಗೂ ಕೆಪಿಎಸ್‌ಸಿಯನ್ನು ಸುಧಾರಿಸುವುದು ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿರುವ ಕೆಆರ್‌ಎಸ್ ಪಕ್ಷವು, ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕ ಆಡಳಿತಕ್ಕಾಗಿ ಪಶ್ಚಿಮ ಪದವೀಧರರ ಕ್ಷೇತ್ರದ ಮತದಾರರು ನಿಶಾಂತ ಬಂಕಾಪೂರ ಅವರನ್ನು ಬೆಂಬಲಿಸಬೇಕಾಗಿ ಮನವಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!