ಬದುಕಿದ್ರೆ ಸಾಕು ಸ್ವಾಮಿ. ಇನ್ನೊಮ್ಮೆ ಈ ಲಿಫ್ಟ್ ಸಹವಾಸವೇ ಬೇಡ! ಅಂಕೋಲಾ ತಹಶೀಲ್ದಾರ್ ಕಚೇರಿಯಲ್ಲಿ ಲಿಫ್ಟನಲ್ಲಿ ಸಿಲುಕಿದ ಯುವತಿ ಪ್ರಾಣಪಾಯದಿಂದ ಪಾರು.

ಅಂಕೋಲಾ ತಹಶೀಲ್ದಾರ್ ಕಚೇರಿಯಲ್ಲಿ ನಿನ್ನೆ ಸಂಜೆ ನಡೆದ ಆ ಒಂದು ಘಟನೆ ನಿಜಕ್ಕೂ ಯಾರನ್ನಾದರೂ ಬೆಚ್ಚಿಬೀಳಿಸುವಂತಿತ್ತು. ಕಳೆದ ವರ್ಷವಷ್ಟೇ ನೆಲಮಹಡಿಯಿಂದ ಒಂದನೇ ಹಾಗೂ ಎರಡನೇ ಮಹಡಿಗೆ ಹೋಗಿ ಬರಲು ಸಾರ್ವಜನಿಕರ ಅನುಕೂಲಕ್ಕಾಗಿ ಲಿಫ್ಟ್ ಸಿದ್ಧಪಡಿಸಲಾಗಿತ್ತು. ಆದರೆ, ಸಾರ್ವಜನಿಕರ ಬಳಕೆಗೆ ಸಿಕ್ಕಿದ್ದಕ್ಕಿಂತ ಈ ಲಿಫ್ಟ್ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದೇ ಹೆಚ್ಚು! ಅಷ್ಟೇ ಅಲ್ಲ, ಕರೆಂಟ್ ಹೋದಾಗ ಲಿಫ್ಟ್ ತಕ್ಷಣ ಕೆಲಸ ಮಾಡಲು ಬೇಕಾದ ಜನರೇಟರ್ ಸಂಪರ್ಕವನ್ನೂ ಈವರೆಗೂ ನೀಡದೇ ಇರುವುದು ತಾಲೂಕು ಆಡಳಿತದ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ.

ನಡೆದಿದ್ದೇನು? ನಿನ್ನೆ ದಿನಾಂಕ23/9/2026ರ ಸಂಜೆ 5:30 ರ ಸುಮಾರಿಗೆ ಯುವತಿ ಯೋರ್ವಳು 2ನೇ ಮಹಡಿಯಿಂದ ಕೆಲಸ ಮುಗಿಸಿಕೊಂಡು ನೆಲಮಹಡಿಗೆ ಬರಲು ಯುವತಿ ಲಿಫ್ಟ್ ಹತ್ತಿದ್ದಳು. ಆದರೆ, ಲಿಫ್ಟ್ ಕೆಳಗೆ ತಲುಪುತ್ತಿದ್ದಂತೆಯೇ ಏಕಾಏಕಿ ಕರೆಂಟ್ ಹೊರಟುಹೋಗಿದೆ! ಪರಿಣಾಮವಾಗಿ, ಆಕೆ ನೆಲಮಹಡಿಯಲ್ಲೇ ಲಿಫ್ಟ್ ಒಳಗಡೆ ಸಿಲುಕಿಕೊಂಡಿದ್ದಾಳೆ. ಕತ್ತಲಲ್ಲಿ ಒಳಗಡೆ ಉಸಿರುಗಟ್ಟುವಂತಾಗಿ, ಭಯದಿಂದ ಆ ಯುವತಿ ಅಳಲು ಹಾಗೂ ಜೋರಾಗಿ ಕಿರುಚಾಡಲು ಪ್ರಾರಂಭಿಸಿದ್ದಾಳೆ. ಈ ಅಳಲು ಕೇಳಿ ಓಡೋಡಿ ಬಂದ ಕಚೇರಿ ಸಿಬ್ಬಂದಿ, ತಕ್ಷಣವೇ ಕಬ್ಬಿಣದ ಸಲಕರಣೆಗಳನ್ನು ತಂದು ಲಿಫ್ಟ್ ಬಾಗಿಲು ತೆರೆಯಲು ಹರಸಾಹಸ ಪಟ್ಟಿದ್ದಾರೆ.

ಇತ್ತ ವಿಷಯ ತಿಳಿಯುತ್ತಿದ್ದಂತೆಯೇ ಕಚೇರಿ ಅಧಿಕಾರಿ ಗಿರೀಶ್ ಜಾಂಬವಳೇಕರ್ ಅವರು ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಕರೆ ಮಾಡಿ, ಲಿಫ್ಟ್‌ನಲ್ಲಿ ಯುವತಿ ಸಿಲುಕಿರುವ ಸ್ಥಿತಿಯನ್ನು ವಿವರಿಸಿ ಕೂಡಲೇ ವಿದ್ಯುತ್ ಸಂಪರ್ಕ ನೀಡುವಂತೆ ಕೋರಿದ್ದಾರೆ. ಅದೃಷ್ಟವಶಾತ್ ಕೆಲವೇ ನಿಮಿಷಗಳಲ್ಲಿ ಕರೆಂಟ್ ಬಂತಾದರೂ, ಕಂಟಕ ಮಾತ್ರ ಮುಗಿಯಲಿಲ್ಲ! ಕರೆಂಟ್ ಬಂದ ತಕ್ಷಣ ನೆಲಮಹಡಿಯ ಬಾಗಿಲು ಓಪನ್ ಆಗದೇ, ಲಿಫ್ಟ್ ಏಕಾಏಕಿ ಮತ್ತೆ ಒಂದನೇ ಮಹಡಿಗೆ ಹೋಗಿ ನಿಂತಿದೆ. ಅಲ್ಲಿಗೆ ತಲುಪುತ್ತಿದ್ದಂತೆಯೇ ಮತ್ತೆ ಕರೆಂಟ್ ಹೋಗಿ ಯುವತಿ ಮತ್ತೆ ಒಂದನೇ ಮಹಡಿಯಲ್ಲೇ ಬಂದಿಯಾಗಿದ್ದಾಳೆ.ಮತ್ತೆ ಗಾಬರಿಗೊಂಡ ಸಿಬ್ಬಂದಿಗಳು ತಡಮಾಡದೇ ಒಂದನೇ ಮಹಡಿಗೆ ಓಡಿ, ಕಬ್ಬಿಣದ ಉಪಕರಣಗಳಿಂದ ಲಿಫ್ಟ್ ಲಾಕ್ ಓಪನ್ ಮಾಡಲು ಮತ್ತೆ ಕಷ್ಟಪಟ್ಟು ಕೊನೆಗೂ ಬಾಗಿಲು ತೆರೆದಿದ್ದಾರೆ.

ಲಿಫ್ಟ್ ಒಳಗಡೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆ ಯುವತಿ ‘ಅಬ್ಬಾ ಬದುಕಿದೆ ಬಡಜೀವ’ ಎಂದು ಪ್ರಾಣಪಾಯದಿಂದ ಪಾರಾಗಿ ಹೊರಬಂದಿದ್ದಾಳೆ. ಹೊರಬರುತ್ತಿದ್ದಂತೆಯೇ ಭಯದಿಂದ ನಡುಗುತ್ತಿದ್ದ ಆಕೆ, “ಬದುಕಿದ್ರೆ ಸಾಕು, ಇನ್ನೊಮ್ಮೆ ಈ ಆಫೀಸ್ ಲಿಫ್ಟ್ ಸಹವಾಸವೇ ಬೇಡ” ಎಂದು ಪ್ರತಿಕ್ರಿಯಿಸಿದ್ದಾಳೆ. ಕಣ್ಣೆದುರೇ ನಡೆದ ಈ ಭೀಕರ ದೃಶ್ಯವನ್ನು ಕಂಡ ಸಾರ್ವಜನಿಕರು ತಹಶೀಲ್ದಾರ್ ಕಚೇರಿಯ ಈ ಬೇಜವಾಬ್ದಾರಿ ಅವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಇಲ್ಲಿನ ಅಸಲಿ ವಿಚಾರ ಏನೆಂದರೆ, ಕೆಲವು ತಿಂಗಳ ಹಿಂದಷ್ಟೇ ಇದೇ ಕಟ್ಟಡದ ಎರಡನೇ ಮಹಡಿಯಲ್ಲಿ ನೂತನ ಉಪನಂದಣಿ (ಸಬ್ ರಿಜಿಸ್ಟ್ರಾರ್) ಕಚೇರಿ ಪ್ರಾರಂಭವಾಗಿದೆ. ಜಮೀನು, ಆಸ್ತಿ ನೋಂದಣಿಗಾಗಿ ಪ್ರತಿದಿನ ನೂರಾರು ಜನರು ಇಲ್ಲಿಗೆ ಬಂದು ಹೋಗುತ್ತಾರೆ. ಇಂತಹ ಜನನಿಬಿಡ ಸ್ಥಳದಲ್ಲಿ ಕರೆಂಟ್ ಹೋದಾಗ ಬಳಸಲು ಸೂಕ್ತ ಜನರೇಟರ್ ಸೌಲಭ್ಯ ಇಲ್ಲದಿರುವುದು ದೊಡ್ಡ ಅನಾಹುತಕ್ಕೆ ಆಹ್ವಾನ ನೀಡಿದಂತಿದೆ. ನಿನ್ನೆ ಆ ಯುವತಿ ಧೈರ್ಯದಿಂದ ಹೇಗೋ ಪಾರಾದಳು, ಆದರೆ ಒಂದೊಮ್ಮೆ ಕರೆಂಟ್ ಗಂಟೆಗಟ್ಟಲೆ ಬರದೇ ಇದ್ದಿದ್ದರೆ ಆಕೆಯ ಪರಿಸ್ಥಿತಿ ಏನಾಗುತ್ತಿತ್ತು? ವಯಸ್ಸಾದ ಹಿರಿಯ ಜೀವಗಳು, ಸಣ್ಣ ಮುಗ್ಧ ಕಂದಮ್ಮಗಳು. ಗರ್ಭಿಣಿ ಮಹಿಳೆಯರು ಅಥವಾ ಉಸಿರಾಟದ ಸಮಸ್ಯೆ ಇರುವವರು ಹೀಗೆ ಲಿಫ್ಟ್‌ನಲ್ಲಿ ಸಿಲುಕಿಕೊಂಡರೆ ಅವರ ಗತಿಯೇನು? ಅವರ ಜೀವಕ್ಕೆ ಏನಾದರೂ ಹೆಚ್ಚುಕಮ್ಮಿ ಆದರೆ ಹೊಣೆ ಯಾರು? ಇನ್ನಾದರೂ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಕಣ್ಣುತೆರೆದು, ಕರೆಂಟ್ ಹೋದರೂ ಲಿಫ್ಟ್ ನಿಲ್ಲದೆ ತಡೆರಹಿತವಾಗಿ ಚಲಿಸಲು ಬೇಕಾದ ಯುಪಿಎಸ್ ಅಥವಾ ಜನರೇಟರ್‌ನಂತಹ ಪರ್ಯಾಯ ವ್ಯವಸ್ಥೆಯನ್ನು ತಕ್ಷಣವೇ ಮಾಡಬೇಕು ಹಾಗೂ ಸಾರ್ವಜನಿಕರ ನೆಮ್ಮದಿಗೆ ಕಾರಣವಾಗಬೇಕು ಎಂದು ಸಾರ್ವಜನಿಕರು ಜೋರಾಗಿ ಆಗ್ರಹಿಸುತ್ತಿದ್ದಾರೆ.

✍️ಕಿರಣ ಗಾಂವಕರ. ಕ್ರಾಂತಿಕಾರಿ ನ್ಯೂಸ್.ಅಂಕೋಲಾ

Leave a Reply

Your email address will not be published. Required fields are marked *

error: Content is protected !!