ಅಂಕೋಲಾ:: ಹತ್ತು ವರ್ಷಗಳ ಹಿಂದೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಖಾಸಗಿ ಬಸ್ ಚಾಲಕನನ್ನು ಅಂಕೋಲಾ ಪೊಲೀಸರು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹರ್ಷ (38) ಬಂಧಿತ ಆರೋಪಿಯಾಗಿದ್ದು, ಈತ ಮೂಲತಃ ಬೆಂಗಳೂರಿನ ಕೆ.ಆರ್.ಪುರಂನ ಯಶೋದಮ್ಮ ಕಟ್ಟಡ, ಅಯ್ಯಪ್ಪ ದೇವಸ್ಥಾನದ ಹತ್ತಿರದ ನಿವಾಸಿಯಾಗಿದ್ದಾನೆ.
ಘಟನೆಯ ಹಿನ್ನೆಲೆ:ದಿನಾಂಕ 29-07-2014 ರಂದು ರಾತ್ರಿ ಸುಮಾರು 09:30 ಗಂಟೆ ಸಮಯದಲ್ಲಿ ಅಂಕೋಲಾ ತಾಲೂಕಿನ ಎನ್.ಹೆಚ್-66 ರಸ್ತೆಯ ಹಾರವಾಡ ಘಟ್ಟದ ಇಳಿಜಾರಿನ ತಿರುವಿನಲ್ಲಿ ಖಾಸಗಿ ಬಸ್ಸಿನ ಚಾಲಕ ಹರ್ಷ ಎಂಬಾತ ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದು, ಸುಮಾರು 20-25 ಜನ ಪ್ರಯಾಣಿಕರನ್ನು ಹತ್ತಿಸಿಕೊಂಡು ಕಾರವಾರ-ಅಂಕೋಲಾ ಮಾರ್ಗವಾಗಿ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದನು. ಈ ವೇಳೆ ಬಸ್ಸಿನ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲ ಬದಿಗೆ ತೆಗೆದುಕೊಂಡು ಹೋಗಿ ಬಸ್ಸು ಪಲ್ಟಿಯಾಗಿ ಅಪಘಾತ ಸಂಭವಿಸಿತ್ತು. ಅಪಘಾತದ ತೀವ್ರತೆಗೆ ಬಸ್ಸಿನಲ್ಲಿದ್ದ ಕೆಲವರಿಗೆ ಸಾಮಾನ್ಯ ಹಾಗೂ ಇನ್ನು ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಪ್ರಯಾಣಿಕರಾದ ಸುನೀಲ್ (22) ಎಂಬುವವರಿಗೆ ಗಂಭೀರ ಸ್ವರೂಪದ ಪೆಟ್ಟಾಗಿ ಸ್ಥಳದಲ್ಲೇ ಮರಣ ಹೊಂದಿದ್ದರು. ಘಟನೆಯ ಬಳಿಕ ಚಾಲಕ ಬಸ್ಸನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದನು. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ: 148/2014, ಕಲಂ: 279, 337, 338, 304(ಎ) ಐಪಿಸಿ ಹಾಗೂ 187 ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. ಈ ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ಸಿಸಿ ನಂ: 27/2016 ರಂತೆ ವಿಚಾರಣೆಗೆ ಬಾಕಿ ಇತ್ತು. ಆದರೆ ಆರೋಪಿ ಹರ್ಷ ತಂದೆ ಗಂಗಾಧರಪ್ಪ. ಎಂಬಾತ 2016 ರಿಂದಲೂ ನ್ಯಾಯಾಲಯದ ವಿಚಾರನೆಗೆ ಹಾಜರಾಗದೆ, ತನ್ನ ವಿಳಾಸವನ್ನು ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದನು.
ಪತ್ತೆ ಕಾರ್ಯ ಹಾಗೂ ಬಂಧನ:ಸುದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಅಂಕೋಲಾ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿತ್ತು. ಖಚಿತ ಮಾಹಿತಿ ಕಲೆಹಾಕಿದ ತನಿಖಾ ತಂಡವು ದಿನಾಂಕ 29-10-2026 ರಂದು ಬೆಂಗಳೂರಿನಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಅಂಕೋಲಾಕ್ಕೆ ಕರೆತಂದು ದಸ್ತಗಿರಿ ಮಾಡಿದೆ. ಬಳಿಕ ಅಂಕೋಲಾದ ಮಾನ್ಯ ಹೆಚ್ಚುವರಿ ಸಿವಿಲ್ ಜಡ್ಜ್ & ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯಿಂದ ರೂ. 50,000/- ಭರಣ ಮಾಡಿಕೊಂಡು ಶರ್ತಿನ ಮೇರೆಗೆ ಬಿಡುಗಡೆಗೊಳಿಸಿರುತ್ತದೆ. ಈ ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲೆ ಕಾರವಾರದ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ದೀಪನ್.ಎಮ್.ಎಸ್, ಕಾರವಾರದ ಮಾನ್ಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ-1 ರವರಾದ ಶ್ರೀ ಕೃಷ್ಣಮೂರ್ತಿ.ಜಿ, ಕಾರವಾರ ಉಪವಿಭಾಗದ ಮಾನ್ಯ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಜಿ.ಎಸ್.ಲೋಕಾಪುರ ರವರ ಮಾರ್ಗದರ್ಶನದಂತೆ, ಅಂಕೋಲಾ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀ ಚಂದ್ರಶೇಖರ ಮಠಪತಿ ರವರ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ. ತನಿಖಾ ತಂಡದ ಉಸ್ತುವಾರಿ ಅಧಿಕಾರಿ ಪಿ.ಎಸ್.ಐ ಸಂಚಾರ ಸುನೀಲ ಹುಲ್ಲೋಳ್ಳಿ ಹಾಗೂ ಸಿಬ್ಬಂದಿಗಳಾದ ಸಿ.ಹೆಚ್.ಸಿ 502 ಮೋಹನ ದೇವು ಗೌಡ, ಸಿಪಿಸಿ-1766 ರಮೇಶ ಎನ್. ತುಂಗಕ, ಸಿಪಿಸಿ-579 ದೇವಪ್ಪ ಕಾಗನೂರು ಅವರು ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿ ಅಭಿನಂದಿಸಿದ್ದಾರೆ.













Leave a Reply