ಅಂಕೋಲ:: ತಾಲೂಕಿನ ಮೀನು ಮಾರುಕಟ್ಟೆ ಸಮೀಪದ ವಿಧವೆ ಮಹಿಳೆಯೊಬ್ಬಳು ಸೋಮವಾರ ರಾತ್ರಿ ಆಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಬೆಳಕಿಗೆ ಬಂದಿದೆ.
ಮಹಿಳೆ ತನ್ನ ಗರ್ಭಧಾರಣೆಯ ವಿಷಯವನ್ನು ಆಶಾ ಕಾರ್ಯಕರ್ತೆಯರಿಗೂ ತಿಳಿಸದೆ ಮುಚ್ಚಿಟ್ಟಿದ್ದಳು ಎನ್ನಲಾಗುತ್ತಿದ್ದು, ಸೋಮವಾರ ರಾತ್ರಿ ಏಕಾಏಕಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಅಂಕೋಲ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಯ ವೈದ್ಯರು ಯಾವುದೇ ಹೆಚ್ಚಿನ ತುರ್ತು ಪರೀಕ್ಷೆ ನಡೆಸದೆ, ತಕ್ಷಣವೇ ಕಾರವಾರಕ್ಕೆ ರೆಫರ್ ಮಾಡಿ ಆಂಬುಲೆನ್ಸ್‌ನಲ್ಲಿ ಕಳುಹಿಸಿಕೊಟ್ಟಿದ್ದಾರೆ. ಪರಿಣಾಮವಾಗಿ, ಅಂಕೋಲಾದ ಅನತಿ ದೂರದ ಮಾರ್ಗಮಧ್ಯೆ ಆಂಬುಲೆನ್ಸ್‌ನಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದು ಬಂದಿದೆ .
ವೈದ್ಯರ ಜವಾಬ್ದಾರಿಯ ಬಗ್ಗೆ ಸಾರ್ವಜನಿಕರ ಪ್ರಶ್ನೆ:ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಿಲ್ಲ ಎನ್ನುವ ಕಾರಣ ನೀಡಿ ರೋಗಿಯನ್ನು ಕಾರವಾರಕ್ಕೆ ಕಳುಹಿಸಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆಸ್ಪತ್ರೆಯಲ್ಲಿ ಎಂಬಿಬಿಎಸ್ ಪದವಿ ಪಡೆದ ವೈದ್ಯರಿದ್ದರೂ, ಇಂತಹ ತುರ್ತು ಸಂದರ್ಭದಲ್ಲಿ ಹೆರಿಗೆ ಮಾಡಿಸುವ ಕನಿಷ್ಠ ತರಬೇತಿ ಅಥವಾ ಜ್ಞಾನ ಅವರಿಗೆ ಇರುವುದಿಲ್ಲವೇ ಎಂಬ ಗಂಭೀರ ಪ್ರಶ್ನೆ ಸಾರ್ವಜನಿಕರಿಂದ ಮೂಡಿದೆ. ರಾಜ್ಯದ ಇತರೆ ಕೆಲವು ಜಿಲ್ಲೆಗಳಲ್ಲಿ ಪ್ರಸೂತಿ ತಜ್ಞರ ಅನುಪಸ್ಥಿತಿಯಲ್ಲೂ ತರಬೇತಿ ಪಡೆದ ಸ್ಟಾಫ್ ನರ್ಸ್‌ಗಳು ನಾರ್ಮಲ್ ಡೆಲಿವರಿ ಮಾಡಿರುವ ನಿದರ್ಶನಗಳಿವೆ. ಹೀಗಿರುವಾಗ, ಅಂಕೋಲ ಆಸ್ಪತ್ರೆಯ ವೈದ್ಯರು ಯಾವುದೇ ರಿಸ್ಕ್ ತೆಗೆದುಕೊಳ್ಳದೆ ನಾರ್ಮಲ್ ಡೆಲಿವರಿ ಸಾಧ್ಯವಿರುವ ಸಂದರ್ಭದಲ್ಲೂ ಬೇರೆಡೆಗೆ ರೆಫರ್ ಮಾಡುತ್ತಿರುವುದು ಎಷ್ಟು ಸರಿ? ಮಹಿಳೆಗೆ ಮಾರ್ಗಮಧ್ಯೆ ಏನಾದರೂ ಹೆಚ್ಚುಕಮ್ಮಿ ಆಗಿದ್ದರೆ ಅದಕ್ಕೆ ಹೊಣೆ ಯಾರಾಗುತ್ತಿದ್ದರು ಎಂಬ ಆಕ್ರೋಶ ವ್ಯಕ್ತವಾಗಿದೆ.
ಮಗು ಮಾರಾಟ ದಂಧೆಯ ಶಂಕೆ :ಮಹಿಳೆಗೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡಿವೆ. ಗರ್ಭಿಣಿಯಾದ ಈ ವಿಧವೆಗೆ ‘ತಾಯಿ ಕಾರ್ಡ್‘ ಕೂಡ ಇಲ್ಲದಿರುವುದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಸೌಲಭ್ಯಗಳಿದ್ದರೂ ವೈದ್ಯರು ತೋರಿದ ನಿರ್ಲಕ್ಷ್ಯದ ಹಿಂದೆ ಮಗು ಮಾರಾಟ ದಂಧೆ ಏನಾದರೂ ಶಾಮೀಲಾಗಿದೆಯೇ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ರೋಗಿಯನ್ನು ಸರಿಯಾಗಿ ಪರೀಕ್ಷಿಸದೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರೆಫರೆನ್ಸ್ ಬರೆದ ವೈದ್ಯರ ಬೇಜವಾಬ್ದಾರಿ ಮತ್ತು ಈ ಪ್ರಕರಣದ ಒಟ್ಟಾರೆ ನಡವಳಿಕೆಯ ಬಗ್ಗೆ ತಾಲೂಕು ಆಡಳಿತ ಹಾಗೂ ತಾಲೂಕು ವೈದ್ಯಾಧಿಕಾರಿಗಳು ತಕ್ಷಣವೇ ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕರು ಬಲವಾಗಿ ಆಗ್ರಹಿಸುತ್ತಿದ್ದಾರೆ.













Leave a Reply