ಅಂಕೋಲಾದ ಶೈಕ್ಷಣಿಕ ಇತಿಹಾಸದಲ್ಲಿ ತನದಾದ ಛಾಪು ಮೂಡಿಸಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಜೈಹಿಂದ್ ಪ್ರೌಢಶಾಲೆಯು 125 ವರ್ಷಗಳ ಸುದೀರ್ಘ ಹಾಗೂ ಶ್ರೇಷ್ಠ ಶೈಕ್ಷಣಿಕ ಪಯಣವನ್ನು ಪೂರೈಸಿ ಶತಮಾನೋತ್ತರ ರಜತಪರ್ವ ಬೆಳ್ಳಿಹಬ್ಬದ ಹಸ್ತಿಲಲ್ಲಿ ನಿಂತಿದೆ. 1896ರಲ್ಲಿ ಸ್ವಾತಂತ್ರ್ಯ ಹೋರಾಟದ ಮಹಾನ್ ಚೈತನ್ಯದಿಂದ ಬೆಳಗಿದ ಈ ಜ್ಞಾನಜ್ಯೋತಿಯು ಅಸಂಖ್ಯಾತ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿ, ದೇಶಪ್ರೇಮ, ಶಿಸ್ತು, ಸ್ವಾಭಿಮಾನ ಹಾಗೂ ಸೇವಾ ಮೌಲ್ಯಗಳನ್ನು ಬಿತ್ತಿ ಬೆಳೆಸಿದ ಹೆಮ್ಮೆಯ ಇತಿಹಾಸವನ್ನು ಹೊಂದಿದೆ.
ಈ ವಿದ್ಯಾಸಂಸ್ಥೆಯಲ್ಲಿ ಅಕ್ಷರಾಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ, ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗೈದು ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ. ಐಎಎಸ್ ಅಧಿಕಾರಿಗಳು, ಶಿಕ್ಷಣ ತಜ್ಞರು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಕರಾದ ಡಾ. ದಿನಕರ ದೇಸಾಯಿಯವರಂತಹ ಅನೇಕ ಗಣ್ಯ ಮಹನೀಯರ ನೆನಪುಗಳು ಈ ಶಾಲೆಯ ಹಿರಿಮೆ ಹಾಗೂ ಗೌರವವನ್ನು ಎತ್ತಿಹಿಡಿದಿವೆ. ಈ ಐತಿಹಾಸಿಕ ಸಂಭ್ರಮವನ್ನು ಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಡಿಸೆಂಬರ್ 25 ಮತ್ತು 26 ರಂದು ಎರಡು ದಿನಗಳ ಕಾಲ ಅತ್ಯಂತ ವೈಭವದ ಹಾಗೂ ಅರ್ಥಪೂರ್ಣ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಮೊದಲ ದಿನದಂದು ನೋಂದಣಿ, ಶೋಭಾಯಾತ್ರೆ, ವೈಭವದ ಪ್ರವೇಶದ್ವಾರ ಹಾಗೂ ವಸ್ತುಪ್ರದರ್ಶನ ಉದ್ಘಾಟನೆಗೊಳ್ಳಲಿದ್ದು, ಮಧ್ಯಾಹ್ನದ ನಂತರ ಬೃಹತ್ ವೇದಿಕೆಯಲ್ಲಿ ಬೆಳ್ಳಿಹಬ್ಬದ ಅಧಿಕೃತ ಉದ್ಘಾಟನೆ, ಸ್ಮರಣ ಸಂಚಿಕೆ ಬಿಡುಗಡೆ ಮತ್ತು ವಿವಿಧ ರಂಗಗಳ ಸಾಧಕರಿಗೆ ಗೌರವ ಸನ್ಮಾನ ಜರುಗಲಿದೆ.
ಎರಡನೇ ದಿನದಂದು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಹಾಗೂ ಶೈಕ್ಷಣಿಕ ಕಾರ್ಯಾಗಾರ ಮತ್ತು ಮನರಂಜನಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯ ಸಮಾರೋಪ ಸಮಾರಂಭ ನೆರವೇರಲಿದೆ.
ಜೈ ಹಿಂದ್ ಹೈಸ್ಕೂಲ್ ನಲ್ಲಿ ದಿನಾಂಕ 29/10/2026 ರಂದು ಕರೆದ ಈ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಈ ಪತ್ರಿಕಾಗೋಷ್ಠಿಯಲ್ಲಿ ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಡಾ. ರಾಮಕೃಷ್ಣ ಗುಂದಿ, ಜೈಹಿಂದ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಸಂಜಯ ಕಾಮತ, ಹಳೆಯ ವಿದ್ಯಾರ್ಥಿ ಹಾಗೂ ಸಹಕಾರಿ ಕ್ಷೇತ್ರದ ಹಿರಿಯರಾದ ಡಿ.ಎನ್. ನಾಯಕ, ಸಮಿತಿಯ ಉಪಾಧ್ಯಕ್ಷ ಭಾಸ್ಕರ ನಾರ್ವೇಕರ, ಸದಸ್ಯ ಗಿರೀಶ ನಾಯಕ, ಜೈಹಿಂದ್ ಎಜ್ಯುಕೇಷನ್ ಸೊಸೈಟಿಯ ಗೌರವಾಧ್ಯಕ್ಷ ಪದ್ಮನಾಭ ಪ್ರಭು, ಹಾಗೂ ಪ್ರಮುಖರಾದ ಆರ್.ಎಸ್. ಕಾಮತ, ಸಂದೀಪ ನಾಯಕ, ಜಿ. ಪ್ರೇಮಾನಂದ, ವಿಠ್ಠಲ ಅಗೇರ, ಮಹೇಶ ನಾಯಕ ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಯ ನಿರ್ವಹಣೆಯನ್ನು ಮುಖ್ಯ ಶಿಕ್ಷಕ ಪ್ರಭಾಕರ ಬಂಟ ವಹಿಸಿದ್ದರು.
ಶಾಲೆಯ ಈ ಐತಿಹಾಸಿಕ ಘಟ್ಟದಲ್ಲಿ, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮೂಲಸೌಕರ್ಯ ಒದಗಿಸುವ ಸಲುವಾಗಿ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸುಸಜ್ಜಿತ ಕಟ್ಟಡ ಹಾಗೂ ಕ್ರೀಡಾಂಗಣ ನಿರ್ಮಾಣದ ಮಹತ್ಸಂಕಲ್ಪವನ್ನು ತೊಡಲಾಗಿದೆ. ಈ ಕನಸನ್ನು ನನಸು ಮಾಡಲು ಶಾಲೆಯ ಹಳೆಯ ವಿದ್ಯಾರ್ಥಿಗಳು, ದಾನಿಗಳು, ಉದ್ಯಮಿಗಳು, ಪೋಷಕರು ಹಾಗೂ ಸಾರ್ವಜನಿಕರು ಮುಕ್ತಮನಸ್ಸಿನಿಂದ ಉದಾರ ದೇಣಿಗೆ ನೀಡಿ ಕೈಜೋಡಿಸಬೇಕಿದೆ. ನಾವು ಶಾಲೆಯಿಂದ ಪಡೆದ ಜ್ಞಾನದ ಬೆಳಕನ್ನು ಮುಂದಿನ ತಲೆಮಾರಿಗೆ ಹಂಚುವುದು ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಯ ಕರ್ತವ್ಯ ಹಾಗೂ ಕೃತಜ್ಞತೆಯಾಗಿದೆ. ಶಾಲೆಯ ಭವ್ಯ ಪರಂಪರೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಮತ್ತು ನಾಳಿನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಬೆಳಕಾಗಲು ಎಲ್ಲರೂ ಒಂದಾಗಿ ಈ ಮಹತ್ಕಾರ್ಯಕ್ಕೆ ಸಾಥ್ ನೀಡಬೇಕಿದೆ.
(ದೇಣಿಗೆ ವಿವರಗಳು: ಕೆನರಾ ಬ್ಯಾಂಕ್ ಅಂಕೋಲಾ, ಖಾತೆ ಸಂಖ್ಯೆ: 03042200086978, IFSC Code: CNRB0010304)













Leave a Reply