ಅಂಕೋಲಾ :ತಾಲೂಕಿನ ಶ್ರೀ ಗಜಾನನ ಟ್ಯಾಕ್ಸಿ ಚಾಲಕರ ಹಾಗೂ ಮಾಲಕರ ಸಂಘದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದಿನಚರಿಯ ನಿರಂತರ ಸೇವೆಯ ನಡುವೆಯೂ ನಾಡು-ನುಡಿಯ ಮೇಲಿನ ಅಭಿಮಾನದಿಂದ ಟ್ಯಾಕ್ಸಿ ಸ್ಟ್ಯಾಂಡ್‌ನ ಅಶ್ವತ್ಥ ಕಟ್ಟೆಯ ಸುತ್ತಲೂ ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಹೂವಿನ ತೋರಣಗಳನ್ನು ಕಟ್ಟಿ ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು.
ಸಂಘದ ಅಧ್ಯಕ್ಷರಾದ ಗಜು ನಾಯ್ಕ ಅವರು ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಸದಸ್ಯರೆಲ್ಲರೂ ಕನ್ನಡದ ಶಾಲನ್ನು ಧರಿಸಿ, “ಕನ್ನಡಾಂಬೆಗೆ ಜೈ” ಎಂಬ ಜಯಘೋಷ ಮೊಳಗಿಸಿ, ಸಿಹಿ ಹಂಚುವ ಮೂಲಕ ಒಗ್ಗಟ್ಟು ಮತ್ತು ಏಕತೆಯನ್ನು ಸಾರಿದರು. ಕೇವಲ ಹಬ್ಬದ ಆಚರಣೆಗೆಷ್ಟೇ ಸೀಮಿತವಾಗದೆ ರಕ್ತದಾನ ಶಿಬಿರ, ಕ್ರೀಡಾಕೂಟ ಹಾಗೂ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಶ್ರೀ ಗಜಾನನ ಟ್ಯಾಕ್ಸಿ ಸಂಘವು, ಸಂಘಟನೆಯ ಶಕ್ತಿಯನ್ನು ತೋರಿಸಿಕೊಡುವ ಜತೆಗೆ ತಾಲೂಕಿನಾದ್ಯಂತ ಜನಮನ್ನಣೆ ಗಳಿಸಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಗಜು ನಾಯ್ಕ ಅವರು, ಪ್ರಸ್ತುತ ದಿನಗಳಲ್ಲಿ ಕರ್ನಾಟಕದಲ್ಲಿ ಕನ್ನಡದ ಸ್ಥಿತಿ ಚಿಂತಾಜನಕವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪರಭಾಷಿಕರ ಹಾವಳಿಯಿಂದಾಗಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಅವಕಾಶಗಳು ಕೈತಪ್ಪುತ್ತಿದ್ದು, ಸಂಕಷ್ಟದ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಇಂಗ್ಲಿಷ್ ವ್ಯಾಮೋಹದಿಂದಾಗಿ ಅನೇಕ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಸರ್ಕಾರ ತಕ್ಷಣ ಈ ಬಗ್ಗೆ ಗಮನಹರಿಸಿ ಕನ್ನಡಿಗರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ಸಂಘದ ಸದಸ್ಯ ಅಕ್ಷಯ್ ಅಂಕೋಲೆಕರ್, ರಾಜ್ಯದ ಪ್ರತಿಯೊಂದು ಅಂಗಡಿ ಮುಂಗಟ್ಟುಗಳು ಹಾಗೂ ಸರ್ಕಾರಿ ಕಚೇರಿಗಳ ನಾಮಫಲಕಗಳಲ್ಲಿ ಕನಿಷ್ಠ 60% ನಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡಲೇಬೇಕು ಎಂದು ಪ್ರತಿಪಾದಿಸಿದರು. ಕನ್ನಡ ಶಾಲೆಗಳಿಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಪ್ರೋತ್ಸಾಹ ನೀಡಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಮೈಸೂರು ರಾಜ್ಯಕ್ಕೆ “ಕರ್ನಾಟಕ” ಎಂದು ಮರುನಾಮಕರಣ ಮಾಡಿದ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರನ್ನು ನೆನಪಿಸಿಕೊಂಡರಲ್ಲದೆ, ಶಿವರಾಮ ಕಾರಂತರು ಹಾಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಂತಹ ಮಹಾನೀಯರು ಕನ್ನಡ ನಾಡು-ನುಡಿಗೆ ನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸಿದರು.
✍️ಕಿರಣ ಗಾಂವಕರ.ಅಂಕೋಲಾ













Leave a Reply