ಅಂಕೋಲಾ: ರಾಜ್ಯದಲ್ಲಿ 2021-2024ನೇ ಸಾಲಿನಲ್ಲಿ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ-2020) ಅಡಿಯಲ್ಲಿ ಪದವಿ ಹಾಗೂ ಬಿ.ಎಡ್. ಪೂರ್ಣಗೊಳಿಸಿರುವ ಸಾವಿರಾರು ಶಿಕ್ಷಕ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರದ ಶಿಕ್ಷಕರ ನೇಮಕಾತಿ ಪರೀಕ್ಷೆಗಳಲ್ಲಿ ಅವಕಾಶ ಕಲ್ಪಿಸುವಂತೆ ಒತ್ತಾಯಿಸಲಾಗಿದೆ.
ಎನ್.ಇ.ಪಿ ಪಠ್ಯಕ್ರಮದಡಿ ವಿದ್ಯಾರ್ಥಿಗಳ ವೃತ್ತಿಪರ ಕೌಶಲ್ಯ ಮತ್ತು ಜ್ಞಾನ ಹೆಚ್ಚಿಸಲು ಕೃತಕ ಬುದ್ಧಿಮತ್ತೆ, ಡಿಜಿಟಲ್ ಫ್ಲೂಯೆನ್ಸಿ ಹಾಗೂ ಹಣಕಾಸು ನಿರ್ವಹಣೆಯಂತಹ ಹೊಸ ವಿಷಯಗಳನ್ನು ಸೇರ್ಪಡಿಸಲಾಗಿತ್ತು. ಅಲ್ಲದೆ, ಹಳೆಯ ಪದ್ಧತಿಯಲ್ಲಿದ್ದ ಮೂರು ಮುಖ್ಯ ಐಚ್ಛಿಕ ವಿಷಯಗಳ ಬದಲಾಗಿ ವಿದ್ಯಾರ್ಥಿಗಳ ಆಯ್ಕೆಗೆ ಅನುಗುಣವಾಗಿ ಎರಡು ವಿಷಯಗಳನ್ನು ಮಾತ್ರ ಅಭ್ಯಾಸ ಮಾಡಲು ಅವಕಾಶ ನೀಡಲಾಗಿತ್ತು. ಈ ನಿಯಮಾವಳಿಗಳ ಪ್ರಕಾರ ರಾಜ್ಯದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಮತ್ತು ಬಿ.ಎಡ್. ಹಾಗೂ ಟಿ.ಇ.ಟಿ (TET) ಅರ್ಹತೆ ಪಡೆದುಕೊಂಡಿದ್ದಾರೆ..
ಆದರೆ, ಸರ್ಕಾರದ ಪ್ರಸ್ತುತ ನೇಮಕಾತಿ ನಿಯಮಾವಳಿಗಳು ಎನ್.ಇ.ಪಿ ಪದವೀಧರರ ಐಚ್ಛಿಕ ವಿಷಯಗಳಿಗೆ ತಕ್ಕಂತೆ ಬದಲಾಗದೇ ಉಳಿದಿವೆ. ಎರಡು ವಿಷಯಗಳನ್ನು ಮಾತ್ರ ಅಧ್ಯಯನ ಮಾಡಿದ್ದಾರೆ ಎಂಬ ಕಾರಣಕ್ಕೆ ಈ ವಿದ್ಯಾರ್ಥಿಗಳು ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದು ಹೊರಗಿಡಲಾಗಿದ್ದು, ಇದರಿಂದ ಸಾವಿರಾರು ಅರ್ಹ ಅಭ್ಯರ್ಥಿಗಳು ಉದ್ಯೋಗಾವಕಾಶದಿಂದ ವಂಚಿತರಾಗಿದ್ದಾರೆ.
ಈ ಅನ್ಯಾಯದ ವಿರುದ್ಧ ನೇಮಕಾತಿ ವಿಭಾಗಕ್ಕೆ ಸಾಂವಿಧಾನಿಕ ಆಕ್ಷೇಪಣೆಗಳನ್ನು ಸಲ್ಲಿಸಿದರೂ ಮತ್ತು ಇಲಾಖೆಯ ಸಹಾಯವಾಣಿಗೆ ಕರೆ ಮಾಡಿ ಮನವಿ ಮಾಡಿದರೂ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕಾಂಕ್ಷಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಸರ್ಕಾರ ತಕ್ಷಣವೇ ಈ ಸಮಸ್ಯೆಯನ್ನು ಪರಿಹರಿಸಿ ಎನ್.ಇ.ಪಿ ಪದವೀಧರರಿಗೆ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ವಿವಿಧ ವಿದ್ಯಾರ್ಥಿ ಸಂಘಟನೆಗಳೊಂದಿಗೆಗೂಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.













Leave a Reply