ಅಪರಿಚಿತರೊಂದಿಗೆ ಅನಗತ್ಯ ಸಂವಹನ ಬೇಡ: ಅಂಕೋಲಾದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಕಾನೂನು ಜಾಗೃತಿ

ಅಂಕೋಲಾ : ವಿದ್ಯಾರ್ಥಿಗಳಲ್ಲಿ ಜ್ಞಾನದ ಜೊತೆಗೆ ಸಮಾಜಮುಖಿ ಚಿಂತನೆ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಕಾರಣ ಶಿಕ್ಷಕನಾಗುವವನು ಶಿಸ್ತು ಸಂಯಮದಿಂದ ಜೀವನ ಮಾಡಬೇಕು ಎಂದು ಅಂಕೋಲಾ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುನಿಲ ಹುಳ್ಳೊಳ್ಳಿ ಹೇಳಿದರು.

ಅವರು ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಶೇಷಗಿರಿ ಪಿಕಳೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಸಹಯೋಗದಲ್ಲಿ ಜರುಗಿದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡುತ್ತ, ಪ್ರಶಿಕ್ಷಣಾರ್ಥಿಗಳಿಗೆ ಕಾನೂನಿನ ತಿಳುವಳಿಕೆ ಇರಬೇಕು. ಅದರಲ್ಲೂ ವಿಶೇಷವಾಗಿ ಸೈಬರ್ ಕ್ರೈಂ ಕಾನೂನುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಅಪರಿಚಿತ ವ್ಯಕ್ತಿಗಳ ಜೊತೆ ಯಾವುದೇ ರೀತಿಯ ಅನಾವಶ್ಯಕ ಸಂವಹನ ಮಾಡಬಾರದು. ನಾವು ನಡೆದುಕೊಳ್ಳುವ ರೀತಿಯು ಶಾಲೆ, ಸಂಸ್ಥೆ ಹಾಗೂ ಪಾಲಕರಿಗೆ ಸದಾ ಹೆಮ್ಮೆ ತರುವಂತಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ ವಿನಾಯಕ ಜಿ ಹೆಗಡೆಯವರು ಒಬ್ಬ ಶಿಕ್ಷಕನಾಗಿ ನಮ್ಮ ಹೆಜ್ಜೆಗಳು ಸದಾ ಜವಾಬ್ದಾರಿ ಯುತವಾಗಿರಬೇಕು. ವೃತ್ತಿಯಲ್ಲಿ ಶ್ರದ್ಧೆ ಮತ್ತು ಹೊರಗಡೆ ಸೌಜನ್ಯಯುತ ವರ್ತನೆಯ ಮೂಲಕ ಸಮಾಜದಲ್ಲಿ ಎಲ್ಲರೂ ಮೆಚ್ಚುವಂತಹ ಒಬ್ಬ ಆದರ್ಶ ಹಾಗೂ ಒಳ್ಳೆಯ ವ್ಯಕ್ತಿಯಾಗಿ ಬದುಕಬೇಕು.ಕಾರ್ಯಕ್ರಮದಲ್ಲಿ ಸುವಿಧಾ ಸಂಗಡಿಗರು ಪ್ರಾರ್ಥಿಸಿದರು. ರಂಜಿತಾ ನಾಯಕ ಸ್ವಾಗತಿಸಿದರು. ವಿನುತಾ ನಾಯಕ ವಂದಿಸಿದರು.ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಮಂಜುನಾಥ ಇಟಗಿ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ರಾಘವೇಂದ್ರ ಅಂಕೋಲೆಕರ ಉಪಸ್ಥಿತರಿದ್ದರು. ಹೊನಲು ನಾಯಕ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!