ಅಂಕೋಲಾ :ತಾಲೂಕಿನ ಬೋಗ್ರಿಬೈಲ್ ಗ್ರಾಮದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಕಬಳಿಸಲು ಕ್ರಿಮಿನಲ್ ಭೂ ಮಾಫಿಯಾ ಹೆಣೆದಿದ್ದ ಬೃಹತ್ ಅಕ್ರಮ ಜಾಲವೊಂದು ಸತತ ಹೋರಾಟದ ಫಲವಾಗಿ ಬಯಲಾಗಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 171/2026 ರಡಿ ಬಿಎನ್‌ಎಸ್ ಕಾಯ್ದೆಯ ಗಂಭೀರ ಕಲಂಗಳ ಅಡಿ ಪ್ರಕರಣ ದಾಖಲಾಗಿದೆ.
ಶೇಡಗೇರಿ ನಿವಾಸಿ ಇಮ್ತಿಯಾಜ್ ಫಕ್ರುದ್ದೀನ್ ಸೈಯದ್ ಹಾಗೂ ಅವರ ಸಹೋದರ ಯಾಕೂಬ್ ಸೈಯದ್ ಅವರಿಗೆ ತಂದೆಯಿಂದ ಬಂದಿದ್ದ ಬೋಗ್ರಿಬೈಲ ಗ್ರಾಮದ ಸರ್ವೇ ನಂಬರ್ 79 ಅ ಹಿಸ್ಸಾ 4 ರ ಜಮೀನನ್ನು ಕಬಳಿಸಲು ಈರಣ್ಣ ನೀಲಪ್ಪ ಶಿರಿಯಣ್ಣನವರ. ಅಮೃತೇಶ ನಗರ. ನವಲಗುಂದ ಧಾರವಾಡದ ಮೂಲದ ವ್ಯಕ್ತಿ ಅಂಕೋಲಾ ಉಪನೋಂದಣಿ ಕಚೇರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ತನ್ನ ಹೆಸರಿಗೆ ನೋಂದಾಯಿಸಿಕೊಂಡಿದ್ದ. ಈ ವೇಳೆ ನೈಜ ಮಾಲೀಕರ ನಕಲಿ ಆಧಾರ್ ಬಳಸಿ ಅಪರಿಚಿತ ವ್ಯಕ್ತಿಗಳನ್ನು ನಿಲ್ಲಿಸಲಾಗಿತ್ತು. ಇದಕ್ಕೆ ಮಹಾಬಲೇಶ್ವರ ಗಿರಿಯಾ ನಾಯಕ. ಮುರುಕಟ್ಟೆ. ಕುಮಟಾ ನಿವಾಸಿ ಹಾಗೂ ಮಾರುತಿ ಶಿವಯ್ಯ ಗೌಡ. ಅಂಕೋಲಾದ ಅಂಬಾರಕೊಡ್ಲಾದ ನಿವಾಸಿ ಸಾಕ್ಷಿ ನಿಂತಿದ್ದರು.
ತದನಂತರ ಅದೇ ಜಮೀನನ್ನು ದೇವಿದಾಸ ನಾಗೇಶ ಗುನಗಾ. ನಾಡುಮಾಸ್ಕೇರಿ ಕುಮಟಾ ನಿವಾಸಿ ಎಂಬುವವರಿಗೆ ಮಾರಾಟ ಮಾಡಲು ಕುಮಟಾ ಉಪನೋಂದಣಿ ಕಚೇರಿಯಲ್ಲಿ 07-04-2026 ರಂದು ದಸ್ತಾವೇಜು (KMT-01-00032-2026-27) ಮಾಡಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಪ್ರೀತಿ ದೇವಿದಾಸ ಗುನಗಾ. ನಾಡು ಮಾಸ್ಕೇರಿ ಕುಮಟಾ ನಿವಾಸಿ ಮತ್ತು ಮಹೇಶ ನಾಗಪ್ಪ ಗೌಡ. ಅಂಕೋಲಾ ತಾಲೂಕು ಸಾಕ್ಷಿದಾರರೆಂದು ನಮೂದಾಗಿದೆ.
ಆದರೆ, ಪೊಲೀಸ್ ದೂರಿನಲ್ಲಿ ಕೇವಲ “ಮಹೇಶ್ ನಾಗಪ್ಪ ಗೌಡ, ಅಂಕೋಲಾ” ಎಂದು ಮಾತ್ರ ಉಲ್ಲೇಖಿಸಲಾಗಿದ್ದು, ನಿರ್ದಿಷ್ಟ ವಿಳಾಸ ಅಥವಾ ಊರಿನ ಹೆಸರು ಬರೆಯದೇ ಇರುವುದರಿಂದ ತಾಲೂಕಿನಲ್ಲಿರುವ ‘ಮಹೇಶ್ ನಾಗಪ್ಪ ಗೌಡ’ ಎಂಬ ಹೆಸರಿನ ವ್ಯಕ್ತಿಗಳಿಗೆ ತೀವ್ರ ಇರುಸು-ಮುರುಸು ಉಂಟಾಗುವಂತಾಗಿದೆ! ಅದರಲ್ಲೂ ಅಂಕೋಲಾ ತಾಲೂಕಿನಲ್ಲಿ ಸಾಕಷ್ಟು ಬಾರಿ ಸಾರಾಯಿ ವಿರೋಧಿ ಆಂದೋಲನ ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಬಡಗೇರಿಯ ಸಾಮಾಜಿಕ ಹೋರಾಟಗಾರ ಮಹೇಶ್ ನಾಗಪ್ಪ ಗೌಡ ರವರಿಗೆ ಈ ದೂರಿನಿಂದಾಗಿ ದೊಡ್ಡ ಗೊಂದಲ ಎದುರಾಗಿದೆ. ಇವರ ತಂದೆಯ ಹೆಸರೂ ನಾಗಪ್ಪ ಗೌಡ ಆಗಿರುವುದರಿಂದ, ಪತ್ರಿಕಾ ವರದಿಗಳನ್ನು ನೋಡಿ ಅನೇಕರು ಕರೆ ಮಾಡಿ ವಿಚಾರಿಸುತ್ತಿದ್ದು, ಮಾಡದ ತಪ್ಪಿಗೆ ಅವರು ಮಾನಸಿಕ ನೆಮ್ಮದಿ ಕಳೆದುಕೊಂಡು ಪರಿತಪಿಸುವಂತಾಗಿದೆ.
ಈ ಕುರಿತು ‘ಕ್ರಾಂತಿಕಾರಿ ನ್ಯೂಸ್’ಗೆ ಪ್ರತ್ಯಕ್ಷ ಮಾಹಿತಿ ನೀಡಿರುವ ಬಡಗೇರಿಯ ಸಮಾಜಮುಖಿ ಹೋರಾಟಗಾರ ಮಹೇಶ್ ನಾಗಪ್ಪ ಗೌಡ ರವರು, ತಾವು ಈ ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ಕುಮಟಾ ಉಪನೋಂದಣಿ ಕಚೇರಿಗೆ ಹೋಗಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಹೆಸರಿನ ಸಾಮ್ಯತೆ ಉಳ್ಳ ಬೇರೊಬ್ಬ ವ್ಯಕ್ತಿ ಕಚೇರಿಗೆ ಹೋಗಿ ಸಾಕ್ಷಿ ಹಾಕಿದ್ದಾನೆಯೇ? ಅಥವಾ ತಮ್ಮ ಅರಿವಿಗೆ ಬಾರದಂತೆ ಯಾರಾದರೂ ತಮ್ಮ ಆಧಾರ್ ಕಾರ್ಡ್ ಪ್ರತಿಯನ್ನು ದುರುಪಯೋಗಪಡಿಸಿಕೊಂಡು, ಬೇರೊಬ್ಬ ನಕಲಿ ವ್ಯಕ್ತಿಯನ್ನು ನಿಲ್ಲಿಸಿ ನಕಲಿ (ಫೋರ್ಜರಿ) ಸಹಿ ಮಾಡಿಸಿ ಬಂದಿದ್ದಾರೆಯೇ ಎಂಬ ಅನುಮಾನಗಳನ್ನು ಅವರು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಯಾರಾದರೂ ತಮ್ಮ ಆಧಾರ್ ಕಾರ್ಡ್ ದುರುಪಯೋಗಪಡಿಸಿಕೊಂಡು ಈ ಅಕ್ರಮ ಎಸಗಿದ್ದರೆ ಅವರ ವಿರುದ್ಧ ಕಠಿಣ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಇಡೀ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಂಕೋಲಾ ತಾಲೂಕಿನ ಬೋಗ್ರಿಬೈಲ್ ಗ್ರಾಮದ ಮೂರು ಬೇರೆ ಬೇರೆ ಸರ್ವೇ ನಂಬರ್‌ಗಳ ಜಮೀನನ್ನು ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ ಮಾರಾಟ ಮಾಡಿರುವ ಹಿಂದೆ ಒಂದು ಅತ್ಯಂತ ವ್ಯವಸ್ಥಿತ ತಂಡದ ಬೃಹತ್ ಷಡ್ಯಂತರ ಅಡಗಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಮೊದಲ ಎರಡು ಪ್ರಕರಣಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ಮಾರಾಟ ಮಾಡಿದವರ ಮೇಲೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗದೆ ಸಂಬಂಧಪಟ್ಟ ಇಲಾಖೆಗಳು ಗಾಢ ನಿದ್ರೆಯಲ್ಲಿ ಮಲಗಿವೆ!
ಮೂರನೇ ಪ್ರಕರಣದಲ್ಲಿ ಮೂಲ ಮಾಲೀಕರ ಸತತ ಹೋರಾಟದ ಫಲವಾಗಿ ಕೊನೆಗೂ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕಚೇರಿಗೆ ಹೋಗದಿದ್ದರೂ ಕೆಲವರ ಆಧಾರ್ ಕಾರ್ಡ್‌ಗಳನ್ನು ಸಾಕ್ಷಿಗಾಗಿ ಬಳಸಿಕೊಂಡು, ನಕಲಿ ಆಧಾರ್ ಹಾಗೂ ನಕಲಿ ದಸ್ತಾವೇಜುಗಳನ್ನು ಸೃಷ್ಟಿಸಿ ಮಾರಾಟ ಪತ್ರ ಮಾಡಿಸಿರುವ ಈ ಭೂ ಮಾಫಿಯಾದವರ ಚಾಣಕ್ಷತೆಯನ್ನು ನೋಡಿದರೆ, ಇದು ಪರಿಣಿತರ ತಂಡದಿಂದಲೇ ನಡೆದ ಕೃತ್ಯ ಎಂಬುದು ಜಗಜ್ಜಾಹೀರಾಗಿದೆ. ಪ್ರಕರಣದ ಗಂಭೀರತೆಯಿದ್ದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ;
ಸರ್ಕಾರಿ ಕಚೇರಿಯಲ್ಲಿ ಇಲ್ಲಿಯವರೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ವಿಫಲವಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಭೂಮಾಪಿಯ ವಂಚಕರ ಜೊತೆಗೆ ತಾಲೂಕಿನ ಉಪನೋಂದಣಾಧಿಕಾರಿ, ಕಚೇರಿಯ ಸಿಬ್ಬಂದಿಗಳು, ನಕಲಿ ದಸ್ತಾವೇಜು ಬರೆದ ಬರಹಗಾರರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಶಾಮಿಲಾತಿ ಇಲ್ಲದೆ ಇಷ್ಟೊಂದು ದೊಡ್ಡ ಮಟ್ಟದ ಅಕ್ರಮ ನಡೆಯಲು ಸಾಧ್ಯವೇ ಇಲ್ಲ ಎಂಬ ಅನುಮಾನವನ್ನು ಅಲ್ಲಗಳೆಯುವಂತಿಲ್ಲ..
ಅಂಕೋಲಾದಲ್ಲಿ ದಿನೇ ದಿನೇ ಭಾರಿ ಸದ್ದು ಮಾಡುತ್ತಿರುವ ಬೋಗ್ರಿಬೈಲ್ ಪ್ರಕರಣವು ಸಾರ್ವಜನಿಕರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಮೊದಲಿನ ಎರಡು ಪ್ರಕರಣಗಳಲ್ಲಿ ನಕಲಿ ವ್ಯಕ್ತಿಗಳ ಮೇಲೆ ಹಾಗೂ ಅಧಿಕಾರಿಗಳ ಮೇಲೆ ಏಕೆ ಇನ್ನುವರೆಗೆ ಪ್ರಕರಣ ದಾಖಲಾಗಿಲ್ಲ ಎಂದು ಜನಸಾಮಾನ್ಯರು ಬಹಿರಂಗವಾಗಿಯೇ ಆಡಿಕೊಳ್ಳುತ್ತಿದ್ದಾರೆ. ಪೊಲೀಸರು ಹಾಗೂ ಸರ್ಕಾರ ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾವೇರಿ ತಂತ್ರಾಂಶದ ಬಯೋಮೆಟ್ರಿಕ್ಸ್ ತಪಾಸಣೆ ನಡೆಸಿ, ಈ ಭೂ ಮಾಫಿಯಾ ಅಟ್ಟಹಾಸಕ್ಕೆ ತಕ್ಷಣವೇ ಮುಕ್ತಿ ನೀಡಬೇಕಿದೆ.
✍️ಕಿರಣ ಗಾಂವಕರ. ಅಂಕೋಲಾ.













Leave a Reply