ಅಂಕೋಲಾ ಉಪನೋಂದಣಿ ಕಚೇರಿ ತಹಶೀಲ್ದಾರ ಕಚೇರಿಗೆ ಸ್ಥಳಾಂತರ:
ಅಂಕೋಲಾದ ಸಾರ್ವಜನಿಕರಿಗೆ ಸದಾ ಗಿಜಿಗುಡುವ ಉಪನೋಂದಣಿ ಕಚೇರಿಯು ದಿನಾಂಕ 10/08/2026 ರಂದು ದಂಡಾಧಿಕಾರಿಗಳ ಕಚೇರಿಯ 2ನೇ ಮಹಡಿಯ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ತನ್ನ ನೂತನ ಕಾರ್ಯಾರಂಭವನ್ನು ಮಾಡಿದೆ. ಈ ಉದ್ಘಾಟನಾ ಸಮಾರಂಭಕ್ಕೆ ಉತ್ತರ ಕನ್ನಡ ಜಿಲ್ಲೆಯ ಉಪನೋಂದಣಾಧಿಕಾರಿ ಫಣೀಂದ್ರ ಹಾಗೂ ತಾಂತ್ರಿಕ ಇಂಜಿನಿಯರಿಂಗ್ ವಿಭಾಗದ ಹಜರತ್ ಅಲಿ ಆಗಮಿಸಿದ್ದರು. ಅಂಕೋಲಾದ ಉಪನೋಂದಣಾಧಿಕಾರಿ ಕುಂತಿಬಾಯಿ, ಕಂಪ್ಯೂಟರ್ ಆಪರೇಟರ್‌ಗಳಾದ ಶೈಲಾ ಭಟ್ ಮತ್ತು ಸಂತೋಷ್ ರೈಕರ್. ದಿವ್ಯಶ್ರೀ ನಾಯಕ ಕಾರ್ಯಕ್ರಮದ ಸಿದ್ಧತೆಗಳನ್ನು ವಹಿಸಿಕೊಂಡಿದ್ದು,

ಹಲವು ಸಾರ್ವಜನಿಕರು, ದಸ್ತುಬರಹಗಾರರು ಹಾಗೂ ವಕೀಲರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು.ಆದರೆ ಈ ಹೊಸ ಹೆಜ್ಜೆಯ ಹಿಂದಿನ ದಿನಗಳನ್ನು ಮೆಲುಕು ಹಾಕಿದರೆ, ಈ ಹಿಂದೆ ಹಳೆಯ ಮುನ್ಸಿಪಾಲಿಟಿ ಕಚೇರಿಯ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಈ ಕಚೇರಿ ಸಾರ್ವಜನಿಕರಿಗೆ ನಿರಂತರ ಕಿರಿಕಿರಿ ಉಂಟುಮಾಡುತ್ತಿತ್ತು. ಮುಖ್ಯವಾಗಿ ಹಿರಿಯ ನಾಗರಿಕರು ಮೆಟ್ಟಿಲುಗಳನ್ನು ಹತ್ತಿ ಹೋಗಲು ಪಡುತ್ತಿದ್ದ ಹರಸಾಹಸ ಒಂದೆಡೆಯಾದರೆ, ಕಚೇರಿಯಲ್ಲಿ ಕನಿಷ್ಠ ಭದ್ರತೆಗೆ ಸಿಸಿಟಿವಿ ಕ್ಯಾಮೆರಾಗಳೇ ಇರಲಿಲ್ಲ. ಸಿಸಿಟಿವಿ ಇಲ್ಲದ ಈ ವಾತಾವರಣವನ್ನೇ ಬಂಡವಾಳ ಮಾಡಿಕೊಂಡ ಭೂ ಮಾಫಿಯಾ ಮತ್ತು ನಕಲಿ ವ್ಯಕ್ತಿಗಳ ತೀವ್ರ ಕಣ್ಣು ಈ ಕಚೇರಿಯ ಮೇಲೆ ಬಿದ್ದಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಎಕರೆಗಟ್ಟಲೆ ಆಸ್ತಿಯನ್ನು ನಕಲಿ ಅಸಾಮಿಗಳ ಹೆಸರಿಗೆ ನೋಂದಾಯಿಸಿಕೊಳ್ಳುವ ದೊಡ್ಡ ಜಾಲವೇ ಇಲ್ಲಿ ಸಲೀಸಾಗಿ ನಡೆದುಹೋಗಿತ್ತು. ಈ ಅಕ್ರಮ ಘಟನೆ ಬೆಳಕಿಗೆ ಬಂದಾಗಿನಿಂದಲೂ ಅಧಿಕಾರಿಗಳು ನೆಮ್ಮದಿಯ ನಿದ್ದೆಯನ್ನೇ ಕಂಡಿರಲಿಲ್ಲ.ಇಷ್ಟೇ ಅಲ್ಲದೆ, ನಕಲಿ ದಸ್ತಾವೇಜುಗಳ ಕಂಟಕದಿಂದ ಅಧಿಕಾರಿಗಳು ಕಂಗಾಲಾಗಿದ್ದ ಬೆನ್ನಲ್ಲೇ, ಕಚೇರಿಯ ಸಿಬ್ಬಂದಿಗಳ ಮೇಲೆ ‘ತಳ್ಳು ಅರ್ಜಿ’ಗಳ ಬಾಣಗಳು ಶುರುವಾಗಿದ್ದವು. ವೈಯಕ್ತಿಕ ದ್ವೇಷಕ್ಕೋ ಅಥವಾ ಇನ್ಯಾವುದೋ ಗೂಢ ಉದ್ದೇಶಕ್ಕೋ ಸಮಯ ನೋಡಿ ಹೊಂಚು ಹಾಕುತ್ತಿದ್ದ ಕೆಲವರು, ವಕೀಲರ ಹೆಸರನ್ನು ಬಳಸಿಕೊಂಡು ಸಿಬ್ಬಂದಿಯ ಜಾತಕವನ್ನೇ ತೆರೆದಿಡುವಂತೆ ದೂರು ಅರ್ಜಿಯನ್ನು ಸಿದ್ಧಪಡಿಸಿದ್ದರು. ಆದರೆ ಕುತೂಹಲಕಾರಿ ವಿಷಯ ಎಂದರೆ, ಆ ಅರ್ಜಿಯನ್ನು ಬರೆದದ್ದು ತಾವೇ ಅಲ್ಲ ಎಂದು ಸಂಬಂಧಪಟ್ಟ ವಕೀಲರೇ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ , ಈ ಅನಾಮಿಕ ತಂತ್ರದಿಂದಾಗಿ ಸಿಬ್ಬಂದಿಗಳಿಗೆ ಅನಗತ್ಯ ತಲೆಬಿಸಿ ಉಂಟಾಗಿತ್ತು.ಈ ಎಲ್ಲಾ ಹಳೆಯ ಅವಾಂತರಗಳು ಮತ್ತು ಮಾನಸಿಕ ಒತ್ತಡಗಳ ನಡುವೆಯೇ ಹೊಸ ಕಟ್ಟಡಕ್ಕೆ ಕಚೇರಿ ಸ್ಥಳಾಂತರಗೊಂಡಿರುವುದು ಆಶಾದಾಯಕ ಬೆಳವಣಿಗೆಯಾದರೂ, ಆತಂಕ ಮಾತ್ರ ಇನ್ನೂ ಸಂಪೂರ್ಣವಾಗಿ ದೂರವಾಗಿಲ್ಲ.
ಉದ್ಘಾಟನಾ ಸಮಾರಂಭದಕ್ಕೆ ಆಗಮಿಸಿ ಮಾತನಾಡಿದ ಮಾಹಿತಿ ಹಕ್ಕು ಕಾರ್ಯಕರ್ತ ಅಲಗೇರಿಯ ಗಜಾನನ ಅನಂತ ಶೆಟ್ಟಿ ಅವರು, ಕಚೇರಿ ಹೊಸ ಕಟ್ಟಡಕ್ಕೆ ಬಂದಿರುವುದು ಖುಷಿಯ ವಿಚಾರವಾದರೂ ಇಲ್ಲೂ ಇನ್ನೂ ಸಿಸಿಟಿವಿ ಅಳವಡಿಸಿಲ್ಲದಿರುವುದನ್ನು ಮುನ್ನೆಲೆಗೆ ತಂದರು. ಹಳೆಯ ನಕಲಿ ದಸ್ತಾವೇಜು ಪ್ರಕರಣದಿಂದ ಅಧಿಕಾರಿಗಳು ಈಗಾಗಲೇ ತೀವ್ರ ಒತ್ತಡದಲ್ಲಿದ್ದಾರೆ. ಅದಲ್ಲದೇ ಎರಡನೇ ಮಹಡಿಗೆ ಬರಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿರುವ ಲಿಫ್ಟ್ ಆಗಾಗ ಕೆಟ್ಟು ನಿಲ್ಲುತ್ತಿದ್ದು, ತಾಂತ್ರಿಕ ದೋಷದಿಂದ ಪದೇ ಪದೇ ಸ್ಥಗಿತಗೊಳ್ಳುತ್ತಿದ್ದು ಹಲವಾರು ಬಾರಿ ನೋಡಿದ್ದೇನೆ. ಇದರಿಂದಾಗಿ ಹಿರಿಯ ನಾಗರಿಕರು ಮತ್ತು ಅಂಗವಿಕಲರು ತೀವ್ರ ತೊಂದರೆ ಅನುಭವಿಸಬೇಕಾಗಿದೆ ಎಂದರು . ಆದ್ದರಿಂದ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ತಕ್ಷಣವೇ ಸಿಸಿಟಿವಿ ಅಳವಡಿಸಬೇಕು ಮತ್ತು ಲಕ್ಷಾಂತರ ರೂಪಾಯಿ ವೆಚ್ಚದ ಲಿಫ್ಟ್ ಆಗಾಗ ತಾಂತ್ರಿಕ ದೋಷದಿಂದ ತೊಂದರೆಗಿಡಾಗುತ್ತಿದೆ. ಸದರಿ ಸಮಸ್ಯೆಯನ್ನು ಶೀಘ್ರವಾಗಿ ಸರಿಪಡಿಸಲು ಸಾರ್ವಜನಿಕರ ಒತ್ತಾಯ ಕೇಳಿಬಂದಿದೆ.
✍️ಕಿರಣ ಗಾಂವಕರ. ಅಂಕೋಲಾ












Leave a Reply