​ಶಾಸಕರ ಸಲಹೆಯಿಂದ ಯಶಸ್ವಿ ಆಡಳಿತದವರೆಗೆ: ಸಾಧನೆಯ ಹಾದಿ ನೆನೆದು ಕೃತಜ್ಞತೆ ಸಲ್ಲಿಸಿದ ರಾಮು ಗುನಗಿ.

​ಅಂಕೋಲಾ: ಅಧಿಕಾರವೆಂದರೆ ಕೇವಲ ಸಭೆಗಳನ್ನು ನಡೆಸಿ ಆದೇಶ ನೀಡುವುದಷ್ಟೇ ಅಲ್ಲ, ಬದಲಿಗೆ ತನ್ನಡಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯ ತುಂಬಿ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾ ಅಭಿವೃದ್ಧಿಯ ಹಾದಿಯಲ್ಲಿ ಎಲ್ಲರನ್ನೂ ಜೊತೆಗೂಡಿಸಿಕೊಂಡು ಸಾಗುವುದಾಗಿದೆ ಎಂಬುದನ್ನು ಕಾರ್ಯರೂಪದಲ್ಲಿ ಸಾಬೀತುಪಡಿಸಿದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ರಾಮು ಗುನಗಿ ಅವರಿಗೆ ತಾಲೂಕು ಪಂಚಾಯತಿಯಲ್ಲಿ ಬುಧವಾರದಂದು ಅತ್ಯಂತ ಭಾವಪೂರ್ಣ ಹಾಗೂ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು..

ತಾಲೂಕು ಪಂಚಾಯತಿ ಸಭಾಭವನದಲ್ಲಿ ನಡೆದ ಈ ಸುಂದರ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಂಘಟನೆಗಳ ಪ್ರಮುಖರು ಭಾಗವಹಿಸಿ, ರಾಮು ಗುನಗಿ ಅವರ ಕೇವಲ ಒಂದು ವರ್ಷದ ಅವಧಿಯ ಅವಿಸ್ಮರಣೀಯ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.​ಕಾರ್ಯಕ್ರಮದಲ್ಲಿ ಶುಭಕೋರಿ ಮಾತನಾಡಿದ ಬೊಬ್ರುವಾಡ ಪಿಡಿಓ ನಾಗೇಂದ್ರ ನಾಯ್ಕ ಅವರು, ರಾಮು ಗುನಗಿ ಅವರ ಸತ್ಯನಿಷ್ಠೆ, ಸಮಯಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳು ತಾಲೂಕಿನ ಗ್ರಾಮ ಪಂಚಾಯತಿಗಳ ಅಭಿವೃದ್ಧಿಗೆ ದೊಡ್ಡ ಬಲ ನೀಡಿದ್ದವು ಎಂದು ಬಣ್ಣಿಸಿದರು. ಅವರ ದಕ್ಷ ಆಡಳಿತದಡಿಯಲ್ಲಿ ಕೆಲಸ ಮಾಡಿ ಪಡೆದ ಅನುಭವಗಳು ತಮ್ಮೆಲ್ಲರ ಮುಂದಿನ ಸೇವಾ ಜೀವನಕ್ಕೆ ಅತ್ಯುತ್ತಮ ದಾರಿದೀಪವಾಗಲಿವೆ ಎಂದು ಅಭಿಪ್ರಾಯಪಟ್ಟರು.

ಉತ್ತರ ಕನ್ನಡ ಜಿಲ್ಲಾ ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಗಿರೀಶ್ ನಾಯಕ್, ರಾಮು ಗುನಗಿ ಅವರು ಮೂಲತಃ ತಾಂತ್ರಿಕ ವಿಭಾಗದಿಂದ ಬಂದವರಾಗಿದ್ದರೂ ಆಡಳಿತ ವಿಭಾಗದಲ್ಲಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದು ನಿಜಕ್ಕೂ ಶ್ಲಾಘನೀಯ ಎಂದರು. ತಾಲೂಕಿನ ಎಲ್ಲ ಪಿಡಿಒಗಳನ್ನು ಒಂದೇ ಕಣ್ಣಿನಿಂದ ನೋಡುತ್ತಾ, ಸದಾ ಸೌಹಾರ್ದಯುತವಾಗಿ ಮಾರ್ಗದರ್ಶನ ನೀಡಿದ್ದರಿಂದ ಅಂಕೋಲಾದಲ್ಲಿ ಯಾವುದೇ ರೀತಿಯ ಆಡಳಿತಾತ್ಮಕ ತೊಡಕುಗಳು ಎದುರಾಗಲಿಲ್ಲ ಎಂದು ಸ್ಮರಿಸಿದರು.

ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಪಾಂಡುರಂಗ ಗೌಡ ಮಾತನಾಡಿ, ಗುನಗಿ ಅವರು ಮಿತಭಾಷಿ ಹಾಗೂ ಮೃದು ಸ್ವಭಾವ ಹೊಂದಿದ ಶ್ರೇಷ್ಠ ಅಧಿಕಾರಿ ಎಂದರು. ಇದೇ ವೇಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ನೀಲಕಂಠ ನಾಯಕ್, ಸರೋಜ ನಾಯಕ್ ಹಾಗೂ ಸಹನಾ ನಾಯಕ್ ಅವರು ಸಹ ಅನಿಸಿಕೆ ಹಂಚಿಕೊಂಡು ಶುಭ ಹಾರೈಸಿದರು.

ಈ ವೇಳೆ ಪಿಡಿಓ ಕ್ಷೇಮಾಭಿವೃದ್ಧಿ ತಾಲೂಕು ಸಂಘದ ವತಿಯಿಂದ ರಾಮು ಗುನಗಿ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆಯಾಗಿ ಸುಂದರ ದೇವರ ಮಂಟಪವನ್ನು ನೀಡಿ ಗೌರವಿಸಲಾಯಿತು. ಅಂತೆಯೇ, ತಾಲೂಕು ಲೋಕೋಪಯೋಗಿ (ರಿ) ನೋಂದಾಯಿತ ಗುತ್ತಿಗೆದಾರರ ಸಂಘದ ವತಿಯಿಂದಲೂ ಹಣ್ಣು-ಪುಷ್ಪ, ಶಾಲು ಹಾಗೂ ಸ್ಮರಣಿಕೆ ನೀಡಿ ಅತ್ಯಂತ ವೈಭವದಿಂದ ಸನ್ಮಾನಿಸಲಾಯಿತು​ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ರಾಮು ಗುನಗಿ ಅವರು, ಕ್ಷೇತ್ರದ ಶಾಸಕರಾದ ಸತೀಶ್ ಸೈಲ್ ಅವರ ಸಲಹೆಯ ಮೇರೆಗೆ ಈ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೆ. ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದಿಂದ ಬಂದವನಾಗಿದ್ದರಿಂದ ನನಗೆ ತಾಂತ್ರಿಕ ಜ್ಞಾನ ಇತ್ತೇ ವಿನಃ ಆಡಳಿತಾತ್ಮಕ ಅನುಭವ ಇರಲಿಲ್ಲ. ಆದರೆ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಮತ್ತು ಅಧಿಕಾರಿಗಳ ಸಹಕಾರದಿಂದ ಆಡಳಿತಾತ್ಮಕ ವಿಷಯಗಳ ಸಂಬಂಧಿಸಿದಂತೆ ಅತ್ಯುತ್ತಮ ಜ್ಞಾನ ಗಳಿಸಲು ಅವಕಾಶ ದೊರೆಯಿತು ಎಂದು ಕೃತಜ್ಞತೆ ಸಲ್ಲಿಸಿದರು.​

ಇದೇ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಕೋಲಾ ತಾಲೂಕು ಪಂಚಾಯತಿಯ ನೂತನ ಕಾರ್ಯನಿರ್ವಾಹಕ ಅಧಿಕಾರಿ (ಇಒ) ರಾಮು ಜಿ. ಅಗ್ನಿ ಅವರು, ತಮಗೆ ಈ ಹಿಂದೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಸೇರಿದಂತೆ ಬಾಗಲಕೋಟೆ ಮತ್ತು ಜಮಖಂಡಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ ಎಂದರು. ತಾನು ಕಾರ್ಯನಿರ್ವಹಿಸಿದ ಸ್ಥಳಗಳಲ್ಲಿ ಹಾಗೂ ಪ್ರಸ್ತುತ ತಾಲೂಕಿನಲ್ಲಿ ಪ್ರಾದೇಶಿಕ ಭಿನ್ನತೆ ಮತ್ತು ಅಭಿವೃದ್ಧಿಯ ತಾರತಮ್ಯತೆ ಇರುವುದು ಸಹಜ. ಆದಾಗ್ಯೂ ಸಿಬ್ಬಂದಿ ಹಾಗೂ ಪ್ರತಿಯೊಬ್ಬರ ಸಹಕಾರದೊಂದಿಗೆ ತಾಲೂಕಿನ ಅಭಿವೃದ್ಧಿಗೆ ಕೈಜೋಡಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ಕರೆ ನೀಡಿದರು.​.

ಕಾರ್ಯಕ್ರಮದ ಆರಂಭದಲ್ಲಿ ಪಿಡಿಒ ಲೀಲಾ ಆಗೇರ ಪ್ರಾರ್ಥಿಸಿದರು. ಬೋಬ್ರುವಾಡ ಪಿಡಿಒ ನಾಗೇಂದ್ರ ನಾಯ್ಕ ಕಾರ್ಯಕ್ರಮ ನಿರೂಪಿಸಿದರೆ, ಪಿಡಿಒ ಮಹದೇವ್ ಗೌಡ ಸ್ವಾಗತಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಿರೀಶ್ ತಳವಾರ್ ಅವರು ರಾಮು ಗುನಗಿ ಅವರೊಂದಿಗಿನ ಸೇವಾ ಅನುಭವಗಳನ್ನು ಹಂಚಿಕೊಂಡು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ್ ಸೇರಿದಂತೆ ಗುತ್ತಿಗೆದಾರ ಸಂಘದ ಪದಾಧಿಕಾರಿಗಳು.ಹಾಗೂ ತಾಲೂಕಿನ ವ್ಯಾಪ್ತಿಯಲ್ಲಿರುವ ಬಹುತೇಕ ಗ್ರಾಮ ಪಂಚಾಯತಿಗಳ ಪಿಡಿಓಗಳು, ಸಿಬ್ಬಂದಿಗಳು ಸದರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅಂಕೋಲಾದ ನೂತನ ಕಾರ್ಯನಿರ್ವಹಣಾಧಿಕಾರಿ ರಾಮು.ಜಿ ಅಗ್ನಿ.

✍️ಕಿರಣ ಗಾಂವಕರ

Leave a Reply

Your email address will not be published. Required fields are marked *

error: Content is protected !!