ಅಂಕೋಲಾ:ತಾಲೂಕಿನಲ್ಲಿ ಸಹಸ್ರಾರು ಮಕ್ಕಳ ಶಿಕ್ಷಣದ ಹಸಿವನ್ನು ನೀಗಿಸುವ ಜೊತೆಗೆ ಅವರಲ್ಲಿ ನಾಯಕತ್ವದ ಗುಣವನ್ನು ಬೆಳೆಸಿ ಜೀವನದ ಯಶಸ್ಸಿಗೆ ಕಾರಣವಾದ ಜೈಹಿಂದ್ ಹೈಸ್ಕೂಲ್ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು ಶಾಲೆಯ 125 ನೇ ವರ್ಷದ ಸಂಭ್ರಮವನ್ನು ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಜೈಹಿಂದ್ ಹೈಸ್ಕೂಲ್ ಶತಮಾನೋತ್ತರ ಬೆಳ್ಳಿಪರ್ವ ಆಚರಣಾ ಸಮಿತಿಯ ಗೌರವಾಧ್ಯಕ್ಷ ಮುಂಬೈನ ಕೋಹಿನೂರ್ ಪಂಚತಾರಾ ಹೋಟೆಲಿನ ಸಿಈಓ ಮುಕುಂದ ಕಾಮತ್ ಅವರು ಹೇಳಿದರು..
ಶಾಲೆಯ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರುಈ ವರ್ಷದ ಡಿಸೆಂಬರ್ 25ರಿಂದ 27 ರ ವರೆಗೆ ಮೂರು ದಿನಗಳ ಕಾಲ ಶತಮಾನೋತ್ತರ ಬೆಳ್ಳಿಪರ್ವ ನಡೆಯಲಿದೆ, ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಎಲ್ಲ ರೀತಿಯ ತಯಾರಿ ನಡೆಸಲಾಗುತ್ತಿದ್ದು ಶಾಲೆಯಲ್ಲಿ ಕಲಿತು ದೇಶ,ವಿದೇಶಗಳಲ್ಲಿ ನೆಲೆಸಿರುವ ಶಾಲೆಯ ಹಳೆಯ ವಿದ್ಯಾರ್ಥಿಗಳ ಉಪಸ್ಥಿತಿ ಮತ್ತು ಎಲ್ಲ ರೀತಿಯ ಸಹಕಾರದ ಅಗತ್ಯತೆ ಇದೆ, ಜೈಹಿಂದ್ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಸಿಗುತ್ತಿದ್ದ ನಾಯಕತ್ವದ ಪಾಠದಿಂದಲೇ ಇಂದು ಹಲವಾರು ಜನರು ಜೀವನದಲ್ಲಿ ಯಶಸ್ವಿಯಾಗಿದ್ದು ವಿಶೇಷ ಸಂದರ್ಭಗಳಲ್ಲಿ ಶಾಲೆಯ ಅಭಿವೃದ್ಧಿಗೆ ಜೊತೆಯಾಗಬೇಕಿದೆಎಂದು ಹೇಳಿದರು.
ಜೈಹಿಂದ್ ಎಜ್ಯುಕೇಶನ್ ಸಂಸ್ಥೆಯ ಗೌರವಾಧ್ಯಕ್ಷ ಪದ್ಮನಾಭ ಪ್ರಭು ಮಾತನಾಡಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ದಿನಕರ ದೇಸಾಯಿ, ಪ್ರೇಮಾ ಪಿಕಳೆ ಮೊದಲಾದವರಿಗೆ ಶಿಕ್ಷಣ ನೀಡಿರುವ ಶಿಕ್ಷಣ ಸಂಸ್ಥೆಯನ್ನು 1896 ರಲ್ಲಿ ಶಿಕ್ಷಣ ತಜ್ಞ ವಾಮನರಾವ್ ದುಬಾಶಿ ಅವರಿಂದ ಸ್ಥಾಪಿಸಿದ್ದು ನಂತರ ಕಿಂಗ್ ಎಡ್ವರ್ಡ್ ಹೈಸ್ಕೂಲ್ ಎಂದು ನಾಮಕರಣಗೊಂಡು ಸ್ವಾತಂತ್ರ್ಯದ ನಂತರ ಜೈಹಿಂದ್ ಹೈಸ್ಕೂಲ್ ಹೆಸರಿನೊಂದಿಗೆ ಶಿಕ್ಷಣ ಸೇವೆ ನೀಡುತ್ತ ಬಂದಿದೆ ಇಂದಿಗೂ ಅತಿ ಕಡಿಮೆ ಶುಲ್ಕದೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಶಾಲೆ ಹೆಸರು ಪಡೆದಿದ್ದು ಶಾಲೆಯಲ್ಲಿ ಓದಿರುವ ವಿದ್ಯಾರ್ಥಿಗಳು ಐ.ಎ.ಎಸ್ ನಂತ ಉನ್ನತ ಹುದ್ದೆಯ ಜೊತೆಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.
ಜೈಹಿಂದ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಂಜಯ ಕಾಮತ್ ಮಾತನಾಡಿ ಶತಮಾನೋತ್ತರ ಬೆಳ್ಳಿಪರ್ವ ಕಾರ್ಯಕ್ರಮದ ಮೊದಲ ದಿನ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಎರಡನೆಯ ದಿನ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಸಾಹಿತ್ಯ ಕಮ್ಮಟ ನಡೆಯಲಿದೆ ನಂತರ ಶಾಲಾ ವಿದ್ಯಾರ್ಥಿಗಳು ಮತ್ತು ಪೂರ್ವ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಮೂರನೇ ದಿನ ಸಮಾರೋಪ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಪೂರ್ವ ವಿದ್ಯಾರ್ಥಿಗಳಾದ ಭಾಸ್ಕರ ನಾರ್ವೇಕರ, ಡಿ.ಎನ್.ನಾಯಕ,ಗಿರೀಶ ನಾಯಕ,ಜೈಹಿಂದ್ ಹೈಸ್ಕೂಲ್ ಮುಖ್ಯಾಧ್ಯಾಪಕ ಪ್ರಭಾಕರ ಬಂಟ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ಕೋರಿದರು.ಜೈಹಿಂದ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ದಾಮೋದರ ಪ್ರಭು ಪ್ರಮುಖರುಗಳಾದ ಆರ್.ಎಸ್.ಕಾಮತ್,ವಿಠ್ಠಲ ಆಗೇರ ಉಪಸ್ಥಿತರಿದ್ದರು.
✍️ಕಿರಣ ಗಾಂವಕರ. ಕ್ರಾಂತಿಕಾರಿ ನ್ಯೂಸ್. ಅಂಕೋಲಾ.













Leave a Reply