ಅಂಕೋಲಾದಲ್ಲಿ ಕೌಟುಂಬಿಕ ಕಾರ್ಯಕ್ರಮದ ವೇಳೆ ರಂಪಾಟ: ದೌರ್ಜನ್ಯ, ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಪುಂಡರ ವಿರುದ್ಧ FIR ದಾಖಲು!

​ಅಂಕೋಲಾ:ಖಾಸಗಿ ಹೋಟೇಲ್‌ನಲ್ಲಿ ನಡೆದ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬರ ಮೇಲೆ ಬಿಯರ್ ಬಾಟಲಿಯಿಂದ ಭೀಕರ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.​ಬೇಲೆಕೇರಿ ನಿವಾಸಿ ಲಕ್ಷ್ಮೀಕಾಂತ ಅನಂತ ನಾಯಕ ಎಂಬುವವರು ನೀಡಿರುವ ದೂರಿನನ್ವಯ ಗಣೇಶ, ರಜತ ಹಾಗೂ ರಕ್ಷತ ಎಂಬ ಮೂವರು ಆರೋಪಿಗಳ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (FIR) ದಾಖಲಾಗಿದೆ.​

ದೂರಿನಲ್ಲೇನಿದೆ?:ದೂರುದಾರರಾದ ಲಕ್ಷ್ಮೀಕಾಂತ ಅವರು ದಿನಾಂಕ: ೦೮-೦೮-೨೦೨೬ ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶದ ಪ್ರಕಾರ, ದಿನಾಂಕ: ೦೭-೦೮-೨೦೨೬ ರಂದು ರಾತ್ರಿ ೮:೩೦ ಗಂಟೆ ಸುಮಾರಿಗೆ ತಾನು ತನ್ನ ಕುಟುಂಬದವರೊಂದಿಗೆ ಹತ್ತಿರದ ಸಂಬಂಧಿಯ ಮಗಳು ಆರಾಧ್ಯ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಗಾಗಿ ಅಂಕೋಲಾ ಇಂಟರ ನ್ಯಾಷನಲ್ ಹೋಟೇಲ್‌ಗೆ ರಾತ್ರಿ ೮:೩೦ರ ಸುಮಾರಿಗೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿದ ನಂತರ ರಾತ್ರಿ ೧೦:೩೦ರ ಸುಮಾರಿಗೆ ತಾವು ಹೋಟೇಲ್‌ನ ಕೆಳಭಾಗದಲ್ಲಿದ್ದ ಶೌಚಾಲಯಕ್ಕೆ ತೆರಳಿದ್ದಾಗ, ಅಲ್ಲಿ ಸುಮಾರು ೧೦ ರಿಂದ ೧೨ ಜನರ ಗುಂಪು ಮದ್ಯಪಾನ ಮಾಡುತ್ತಾ ಕುಳಿತಿದ್ದರು.

ಶೌಚಾಲಯದಿಂದ ಹೊರಬಂದು ಪರಿಚಯಸ್ಥರಾದ ಉಜ್ವಲ ಅವರೊಂದಿಗೆ ಮಾತನಾಡಿ ಹೊರಬರುವಾಗ, ತಮ್ಮ ಪುತ್ರಿ ವರಾಹ ಕೂಡ ಒಳಗೆ ಬಂದಿದ್ದಳು. ಈ ವೇಳೆ ಮಗಳನ್ನು ಉದ್ದೇಶಿಸಿ “ಒಳಗೆ ಏಕೆ ಬಂದೆ?” ಎಂದು ಸಹಜವಾಗಿ ಪ್ರಶ್ನಿಸಿದ್ದಾಗಿ ಅಲ್ಲಿ ಮದ್ಯಪಾನ ಮಾಡುತ್ತಾ ಕುಳಿತಿದ್ದವರ ಪೈಕಿ ಹಸಿರು ಬಣ್ಣದ ಟಿ-ಶರ್ಟ್ ಧರಿಸಿದ್ದ ವ್ಯಕ್ತಿ, ಏಕಾಏಕಿ ತಮ್ಮ ವಿರುದ್ಧ ಆಕ್ರೋಶಗೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದನೆಂದು ದೂರುದಾರರು ಉಲ್ಲೇಖಿಸಿದ್ದಾರೆ.​

ಬಾಟಲಿಯಿಂದ ಹಲ್ಲೆ, ಜೀವ ಬೆದರಿಕೆ* :ಮಾತಿಗೆ ಮಾತು ಬೆಳೆದಂತೆಹಸಿರು ಬಣ್ಣದ ಟಿ-ಶರ್ಟ್ ಧರಿಸಿದ್ದ ವ್ಯಕ್ತಿಗೆ ಬೆಂಬಲವಾಗಿ ನಿಂತ ಪ್ಯಾರೋಟ್ ಗ್ರೀನ್ ಟಿ-ಶರ್ಟ್ ಧರಿಸಿದ್ದ ವ್ಯಕ್ತಿ ಹೊಡೆಯಲು ಬಂದಿದ್ದು, ಅಲ್ಲಿಯೇ ಇದ್ದ ಹಸಿರು ಬಣ್ಣದ ಟಿ-ಶರ್ಟ್ ಧರಿಸಿದ್ದ ವ್ಯಕ್ತಿ ಬಾಟಲಿಯಿಂದ ತಮ್ಮ ಕೈಗೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಾನೆ. ಇವರಿಗೆ ಬೆಂಬಲವಾಗಿ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿದ್ದ ಇನ್ನೊಬ್ಬ ವ್ಯಕ್ತಿಯೂ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.​ನಂತರ ವಿಚಾರಿಸಿದಾಗ ಹಸಿರು ಟಿ-ಶರ್ಟ್ ಧರಿಸಿದ್ದಾತ ಗಣೇಶ, ಪ್ಯಾರೋಟ್ ಗ್ರೀನ್ ಟಿ-ಶರ್ಟ್ ಧರಿಸಿದ್ದಾತ ರಜತ ಹಾಗೂ ಬಿಳಿ ಟಿ-ಶರ್ಟ್ ಧರಿಸಿದ್ದಾತ ರಕ್ಷತ ಎಂದು ತಿಳಿದುಬಂದಿದೆ.

ಗಲಾಟೆಯನ್ನು ಬಿಡಿಸಲು ತಕ್ಷಣ ಮಧ್ಯಪ್ರವೇಶಿಸಿದ ತಮ್ಮ ಸಹೋದರ ಉಮಾಕಾಂತ ಅವರ ಮೇಲೆಯೂ ಆರೋಪಿಗಳ ಗುಂಪು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.​ಘಟನೆಯಲ್ಲಿ ಗಾಯಗೊಂಡ ಲಕ್ಷ್ಮೀಕಾಂತ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡ ನಂತರ ಅಂಕೋಲಾ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪಿಎಸ್‌ಐ ಗುರುನಾಥ ಹಾದಿಮನಿ ಅವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

✍️ಕ್ರಾಂತಿಕಾರಿ ನ್ಯೂಸ್.ಅಂಕೋಲಾ.

Leave a Reply

Your email address will not be published. Required fields are marked *

error: Content is protected !!