ಅಂಕೋಲಾ: ತಾಲ್ಲೂಕಿನಲ್ಲಿ ದಿನಾಂಕ 26/08/2026ರಂದು ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಯುವಕರ ಗುಂಪೊಂದು ಪ್ಯಾಲೆಸ್ಟೈನ್ ಧ್ವಜ ಹಾರಿಸುತ್ತ ಇಸ್ರೇಲ್ ವಿರುದ್ಧ ಆಕ್ರೋಶಭರಿತವಾಗಿ ಘೋಷಣೆಗಳನ್ನು ಕೂಗುತ್ತಾ ಸಾಗಿದ ಘಟನೆ ವರದಿಯಾಗಿದೆ.
ಬೊಬ್ರವಾಡದ ಜಾಮಿಯಾ ಮಸೀದಿಯ ಬಳಿಯಿಂದ ಆರಂಭಗೊಂಡ ಈ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ತೆರಳಿದ್ದು, ಮೆರವಣಿಗೆಯಲ್ಲಿದ್ದ ತಂಡವೊಂದು ಇಸ್ರೇಲ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿತ್ತು. ಇದೇ ವೇಳೆ ಅಂಕೋಲಾ ಪೋಸ್ಟ್ ಆಫೀಸ್ ಎದುರುಗಡೆ ಯುವಕನೊಬ್ಬ ಪ್ಯಾಲೆಸ್ಟೈನ್ ಬಾವುಟವನ್ನು ಹೆಗಲಿಗೆ ಏರಿಸಿಕೊಂಡು ಸಾಗಿದ್ದು, ಇತರರು ಆತನ ಜೊತೆ ಸೆಲ್ಫಿ ಕ್ಲಿಕ್ ಮಾಡುತ್ತಿದ್ದರು. ಈದ್ ಮಿಲಾದ್ ಸಂಭ್ರಮದ ನಡುವೆ ಯುವಕನ ಈ ಪ್ಯಾಲೆಸ್ಟೈನ್ ಪ್ರೇಮದ ವಿಡಿಯೋ ಹಾಗೂ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನಾಕ್ರೋಶಕ್ಕೆ ಕಾರಣವಾಗಿವೆ.

ಸಂಜೆಯಾಗುತ್ತಿದ್ದಂತೆ ಅಂಕೋಲಾದ ಪ್ರಮುಖ ಸರ್ಕಲ್ನಲ್ಲಿ ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿವೆ.ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ಹಾಗೂ ಹಮಾಸ್ ಬೆಂಬಲಿಸಿ ಘೋಷಣೆಗಳನ್ನು ಕೂಗಲಾಗಿದೆ ಎಂಬ ಆರೋಪಗಳು ಕೇಳಿಬಂದ ತಕ್ಷಣ ಕಾರ್ಯಪ್ರವೃತ್ತರಾದ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು.
ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುತ್ತಿದ್ದ ಪ್ಯಾಲೆಸ್ಟೈನ್ ದೇಶದ ಧ್ವಜವನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು, ಮುಂದೆ ಮೆರವಣಿಗೆ ಮುಂದುವರಿಯಲು ಅವಕಾಶ ಮಾಡಿಕೊಟ್ಟರು. ಧ್ವಜ ಹಾರಿಸಿದ ಹಾಗೂ ಸಾರ್ವಜನಿಕವಾಗಿ ಪ್ರದರ್ಶಿಸಿದ ಯುವಕರ ಪತ್ತೆಗಾಗಿ ಲಭ್ಯವಿರುವ ವಿಡಿಯೋ ಚಿತ್ರಣಗಳನ್ನು ಆಧರಿಸಿ ಪೊಲೀಸ್ ಇಲಾಖೆಯು ಸೂಕ್ತ ತನಿಖೆ ಕೈಗೊಳ್ಳುತ್ತಿದೆ ಎಂದು ತಿಳಿದುಬಂದಿದೆ
✍️ಕ್ರಾಂತಿಕಾರಿ ನ್ಯೂಸ್.ಅಂಕೋಲಾ.












Leave a Reply