ಅಂಕೋಲಾದಲ್ಲಿ ನಡೆದ ‘ಪ್ರಜಾಸೇವೆ’ ಕಾರ್ಯಕ್ರಮ: ಜನರ ಸಮಸ್ಯೆಗೆ ಕಾಯಕಲ್ಪವೋ ಅಥವಾ ಕಣ್ಣೊರೆಸುವ ತಂತ್ರವೋ?
ಅಂಕೋಲಾ :ತಾಲೂಕಿನ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಶನಿವಾರ ದಿನಾಂಕ 05/09/2026 ರಂದು ನಡೆದ ತಾಲೂಕು ಮಟ್ಟದ ‘ಪ್ರಜಾಸೇವೆ’ ಕಾರ್ಯಕ್ರಮವು ಇಡೀ ತಾಲೂಕಿನಲ್ಲಿ ಒಂದು ಹಬ್ಬದ ವಾತಾವರಣವನ್ನು ನಿರ್ಮಿಸಿತ್ತು. ತಾಲೂಕಿನ ಹಳ್ಳಿ -ಹಳ್ಳಿಗಳಿಂದ ಹಾಗೂ ಪುರಸಭೆ ವ್ಯಾಪ್ತಿಯ ಜನರು ತಮ್ಮ ನಾನಾ ರೀತಿಯ ಕಷ್ಟ-ಸಮಸ್ಯೆಗಳನ್ನು ಹೊತ್ತು ತಂದು ಸರತಿ ಸಾಲಿನಲ್ಲಿ ನಿಂತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಆಶ್ರಯ ಮನೆ ಸಿಗದಿರುವುದು, ಗೃಹಜ್ಯೋತಿ ಯೋಜನೆಯ ಹಣ ಜಮೆಯಾಗದಿರುವುದು ಹಾಗೂ ಪಿಂಚಣಿ ಬಾರದಿರುವುದು ಸೇರಿದಂತೆ ಅನೇಕ ತೊಂದರೆಗಳನ್ನು ಸಾರ್ವಜನಿಕರು ಬರೆದುಕೊಟ್ಟಿದ್ದು, ಸ್ವೀಕೃತಗೊಂಡ 500ಕ್ಕೂ ಹೆಚ್ಚು ಅರ್ಜಿಗಳನ್ನು ಅಧಿಕಾರಿಗಳು ಆನ್‌ಲೈನ್‌ನಲ್ಲಿ ಲೋಡ್ ಮಾಡಿಕೊಂಡಿದ್ದಾರೆ. ಆದರೆ, ಅರ್ಜಿ ಸಲ್ಲಿಸಿದ ಜನರಿಗೆ ತಕ್ಷಣಕ್ಕೆ ಯಾವುದೇ ಅಧಿಕೃತ ಸ್ವೀಕೃತಿ ಸಿಗದಿರುವುದು ಸಾರ್ವಜನಿಕರಲ್ಲಿ ಸಣ್ಣ ಅನುಮಾನ ಮೂಡಿಸಿದ್ದು, ಮಾನ್ಯ ಮುಖ್ಯಮಂತ್ರಿಗಳ ಈ ಪ್ರಜಾಸೇವೆಯಲ್ಲಿ ತಮ್ಮ ಸಮಸ್ಯೆಗಳಿಗೆ ನೈಜ ಪರಿಹಾರ ಸಿಗುತ್ತದೆಯೋ ಅಥವಾ ಅರ್ಜಿಗಳು ಕಸದ ಬುಟ್ಟಿಗೆ ಸೇರುತ್ತವೆಯೋ ಎಂಬುದನ್ನು ಮುಂಬರುವ ದಿನಗಳು ನಿರ್ಧರಿಸಲಿವೆ..
ಈ ಕಾರ್ಯಕ್ರಮಕ್ಕೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಲಕ್ಷ್ಮಣ ಸವದಿ ಅವರು ಚಾಲನೆ ನೀಡಿದರು. ವೇದಿಕೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಶ್ರೀ ಸತೀಶ ಶೈಲ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಜಿಲ್ಲಾ ಪಂಚಾಯತ್ ಸಿಇಒ ದಿಲೀಪ್ ಸಸಿ, ಸಹಾಯಕ ಆಯುಕ್ತ ಶ್ರವಣ್ ಕುಮಾರ್, ಗ್ಯಾರಂಟಿ ಯೋಜನೆ ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ್ ನಾಯ್ಕ ಹಾಗೂ ತಾಲೂಕು ಅಧ್ಯಕ್ಷ ಪಾಂಡುರಂಗ ಗೌಡ ಉಪಸ್ಥಿತರಿದ್ದರು.
ಸಮಾವೇಶದಲ್ಲಿ ಪುರಸಭೆ, ಪೊಲೀಸ್, ತೋಟಗಾರಿಕೆ, ಆರೋಗ್ಯ , ಸಮಾಜ ಕಲ್ಯಾಣ, ಶಿಶು ಅಭಿವೃದ್ಧಿ, ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆಗಳು ವಿಶೇಷ ಸ್ಟಾಲ್‌ಗಳನ್ನು ತೆರೆದು ಸಾರ್ವಜನಿಕರಿಗೆ ಮಾಹಿತಿ ನೀಡಿದವು.
ಇದೇ ವೇಳೆ ಪುರಸಭೆ ಇಲಾಖೆಯ ಫಲಾನುಭವಿ ಅಂಗವಿಕಲರಿಗೆ ತ್ರಿಚಕ್ರ ವಾಹನ ಮತ್ತು ಫ್ರಿಡ್ಜ್, ವಿತರಣೆ.27 ಫಲಾನುಭವಿಗಳಿಗೆ ಪಿಂಚಣಿ ಪ್ರಮಾಣ ಪತ್ರ, ಅಗ್ನಿಶಾಮಕ ದಳದ ಇಲಾಖೆಯಿಂದ ಐವರಿಗೆ ಆಪ್ತಮಿತ್ರ ಕಿಟ್, ಪಶುಸಂಗೋಪನೆ ಇಲಾಖೆಯಿಂದ ಚೆಕ್ ಹಾಗೂ ತೋಟಗಾರಿಕೆ ಇಲಾಖೆಯಿಂದ ಯಂತ್ರೋಪಕರಣಗಳನ್ನು ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮತ್ತು ಶಾಸಕ ಸತಿಸ್ ಶೈಲ ವಿತರಿಸಿದರು.
ಜನ ಸಾಮಾನ್ಯರ ದೂರು ಮತ್ತು ಅಹವಾಲುಗಳನ್ನು ನೇರವಾಗಿ ಮನೆಬಾಗಿಲಿಗೆ ತೆರಳಿ ಕಾಲಮಿತಿಯಲ್ಲಿ ಪರಿಹರಿಸುವ ಮಹತ್ವದ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನಾಯಕತ್ವದ ಕರ್ನಾಟಕ ಸರ್ಕಾರವು ‘ಪ್ರಜಾಸೇವೆ’ ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಕಂದಾಯ, ಪಡಿತರ ಚೀಟಿ, ಪಿಂಚಣಿ, ವಿದ್ಯುತ್ ಹಾಗೂ ಕುಡಿಯುವ ನೀರಿನಂತಹ ಇಲಾಖಾವಾರು ಸಮಸ್ಯೆಗಳಿಗೆ ಒಂದೇ ಸೂರಿನಡಿ ಪಾರದರ್ಶಕವಾಗಿ ತ್ವರಿತ ಪರಿಹಾರ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
✍️ಕಿರಣ್ ಗಾಂವಕರ. ಕ್ರಾಂತಿಕಾರಿ ನ್ಯೂಸ್ ಅಂಕೋಲಾ.













Leave a Reply