ಅಂಕೋಲಾ :ಕರ್ನಾಟಕ ರಾಜ್ಯದ ಭೂಮಾಪನ ಇಲಾಖೆಯು ಇಂದು ಇತಿಹಾಸದಲ್ಲೇ ಕಾಣದಂತಹ ಭೀಕರ ಆಡಳಿತಾತ್ಮಕ ಪಾರ್ಶ್ವವಾಯುವಿಗೆ ತುತ್ತಾಗಿದೆ. ಕಳೆದ ಫೆಬ್ರವರಿ ತಿಂಗಳಿನಿಂದ ಸುಮಾರು ಆರು ಸಾವಿರ ಪರವಾನಗಿ ಭೂಮಾಪಕರು ತಮ್ಮ ಅಸ್ತಿತ್ವ ಮತ್ತು ಕನಿಷ್ಠ ಸೇವಾ ಭದ್ರತೆಗಾಗಿ ಬೀದಿಗಿಳಿದು ಹೋರಾಡುತ್ತಿದ್ದರೆ, ಇತ್ತ ಸಾರ್ವಜನಿಕರ ಸುಮಾರು ಐದು ಲಕ್ಷಕ್ಕೂ ಅಧಿಕ ಅರ್ಜಿಗಳು ಕಚೇರಿಗಳ ಕತ್ತಲೆ ಕೋಣೆಗಳಲ್ಲಿ ಧೂಳು ಹಿಡಿಯುತ್ತಿವೆ. ಅಚ್ಚರಿಯ ವಿಷಯವೆಂದರೆ, ಪರವಾನಗಿ ಭೂಮಾಪಕರು ಮುಷ್ಕರಕ್ಕೆ ಕುಳಿತರೆ ಇಡೀ ಇಲಾಖೆಯೇ ಸ್ತಬ್ಧವಾಗುತ್ತದೆ ಎಂದರೆ, ಅಲ್ಲಿರುವ ನೂರಾರು ಸರ್ಕಾರಿ ಸರ್ವೇಯರ್ಗಳು ಹಾಗೂ ಅಧಿಕಾರಿಗಳು ಮಾಡುತ್ತಿರುವುದಾದರೂ ಏನು?.
ಸರ್ಕಾರದ ಸಂಬಳ ಪಡೆದು ಕಚೇರಿಗಳಲ್ಲಿ ಕುಳಿತಿರುವ ಸರ್ಕಾರಿ ಸಿಬ್ಬಂದಿ ಈ ತುರ್ತು ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸದೆ ಕುಂಭಕರ್ಣ ನಿದ್ರೆಗೆ ಶರಣಾಗಿರುವುದು ವ್ಯವಸ್ಥೆಯ ಅಧಃಪತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅತ್ತ ಮುಷ್ಕರ ನಿರತರ ಬೇಡಿಕೆಗಳನ್ನು ಆಲಿಸದ, ಇತ್ತ ಪರ್ಯಾಯ ವ್ಯವಸ್ಥೆ ಮಾಡದ ಸರ್ಕಾರವು ಜನರ ತೆರಿಗೆ ಹಣದಲ್ಲಿ ಮೋಜು ಮಾಡುತ್ತಿದೆಯೇ ಹೊರತು, ಲಕ್ಷಾಂತರ ರೈತರ ಕಣ್ಣೀರು ಅದಕ್ಕೆ ಕಾಣಿಸುತ್ತಿಲ್ಲ ಎಂಬುದು ಅತ್ಯಂತ ಕಟು ವಾಸ್ತವ.
ಮಳೆಗಾಲದ ಕರಾಳ ಛಾಯೆ ಇನ್ನು ಕೇವಲ ಒಂದು ತಿಂಗಳ ಅಂತರದಲ್ಲಿದೆ. ಒಮ್ಮೆ ಮಳೆ ಪ್ರಾರಂಭವಾದರೆ ಹೊಲಗದ್ದೆಗಳಲ್ಲಿ ಕೆಸರು ತುಂಬಿ, ಗಡಿ ಗುರುತಿಸುವ ಅಥವಾ ಹದ್ದುಬಸ್ತು ಮಾಡುವ ಸರ್ವೇ ಕಾರ್ಯಗಳು ತಾಂತ್ರಿಕವಾಗಿ ಅಸಾಧ್ಯವಾಗುತ್ತವೆ. ಭೂಮಿಯ ಹಕ್ಕು ಪಡೆಯಲು, ಬ್ಯಾಂಕ್ ಸಾಲ ಪಡೆಯಲು ಅಥವಾ ಜಮೀನಿನ ವಿವಾದ ಬಗೆಹರಿಸಿಕೊಳ್ಳಲು ವರ್ಷಗಟ್ಟಲೆ ಕಾದ ರೈತರಿಗೆ ಈಗ ಕಾಲಮಿತಿಯ ಆತಂಕ ಶುರುವಾಗಿದೆ.
ಸರ್ಕಾರಿ ಕಚೇರಿಗಳ ಮೆಟ್ಟಿಲು ಹತ್ತಿ ಸುಸ್ತಾಗಿರುವ ಅನ್ನದಾತನಿಗೆ ಈಗ ದಿಕ್ಕು ತೋಚದಂತಾಗಿದೆ. ಸರ್ಕಾರಿ ಸರ್ವೇಯರ್ಗಳು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಮತ್ತು ಸರ್ಕಾರವು ಈ ಗಂಭೀರ ಸಮಸ್ಯೆಯನ್ನು ಕೇವಲ “ಅನುದಾನದ ಕೊರತೆ” ಅಥವಾ “ತಾಂತ್ರಿಕ ಸಮಸ್ಯೆ” ಎಂಬ ನೆಪಗಳ ಅಡಿಯಲ್ಲಿ ಹೂತುಹಾಕಲು ಪ್ರಯತ್ನಿಸುತ್ತಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ.
ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಭರವಸೆಗಳ ಕಟ್ಟುನಿಟ್ಟನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆಯೇ ಹೊರತು, ಮುಷ್ಕರ ಕೊನೆಗಾಣಿಸಿ ರೈತರಿಗೆ ನ್ಯಾಯ ಒದಗಿಸುವ ಇಚ್ಛಾಶಕ್ತಿಯನ್ನು ತೋರುತ್ತಿಲ್ಲ. ಒಂದು ವೇಳೆ ಮುಂದಿನ ಕೆಲವು ದಿನಗಳಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಈ ಬಿಕ್ಕಟ್ಟನ್ನು ಬಗೆಹರಿಸದಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಭೂ ವಿವಾದಗಳು ವಿಕೋಪಕ್ಕೆ ಹೋಗಿ ಕಾನೂನು ಸುವ್ಯವಸ್ಥೆ ಹದಗೆಡುವ ಅಪಾಯವಿದೆ. ಕುರುಡು ಮತ್ತು ಕಿವುಡಾದ ಈ ಆಡಳಿತ ವ್ಯವಸ್ಥೆಯು ಮಳೆಗಾಲದ ಮುನ್ನವೇ ಕಣ್ಣು ತೆರೆಯದಿದ್ದರೆ, ರಾಜ್ಯದ ಜನತೆ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ.
ಐದು ಲಕ್ಷಕ್ಕಿಂತ ಹೆಚ್ಚು ಅರ್ಜಿಗಳು ಎಂದರೆ ಅದು ಕೇವಲ ಕಾಗದದ ತುಣುಕುಗಳಲ್ಲ, ಅದು ಐದು ಲಕ್ಷ ಕುಟುಂಬಗಳ ಬದುಕು ಮತ್ತು ಆಸ್ತಿಯ ಹಕ್ಕು ಎಂಬುದನ್ನು ಅಧಿಕಾರಶಾಹಿ ಮರೆತಂತಿದೆ.ಪರವಾನಗಿ ಭೂಮಾಪಕರು ಕೇಳುತ್ತಿರುವುದು ಅಸಾಧ್ಯವಾದುದನ್ನೇನಲ್ಲ; ದಶಕಗಳಿಂದ ಇಲಾಖೆಯ ಬೆನ್ನೆಲುಬಾಗಿ ದುಡಿದ ತಮಗೆ ಕನಿಷ್ಠ ಗೌರವಯುತ ಬದುಕು ಮತ್ತು ಸೇವಾ ಭದ್ರತೆ ನೀಡಿ ಎಂಬ ಮಾನವೀಯ ಬೇಡಿಕೆಯನ್ನಷ್ಟೇ ಮುಂದಿಟ್ಟಿದ್ದಾರೆ. ಆದರೆ ಈ “ಆಧುನಿಕ ಜೀತ ಪದ್ಧತಿ”ಯನ್ನು ಮುಂದುವರಿಸಲು ಹವಣಿಸುತ್ತಿರುವ ಸರ್ಕಾರಕ್ಕೆ ಈ ಶ್ರಮಿಕರ ಶಾಪ ತಟ್ಟದೆ ಇರದು.













Leave a Reply