​ಅಂಕೋಲಾದಲ್ಲಿ ಮಟ್ಕಾ ಮಹಾಮಾರಿ: ‘ಖಾಕಿ’ ಕಣ್ಗಾವಲಲ್ಲೇ ಸದ್ದಿಲ್ಲದೆ ನಡೆಯುತ್ತಿದೆಯೇ ‘ಸೌಮ್ಯ’ ದಂಧೆ?

​ಮಟ್ಕಾ ಜಾಲ ಅಂಕೋಲದಲ್ಲಿ ವ್ಯಾಪಕ – ಕ್ರಮಕ್ಕೆ ಒತ್ತಾಯ ಅಂಕೋಲದಲ್ಲಿ

​ಅಂಕೋಲಾ: ಸಂಸ್ಕೃತಿ ಮತ್ತು ಸಭ್ಯತೆಗೆ ಹೆಸರಾದ ಅಂಕೋಲಾ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಈಗ ಅಕ್ರಮ ಮಟ್ಕಾ ದಂಧೆಯ ಕಬಂಧ ಬಾಹುಗಳು ಚಾಚಿಕೊಂಡಿವೆ. ಬಡ ಕುಟುಂಬಗಳನ್ನು ಬೀದಿಪಾಲು ಮಾಡುವ ಈ ‘ನಂಬರ್ ಆಟ’ ಇತ್ತೀಚಿನ ದಿನಗಳಲ್ಲಿ ರಾಜಾರೋಷವಾಗಿ ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವಿಶೇಷವೆಂದರೆ, ಈ ದಂಧೆಯನ್ನು ಹತ್ತಿಕ್ಕಬೇಕಾದ ಸ್ಥಳೀಯ ಬೀಟ್ ಪೊಲೀಸ್ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿರುವುದು ಅಕ್ರಮ ದಂಧೆಕೋರರಿಗೆ ವರದಾನವಾಗಿ ಪರಿಣಮಿಸಿದೆ.​ಪಟ್ಟಣದ ಆಯಕಟ್ಟಿನ ಜಾಗಗಳಲ್ಲಿ, ಅದರಲ್ಲೂ ಪುರಸಭೆ ಕಚೇರಿಯಂತಹ ಸಾರ್ವಜನಿಕ ಸ್ಥಳಗಳ ಮುಂದೆಯೇ ಈ ಅಕ್ರಮ ವ್ಯವಹಾರ ಅವ್ಯಾಹತವಾಗಿ ಸಾಗಿದೆ.

ಸಂವಿಧಾನಬದ್ಧವಾಗಿ ಬಡವರಿಗೆ ಬೀದಿ ಬದಿ ವ್ಯಾಪಾರ ಮಾಡಿ ಜೀವನ ಕಟ್ಟಿಕೊಳ್ಳುವ ಹಕ್ಕಿದೆ. ಆದರೆ, ಅಂಕೋಲಾದಲ್ಲಿ ಪರಿಸ್ಥಿತಿ ಉಲ್ಟಾ ಹೊಡೆದಿದೆ. ಆರ್ಥಿಕವಾಗಿ ಸದೃಢರಾಗಿರುವ, ಎಪಿಎಲ್ ಕಾರ್ಡ್ ಹೊಂದಿರುವ ಪ್ರಭಾವಿಗಳು ಬಡವರ ಹೊಟ್ಟೆಗೆ ಹೊಡೆಯುತ್ತಿದ್ದಾರೆ. ಪುರಸಭೆ ಕಚೇರಿಯ ಮುಂಭಾಗದಲ್ಲೇ ಗೂಡಂಗಡಿಗಳನ್ನು ಹಾಕಿಕೊಂಡಿರುವ ಈ ‘ಸಿರಿವಂತ’ ವ್ಯಾಪಾರಿಗಳು, ಹೊರಗಡೆಗೆ ಲೇಸ್-ಕುರ್ಕುರೆ ಪ್ಯಾಕೆಟ್‌ಗಳನ್ನು ತೂಗುಹಾಕಿ ಒಳಗಡೆ ಮಟ್ಕಾ ಚೀಟಿ ಬರೆಯುವ ದಂಧೆಯಲ್ಲಿ ನಿರತರಾಗಿದ್ದಾರೆ.

ಇವರಿಗೆ ಕಾನೂನಿನ ಅಂಜಿಕೆಯಾಗಲಿ ಅಥವಾ ಸ್ಥಳೀಯ ಆಡಳಿತದ ಭೀತಿಯಾಗಲಿ ಎಳ್ಳಷ್ಟೂ ಇಲ್ಲದಂತಾಗಿರುವುದು ವ್ಯವಸ್ಥೆಯ ದುರಂತ.​ಇನ್ನು ಈ ಅಕ್ರಮ ಸಾಮ್ರಾಜ್ಯಕ್ಕೆ ಈಗ ಹೊಸ ‘ಬುಕ್ಕಿ’ಯ ಆಗಮನವಾಗಿದ್ದು, ದಂಧೆಯ ಸ್ವರೂಪವೇ ಬದಲಾಗಿದೆ. ಅತ್ಯಂತ ‘ಸೌಮ್ಯ’ ಸ್ವಭಾವದವನೆಂದು ಗುರುತಿಸಿಕೊಂಡಿರುವ ಈ ಹೊಸ ಕಿಂಗ್‌ಪಿನ್, ವ್ಯವಸ್ಥೆಯನ್ನು ಮೌನವಾಗಿಸುವ ಕಲೆ ತಂದಿದ್ದಾನೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ, ಸರಿಯಾದ ಸಮಯಕ್ಕೆ ತಲುಪಬೇಕಾದ ‘ಮಾಸಿಕ ಗೌರವಧನ’ ಅಚ್ಚುಕಟ್ಟಾಗಿ ತಲುಪುತ್ತಿರುವುದರಿಂದಲೇ ಅಕ್ರಮದ ವಿರುದ್ಧದ ಕೂಗು ದಮನವಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಸಾರ್ವಜನಿಕರು ಸ್ವತಃ ಠಾಣೆಯ ಮೆಟ್ಟಿಲೇರಿ ಮೌಖಿಕವಾಗಿ ಮಾಹಿತಿ ನೀಡಿದರೂ, “ಇವತ್ತೇ ದಾಳಿ ಮಾಡುತ್ತೇವೆ” ಎಂದು ಹೇಳುವ ಅಧಿಕಾರಿಗಳೇ ಬುಕ್ಕಿಗಳಿಗೆ ಮೊದಲೇ ಮಾಹಿತಿ ರವಾನಿಸುವಲ್ಲಿ ಸಫಲರಾಗುತ್ತಿದ್ದಾರೆ. ಈ ಮೂಲಕ ಅಕ್ರಮ ದಂಧೆಗೆ ವ್ಯವಸ್ಥಿತವಾಗಿ ಸಹಕಾರ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಠಿ ಸಿಕ್ಕಂತಾಗಿದ.

​ಕಳೆದ ಎರಡು ತಿಂಗಳಿನಿಂದ ಈ ದಂಧೆ ಹೊಸ ರೂಪ ಪಡೆದುಕೊಂಡಿದ್ದು, ಕೂಲಿ ಕಾರ್ಮಿಕರ ಮತ್ತು ಮಧ್ಯಮ ವರ್ಗದವರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಬಂಡವಾಳವಿಲ್ಲದ ಈ ದಂಧೆಯಲ್ಲಿ ಸಿಗುವ ಶೇ. 15 ರಷ್ಟು ಕಮಿಷನ್ ಆಸೆಗೆ ಬಿದ್ದು, ಪೆನ್ನು-ಪೇಪರ್ ಹಿಡಿದು ಸಣ್ಣ ಪುಟ್ಟ ಅಂಗಡಿಗಳೂ ಕೂಡ ಇಂದು ಮಟ್ಕಾ ಅಡ್ಡೆಗಳಾಗಿ ಪರಿವರ್ತನೆಯಾಗಿವೆ.

ನೂರು ರೂಪಾಯಿಗೆ ಹತ್ತಾರು ಸಾವಿರದ ಆಸೆ ತೋರಿಸಿ ಸಂಸಾರಗಳನ್ನು ಬೀದಿಗೆ ತರುತ್ತಿರುವ ಈ ಜಾಲದ ಹಿಂದೆ ಯಾರ ಹಸ್ತಕ್ಷೇಪವಿದೆ ಎಂಬುದು ಜಗಜ್ಜಾಹೀರಾಗಿದೆ. ಮೇಲ್ನೋಟಕ್ಕೆ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲವೆಂದು ಬಿಂಬಿಸಲಾಗುತ್ತಿದ್ದರೂ, ಪ್ರತಿ ಗಲ್ಲಿಯಲ್ಲೂ ನಿಗಾ ಇಡಬೇಕಾದ ಬೀಟ್ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು, ಈ ‘ಸೌಮ್ಯ’ ಮಾಫಿಯಾವನ್ನು ಬೇರು ಸಮೇತ ಕಿತ್ತೆಸೆಯಬೇಕಿದೆ.

Leave a Reply

Your email address will not be published. Required fields are marked *

error: Content is protected !!