ಅಂಕೋಲಾದ ಹೊನ್ನೇಬೈಲ್‌ನಲ್ಲಿ ತಾಯಿ-ಮಗನ ಅಟ್ಟಹಾಸ, ಸಾರ್ವಜನಿಕ ರಸ್ತೆ ಬಂದ್ ಮಾಡಿ ದೌರ್ಜನ್ಯ!​

ಅಂಕೋಲಾದ ಹೊನ್ನೇಬೈಲ್‌ನಲ್ಲಿ ತಾಯಿ-ಮಗನ ಅಟ್ಟಹಾಸ, ಸಾರ್ವಜನಿಕ ರಸ್ತೆ ಬಂದ್ ಮಾಡಿ ದೌರ್ಜನ್ಯ!​

ಅಂಕೋಲಾ: ತಾಲೂಕಿನ ಹೊನ್ನೇಬೈಲ್ ಗ್ರಾಮದಲ್ಲಿ ತಾಯಿ ಮತ್ತು ಮಗನ ಉಪಟಳ ಮಿತಿಮೀರಿದೆ ಎಂದು ತಿಳಿದು ಬಂದಿದೆ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದ್ದರೂ ಸಹ ಯಾವುದೇ ತಡೆಯಾಜ್ಞೆ ಇಲ್ಲದಿರುವ ನಡುವೆಯೇ ಏಕಾಏಕಿ ಸಾರ್ವಜನಿಕ ರಸ್ತೆಗೆ ಕಲ್ಲು ಸುರಿದು ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ಹೊನ್ನೇಬೈಲ್ ಗ್ರಾಮದ ಸರ್ವೆ ನಂಬರ್ 214/5ರಲ್ಲಿ ಹಾದುಹೋಗುವ, ನಂತರ ಅರಣ್ಯ ಇಲಾಖೆಯ ಮೂಲಕ ಮಾಲ್ಕಿ ಜಮೀನಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯನ್ನು ಮಂಗಲಾ ಮೋಹನ್ ನಾಯ್ಕ ಹಾಗೂ ಆಕೆಯ ಮಗ ಅಮರ್ ನಾಯ್ಕ್ ಎಂಬುವವರು ಗುರುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ 214*5ರಲ್ಲಿ ಕಲ್ಲುಗಳನ್ನು ಸುರಿದು ಬಂದ್ ಮಾಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ..

ವಿಶೇಷವೆಂದರೆ, ಸಂತ್ರಸ್ತ ಕುಟುಂಬಕ್ಕೆ ವಸತಿ ಯೋಜನೆಯಡಿ ಮಂಜೂರಾದ ಮನೆಯ ಶುಭ ಗೃಹಪ್ರವೇಶ ಕಾರ್ಯಕ್ರಮವು ಏಪ್ರಿಲ್ 24ರಂದು (ಇಂದು) ನಿಗದಿಯಾಗಿದ್ದು, ಇದನ್ನು ಕೆಡಿಸಬೇಕೆನ್ನುವ ಉದ್ದೇಶದಿಂದಲೇ ರಸ್ತೆ ಬಂದ್ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಘಟನಾ ಸ್ಥಳಕ್ಕೆ 112 ಪೊಲೀಸ್ ಸಿಬ್ಬಂದಿಗಳು ಧಾವಿಸಿ ವಿಚಾರಣೆ ನಡೆಸಿದ ವೇಳೆ, ಆರೋಪಿ ಯುವಕ ಅಮರ್ ನಾಯ್ಕ್ “ನಮ್ಮ ವಕೀಲರು ಹೇಳಿದ್ದಾರೆ ಕಲ್ಲು ಹಾಕಲು, ಪೊಲೀಸರು ಇಲ್ಲಿಗೆ ಬರುವಂತಿಲ್ಲ” ಎಂದು ಹೇಳಿ ದರ್ಪ ತೋರಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಹಿಂದೆ 2024ರಲ್ಲಿಯೂ ಇವರು ಇದೇ ರೀತಿ ರಸ್ತೆ ಬಂದ್ ಮಾಡಿದಾಗ ಅಂದಿನ ತಹಶೀಲ್ದಾರರು, ಪೊಲೀಸ್ ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ರಸ್ತೆ ತೆರವುಗೊಳಿಸಿತ್ತು ಎಂದು ತಿಳಿದು ಬಂದಿದೆ. ಇದರ ವಿರುದ್ಧ ಜಮೀನಿನ ಮಾಲಕಿ ನ್ಯಾಯಾಲಯದಲ್ಲಿ ಪ್ರಕರಣ OS 125/2024) ದಾಖಲಿಸಿದ್ದರೂ, ಇಂದಿನವರೆಗೂ ನ್ಯಾಯಾಲಯ ಯಾವುದೇ ತಡೆಯಾಜ್ಞೆ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಹೀಗಿದ್ದರೂ ಕಾನೂನನ್ನು ಕೈಗೆತ್ತಿಕೊಂಡಿರುವ ಈ ತಾಯಿ-ಮಗ, ದಾರಿಹೋಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಈ ನಡುವೆ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದ್ದು, ಮಂಗಲಾ ನಾಯ್ಕ ಅವರ ತಂಗಿ ಲಕ್ಷ್ಮಿ ಮೋನಪ್ಪ ನಾಯ್ಕ ಅವರು ಸರ್ವೆ ನಂಬರ್ 214/6ರಲ್ಲಿ ಪಂಚಾಯತ್ ಪರವಾನಗಿ ಇಲ್ಲದೆ ಅನಧಿಕೃತವಾಗಿ ಮನೆ ನಿರ್ಮಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸದರಿ ಕಟ್ಟಡಕ್ಕೆ ಹೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ನೀಡಿಲ್ಲ. ಈ ಅಕ್ರಮ ಕಟ್ಟಡವನ್ನು ತೆರವುಗೊಳಿಸುವಂತೆ ತಾಲೂಕು ಪಂಚಾಯತ್ ಈಗಾಗಲೇ ಹೊನ್ನೇಬೈಲ್ ಗ್ರಾಮ ಪಂಚಾಯತ್‌ಗೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ಒಂದು ಕಡೆ ಕಾನೂನುಬಾಹಿರವಾಗಿ ರಸ್ತೆ ಬಂದ್, ಇನ್ನೊಂದು ಕಡೆ ಅನಧಿಕೃತ ಕಟ್ಟಡ ನಿರ್ಮಾಣ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ಸಂತ್ರಸ್ತ ಕುಟುಂಬವು ಅಂಕೋಲಾ ಪೊಲೀಸ್ ಠಾಣೆ ಹಾಗೂ ತಹಶೀಲ್ದಾರ್ ಕಚೇರಿಗೆ ದೂರು ನೀಡಿದ್ದು, ತಹಶೀಲ್ದಾರರ ಅನುಪಸ್ಥಿತಿಯಲ್ಲಿ ಉಪ ತಹಶೀಲ್ದಾರ್ ಗಿರೀಶ್ ಜಾಂಬವಳೇಕರ್ ಅವರು ಮನವಿ ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಪ್ರಕರಣಕ್ಕೆ ಪರಿಹಾರ ಕಂಡುಹಿಡಿದು, ಗೃಹಪ್ರವೇಶದ ಸಂಭ್ರಮದಲ್ಲಿರುವ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!