ಅಂಕೋಲಾ :ಭೀಕರ ಅಪಘಾತ: ನಿಯಂತ್ರಣ ತಪ್ಪಿ ಸೀಬರ್ಡ್ ಬಸ್ ಪಲ್ಟಿ, ಪ್ರಯಾಣಿಕರು ಪವಾಡಸದೃಶ ಪಾರು!​

ಅಂಕೋಲಾ :ಜುಲೈ 2. ತಾಲೂಕಿನ ಅವರ್ಸಾ ರಾಷ್ಟ್ರೀಯ ಹೆದ್ದಾರಿಯ ಬ್ರಿಜ್ ಸಮೀಪ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಪ್ರಯಾಣಿಕರಿದ್ದ ಸೀಬರ್ಡ್ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ.​

ಅಂಕೋಲಾ ತಾಲೂಕಿನಿಂದ ಕಾರವಾರದ ಕಡೆಗೆ ಸಾಗುತ್ತಿದ್ದ ಈ ಸೀಬರ್ಡ್ ಬಸ್, ಅವರ್ಸಾ ಬ್ರಿಜ್‌ನಿಂದ ಅನತಿ ದೂರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬೆಳಿಗ್ಗೆ ಸಮಯ 10:20ಕ್ಕೆ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತಕ್ಕೀಡಾದ ಬಸ್‌ನ ಚಾಲಕ ಅಂಕೋಲಾದ ಕಾಕರಮಠದ ಸ್ಥಳೀಯ ನಿವಾಸಿ ರಫಿಕ್ ಎಂದು ತಿಳಿದು ಬಂದಿದೆ.

ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗುತ್ತಿದ್ದಂತೆ, ರಸ್ತೆ ಬದಿಯಲ್ಲಿದ್ದ ದೊಡ್ಡ ಮರದ ಕೊಂಬೆಯೊಂದು ಬಸ್ಸಿಗೆ ಅಡ್ಡ ಬಂದಿದೆ. ಈ ಮರದ ಕೊಂಬೆಯ ಆಸರೆಯಿಂದಾಗಿ ಬಸ್ ಮತ್ತೊಮ್ಮೆ ಉರುಳುವುದು ತಪ್ಪಿದೆ. ಇಲ್ಲದಿದ್ದರೆ ಭೀಕರ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.​ಅಪಘಾತದ ತೀವ್ರತೆಗೆ ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರು ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ನೆರವಿನಿಂದ ಗಾಯಾಳುಗಳನ್ನು ಚಿಕಿತ್ಸೆಗಾಗಿ ಅಂಕೋಲಾದ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅದೃಷ್ಟವಶಾತ್ ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.​ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ತಕ್ಷಣವೇ ಧಾವಿಸಿದ್ದು, ಸಾರ್ವಜನಿಕರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!