ಅಂಕೋಲಾದಲ್ಲಿ ಊಟದ ವಿಚಾರಕ್ಕೆ ಜಗಳ: ರಣರಂಗವಾದ ಸುದರ್ಶನ ಹೋಟೆಲ್, 11 ಮಂದಿ ವಿರುದ್ಧ ಎಫ್‌ಐಆರ್!

ಸುದರ್ಶನ ಹೋಟೆಲ್‌ನಲ್ಲಿ ನಡೆದ ಜಗಳಕ್ಕೆ ಖಾಕಿ ಖೆಡ್ಡಾ: ಅಂಕೋಲಾ ಪೊಲೀಸರಿಂದ 11 ಮಂದಿ ವಿರುದ್ಧ FIR.

ಅಂಕೋಲಾ: ನಗರದ ಗುಡಗಾರ ಗಲ್ಲಿಯ ಸುದರ್ಶನ ಹೋಟೆಲಿನಲ್ಲಿ ಊಟದ ಸಣ್ಣ ವಿಷಯಕ್ಕೆ ಎರಡು ಗುಂಪುಗಳ ನಡುವೆ ನಡೆದ ಭೀಕರ ಗಲಾಟೆಗೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ಮಂಗಳವಾರ ರಾತ್ರಿ ಸುಮಾರು 10:45 ರಿಂದ 11:00 ಗಂಟೆಯ ಅವಧಿಯಲ್ಲಿ ಹೋಟೆಲ್ ಆವರಣದಲ್ಲಿ ಜಮಾಯಿಸಿದ್ದ ಹನ್ನೊಂದು ಮಂದಿ ತೀರಾ ಅಸಭ್ಯ ಮತ್ತು ಅವಾಚ್ಯ ಶಬ್ದಗಳಿಂದ ಪರಸ್ಪರ ಬೈದಾಡುತ್ತಾ, ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ರೀತಿಯಲ್ಲಿ ಭೀಕರವಾಗಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮಹಾಬಲೇಶ್ವರ ರಾಮಚಂದ್ರ ನಾಯಕ ಅವರು ತಕ್ಷಣವೇ ಮಧ್ಯಪ್ರವೇಶಿಸಿ, ಗಲಾಟೆಯನ್ನು ತಡೆಯಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಗರಿಷ್ಠ ಪ್ರಯತ್ನ ನಡೆಸಿದ್ದಾರೆ. ಆದರೆ, ಕಾನೂನಿನ ಭಯವೇ ಇಲ್ಲದ ಈ ಉದ್ಧಟ ಆರೋಪಿಗಳು ಕರ್ತವ್ಯನಿರತ ಪೊಲೀಸ್ ಅಧಿಕಾರಿಯ ಮಾತನ್ನೂ ಲೆಕ್ಕಿಸದೆ, ಸಾರ್ವಜನಿಕ ಸ್ಥಳದಲ್ಲೇ ಜಗಳವನ್ನು ಮುಂದುವರಿಸಿ ಭೀತಿ ಹುಟ್ಟಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಕದಡಿದ ಆರೋಪದ ಮೇಲೆ ನಿರಂಜನ ಹರಿಕಂತ್ರ, ಮನೋಜಕುಮಾರ ಖಾರ್ವಿ, ಕಿಶೋರ ಮೊಗವೀರ, ಸೂರಜ ಹೊಸಕಟ್ಟ, ದೀಪಕ ಹರಿಕಂತ್ರ, ರಂಜನ ಹರಿಕಂತ್ರ ಹಾಗೂ ಮತ್ತೊಂದು ಗುಂಪಿನ ಪ್ರಶಾಂತ ನಾಯಕ, ಗಣಪತಿ ನಾಯಕ, ರಾಘವೇಂದ್ರ ಅಂಬಿಗ, ನಾರಾಯಣ ಗುನಗ ಮತ್ತು ಸದಾನಂದ ನಾಯ್ಕ ಸೇರಿದಂತೆ ಒಟ್ಟು ಹನ್ನೊಂದು ಜನರ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 194(2) ರ ಅಡಿಯಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವನಾಥ ನಿಂಗೊಳ್ಳಿ ಅವರು FIR ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!