ಅಂಕೋಲಾ :ತಾಲೂಕಿನ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಹತ್ತು ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಂತರ್ಜಿಲ್ಲಾ ಬೈಕ್ ಕಳ್ಳನನ್ನು ಬಂಧಿಸಿದ್ದಾರೆ. ಶಿರಸಿಯ ಅರೇತೋಟ ನಿವಾಸಿಯಾದ ಖಾಲಿದ ಶರೀಫ್ ಸಾಬ್ ಕನವಳ್ಳಿ (೩೩ ವರ್ಷ) ಬಂಧಿತ ಆರೋಪಿಯಾಗಿದ್ದಾನೆ.
ಕಳೆದ ಜೂನ್ ೨೬ ರಂದು ಅಂಕೋಲಾ ಬಸ್ ನಿಲ್ದಾಣದ ನೀರಿನ ಟ್ಯಾಂಕ್ ಹತ್ತಿರ ನಿಲ್ಲಿಸಲಾಗಿದ್ದ ಅಂದಾಜು 35000 ರೂ. ಮೌಲ್ಯದ ಹೋಂಡಾ ಆಕ್ಟಿವಾ ಬೈಕ್ ಕಳ್ಳತನವಾಗಿರುವ ಬಗ್ಗೆ ಮಾಲೀಕರಾದ ಫಿರೋಜ ಸತ್ತಾರ ಖಾನ ಎಂಬುವವರು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳನ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಕಾರ್ಯಾಚರಣೆಗೆ ಇಳಿದ ಪೊಲೀಸ್ ತಂಡವು ನಿರಂತರವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತೀವ್ರ ನಿಗಾ ವಹಿಸಿ ಅಂತಿಮವಾಗಿ ಆರೋಪಿಯನ್ನು ಅಂಕೋಲಾ ಬಸ್ ನಿಲ್ದಾಣದ ಬಳಿಯೇ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ತಾನೇ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆತನಿಂದ ಕಳುವಾಗಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ತನಿಖೆಯ ವೇಳೆ ಈತ ಸಾಮಾನ್ಯ ಕಳ್ಳನಲ್ಲ, ಬದಲಾಗಿ ಭಾರಿ ಕಿಲಾಡಿ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಈತನ ಮೇಲೆ ಈಗಾಗಲೇ ಶಿರಸಿ ಗ್ರಾಮೀಣ ಠಾಣೆಯಲ್ಲಿ ೩, ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ೩, ಬನವಾಸಿ, ಯಲ್ಲಾಪುರ, ಕಾರವಾರ ನಗರ, ಕುಮಟಾ, ಹಳಿಯಾಳ ಹಾಗೂ ತಡಸ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ಸೇರಿದಂತೆ ಒಟ್ಟು ೧೦ಕ್ಕೂ ಹೆಚ್ಚು ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಮ್.ಎನ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಅವರ ಮಾರ್ಗದರ್ಶನದಲ್ಲಿ, ಕಾರವಾರ ಉಪವಿಭಾಗದ ಡಿವೈಎಸ್ಪಿ ಗಿರೀಶ್ ಎಸ್.ವಿ. ನೇತೃತ್ವದಲ್ಲಿ ಅಂಕೋಲಾ ಠಾಣೆಯ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಪಿಎಸ್ಐಗಳಾದ ವಿಶ್ವನಾಥ ನಿಂಗೋಳ್ಳಿ, ಲಲಿತಾ ರಜಪೂತ ಹಾಗೂ ಸಿಬ್ಬಂದಿಗಳಾದ ಪ್ರಶಾಂತ್ ನಾಯ್ಕ, ಮಹಾದೇವ ಸಿದ್ದಿ, ಆಸಿಫ್ ಆರ್.ಕೆ., ಗಿರೀಶ್ ಲಮಾಣಿ ಅವರನ್ನೊಳಗೊಂಡ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಕಳ್ಳನನ್ನು ಹಿಡಿದು ಸಾರ್ವಜನಿಕರ ಸೊತ್ತನ್ನು ಮರಳಿ ಪತ್ತೆ ಹಚ್ಚಿದ ಪೊಲೀಸ್ ತಂಡದ ಶ್ಲಾಘನೀಯ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.













Leave a Reply