ರಕ್ಷಕನೇ ಭಕ್ಷಕ?! ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಮಂಕಿ ಠಾಣೆ ಪಿಎಸ್‌ಐ ಅಭಿನಂದನ್ ಗೌಡ ಬಂಧನ

ರಕ್ಷಕನೇ ಭಕ್ಷಕ?! ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಮಂಕಿ ಠಾಣೆ ಪಿಎಸ್‌ಐ ಅಭಿನಂದನ್ ಗೌಡ ಬಂಧನ!

​ಭಟ್ಕಳ್:ಕಾನೂನು ಸುವ್ಯವಸ್ಥೆ ಕಾಪಾಡಿ, ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಯೇ ಕಾಮುಕನಂತೆ ವರ್ತಿಸಿ ಸಿಕ್ಕಿಬಿದ್ದಿರುವ ಘನಘೋರ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದಡಿ ಹೊನ್ನಾವರ ತಾಲ್ಲೂಕಿನ ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐ ಅಭಿನಂದನ್ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.​

೧೬ ವರ್ಷದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಭಟ್ಕಳಕ್ಕೆ ಕರೆತಂದಿದ್ದ ಪಿಎಸ್‌ಐ ಅಭಿನಂದನ್ ಗೌಡ, ಅಲ್ಲಿನ ಖಾಸಗಿ ಲಾಡ್ಜ್‌ ಒಂದರಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದ ಸಂತ್ರಸ್ತೆಯ ಕುಟುಂಬಸ್ಥರು ತಕ್ಷಣವೇ ಭಟ್ಕಳ ನಗರ ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ.​ದೂರು ಸ್ವೀಕರಿಸಿದ ಭಟ್ಕಳ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ಆರೋಪದಲ್ಲಿ ಸತ್ಯಾಂಶ ಇರುವುದು ಪ್ರಾಥಮಿಕವಾಗಿ ಧೃಡಪಡುತ್ತಿದ್ದಂತೆ, ಆರೋಪಿ ಪಿಎಸ್‌ಐ ಅಭಿನಂದನ್ ಗೌಡನನ್ನು ವಶಕ್ಕೆ ಪಡೆದು, ಕಠಿಣ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಳಂಕಿತ ಅಧಿಕಾರಿಯನ್ನು ಬಂಧಿಸಲಾಗಿದೆ.​

ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡಬೇಕಾದ ಸಬ್ ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿಯೇ ಇಂತಹ ಹೀನ ಕೃತ್ಯಕ್ಕೆ ಕೈಹಾಕಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಕಾಮುಕ ಅಧಿಕಾರಿಗೆ ಯಾವುದೇ ಮುಲಾಜಿಲ್ಲದೆ ಕಠಿಣ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ. ಸದ್ಯ ಆರೋಪಿ ಪಿಎಸ್‌ಐ ಪೊಲೀಸ್ ಕಸ್ಟಡಿಯಲ್ಲಿದ್ದು, ಭಟ್ಕಳ ನಗರ ಪೊಲೀಸರು ಪ್ರಕರಣದ ಸಮಗ್ರ ತನಿಖೆಯನ್ನು ಮುಂದುವರಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!