ಅಂಕೋಲಾ ಕಾಲೇಜು ಪ್ರಿನ್ಸಿಪಾಲ್ ದೂರಿಗೆ ಜಯ: ಬೈಂದೂರಿನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಆಡಿಟರ್.

ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಆಡಿಟರ್: ಅಂಕೋಲಾ ಪ್ರಿನ್ಸಿಪಾಲ್ ದೂರಿಗೆ ಸಿಕ್ಕ ಜಯ

​ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲೆಕ್ಕ ಪರಿಶೋಧನೆ ವೇಳೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ರಾಜ್ಯ ಲೆಕ್ಕಪತ್ರ ಇಲಾಖೆಯ ಆಡಿಟರ್ ರಘುನಂದನ ಎಸ್.ಎಸ್. (ಮೂಲತಃ ತುಮಕೂರು) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.​ಕಾಲೇಜಿನ ಹಣಕಾಸು ವ್ಯವಹಾರದಲ್ಲಿ ಲೋಪವಾಗಿದೆ ಎಂದು ಹೆದರಿಸಿ, ಪಾಸಿಟಿವ್ ವರದಿ ನೀಡಲು ಆಡಿಟರ್‌ಗಳು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ನೆಗೆಟಿವ್ ವರದಿ ನೀಡುವುದಾಗಿ ಬೆದರಿಕೆ ಹಾಕಿದ್ದರು.

ಈ ಭ್ರಷ್ಟಾಚಾರಕ್ಕೆ ಮಣಿಯದ ಕಾಲೇಜಿನ ಮಹಿಳಾ ಪ್ರಿನ್ಸಿಪಾಲ್ ಡಾ. ವಿಜಯ ಯು. ಪಾಟೀಲ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.​ಲೋಕಾಯುಕ್ತರ ಸೂಚನೆಯಂತೆ ಪ್ರಿನ್ಸಿಪಾಲರು ಆಡಿಟರ್‌ಗಳಿಗೆ ಕರೆ ಮಾಡಿದಾಗ, ಅವರು ಮೊದಲು ಭಟ್ಕಳಕ್ಕೆ ಬರುವಂತೆ ತಿಳಿಸಿದ್ದರು. ಅದರಂತೆ ಪ್ರಿನ್ಸಿಪಾಲರು ಅಂಕೋಲಾದಿಂದ ಭಟ್ಕಳಕ್ಕೆ ತೆರಳಿದ್ದರು. ಆದರೆ ಅಲ್ಲಿಗೆ ತಲುಪಿದಾಗ ಆಡಿಟರ್‌ಗಳು ತಮ್ಮ ವರಸೆ ಬದಲಿಸಿ, ತಾವು ಬೈಂದೂರಿನಲ್ಲಿರುವುದಾಗಿ ಹೇಳಿ ಅಲ್ಲಿಗೆ ಬರುವಂತೆ ಸೂಚಿಸಿದರು. ಆಡಿಟರ್ ನ ಮಾತಿನಂತೆ ಪ್ರಿನ್ಸಿಪಾಲರು ಭಟ್ಕಳದಿಂದ ಬೈಂದೂರಿಗೆ ಪ್ರಯಾಣ ಬೆಳೆಸಿದರು.​ದಿನಾಂಕ 08/07/2026 ರಂದು ಬೈಂದೂರಿನಲ್ಲಿ ಅಂಕೋಲಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲರಿಂದ 80,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಓಡಿಹೋಗಲು ಯತ್ನಿಸಿದ ಆಡಿಟರ್‌ಗಳನ್ನು ಹಣದ ಸಮೇತ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳು ಸೆರೆಹಿಡಿದಿದ್ದಾರೆ.​ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ನೇತೃತ್ವದಲ್ಲಿ, ಡಿವೈಎಸ್ಪಿ ಧನ್ಯ ನಾಯಕ್ ಹಾಗೂ ಇನ್ಸ್‌ಪೆಕ್ಟರ್ ವಿನಾಯಕ ಬಿಲ್ಲವ ಮತ್ತು ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ನಿನ್ನೆ ದಿನಾಂಕ 8/07/2026 ರ ತಡರಾತ್ರಿಯವರೆಗೂ ಪ್ರಕ್ರಿಯೆ ನಡೆದಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಭ್ರಷ್ಟರ ವಿರುದ್ಧ ಧೈರ್ಯವಾಗಿ ದೂರು ನೀಡಿದ ಪ್ರಿನ್ಸಿಪಾಲ್ ಡಾ. ವಿಜಯ ಯು. ಪಾಟೀಲ್ ಅವರ ನಡೆಗೆ ಶ್ಲಾಘನೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!