ಅಂಕೋಲಾ :ಅಧಿಕಾರ ಚಲಾಯಿಸುವ ಅಧಿಕಾರಿಗಳ ದರ್ಪ ಮತ್ತು ಅತಿಯಾದ ಕೆಲಸದ ಒತ್ತಡಕ್ಕೆ ತಾಲೂಕಿನ ಮುಲ್ಲಾವಾಡದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿ ಎಲ್ ಓ (BLO) ಆಗಿ ಸೇವೆ ಸಲ್ಲಿಸುತ್ತಿರುವ ಶಮ್ರಿನ್ ಖಾನ್ ಎಂಬುವವರು ಪ್ರಾಣಪಾಯಕ್ಕೆ ಸಿಲುಕುವ ಹಂತ ತಲುಪಿದ್ದಾರೆ. ಏಕಕಾಲದಲ್ಲಿ ಎರಡು ಇಲಾಖೆಗಳ ಜವಾಬ್ದಾರಿಯನ್ನು ಹೊತ್ತು, ಮಾನಸಿಕ ಮತ್ತು ದೈಹಿಕ ಒತ್ತಡ ತಾಳಲಾರದೆ ರಕ್ತದೊತ್ತಡ (BP) ಕಡಿಮೆಯಾಗಿ ಜುಲೈ 8ರಂದು ರಸ್ತೆಯ ಮೇಲೆಯೇ ಕುಸಿದು ಬಿದ್ದ ಘಟನೆ ತಾಲೂಕಿನಲ್ಲಿ ಸಂಚಲನ ಮೂಡಿಸಿದೆ.
ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಅವರನ್ನು ತಕ್ಷಣವೇ ಅಂಕೋಲಾ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಸದ್ಯ ಜುಲೈ ೯ ರಂದು ಚಿಕಿತ್ಸೆ ಪಡೆದು ಅವರು ಮನೆಗೆ ಮರಳಿದ್ದಾರೆ. ಆದರೆ, ಈ ಇಡೀ ಘಟನೆ ಸರ್ಕಾರಿ ವ್ಯವಸ್ಥೆಯ ಕ್ರೂರ ಮುಖ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನವನ್ನು ಎತ್ತಿ ತೋರಿಸಿದೆ.ಒಂದೆಡೆ ತಹಶೀಲ್ದಾರ್ ಕಚೇರಿಯಿಂದ ದಿನಕ್ಕೆ ಕನಿಷ್ಠ ನೂರು ಎಸ್ಐಆರ್ (SIR – Status Inquiry Report) ಫಾರಂಗಳನ್ನು ಭರ್ತಿ ಮಾಡಿಕೊಡಲೇಬೇಕೆಂಬ ಆದೇಶ. ತಮ್ಮ ವ್ಯಾಪ್ತಿಯಲ್ಲಿ ಬರುವ ಬರೋಬ್ಬರಿ ೧೨೩೦ ಮತದಾರರ ಮನೆ ಮನೆಗೆ ತೆರಳಿ ಈ ಪ್ರಕ್ರಿಯೆ ನಡೆಸುವುದು ಸಾಮಾನ್ಯ ಮಾತಲ್ಲ. ಈ ದುಡಿಮೆಯ ಬೆನ್ನಲ್ಲೇ, ಇನ್ನೊಂದೆಡೆ ಅಂಕೋಲಾ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ (Supervisor) ದಿನನಿತ್ಯದ ಟಿ ಹೆಚ್ ಆರ್ (THR) ಮತ್ತು ಮಕ್ಕಳ ತೂಕದ ಮಾಹಿತಿಯನ್ನು ನೀಡುವಂತೆ ಒತ್ತಡ ಹಾಕುತ್ತಿದ್ದಾರಂತೆ . ಚುನಾವಣಾ ಪ್ರಕ್ರಿಯೆಯ ಎಸ್ಐಆರ್ ಕೆಲಸ ನಡೆಯುವಾಗ ಅದಕ್ಕೇ ಪ್ರಥಮ ಆದ್ಯತೆ ನೀಡಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲದಂತೆ, ಅಂಗನವಾಡಿಯ ದೈನಂದಿನ ಲೆಕ್ಕಾಚಾರವನ್ನೂ ಒಟ್ಟಿಗೇ ಕೇಳಿದರೆ ಒಬ್ಬ ಒಂಟಿ ಮಹಿಳೆ ಹೇಗೆ ನಿಭಾಯಿಸಲು ಸಾಧ್ಯ?
ದಿನವಿಡೀ ಮತದಾರರ ಮನೆ ಅಲೆಯಬೇಕೋ ಅಥವಾ ಅಂಗನವಾಡಿಯ ಲೆಕ್ಕ ಇಡಬೇಕೋ ಎನ್ನುವ ಗೊಂದಲ ಮತ್ತು ಅತಿಯಾದ ಒತ್ತಡವೇ ಶಮ್ರಿನ್ ಖಾನ್ ಅವರ ಪ್ರಾಣಕ್ಕೆ ಕುತ್ತು ತಂದಿದೆ.ಇದಕ್ಕಿಂತಲೂ ಅತ್ಯಂತ ಖಂಡನೀಯ ಮತ್ತು ಅಮಾನವೀಯ ಸಂಗತಿಯೆಂದರೆ, ಇಲಾಖೆಯ ನಂಬಿ ಕೆಲಸ ಮಾಡುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಒತ್ತಡ ತಾಳಲಾರದೆ ರಸ್ತೆಯಲ್ಲೇ ಬಿದ್ದು ಆಸ್ಪತ್ರೆ ಸೇರಿದ್ದರೂ, ಅಂಕೋಲಾ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕನಿಷ್ಠ ಸೌಜನ್ಯಕ್ಕಾದರೂ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸುವ ಮಾನವೀಯತೆ ತೋರದಿರುವುದು. ಕೇವಲ ಕೆಲಸ ಮಾಡಿಸಿಕೊಳ್ಳುವುದಷ್ಟೇ ತಮ್ಮ ಜವಾಬ್ದಾರಿ, ಸಿಬ್ಬಂದಿಯ ಜೀವ ಹೋದರೂ ತಮಗೆ ಸಂಬಂಧವಿಲ್ಲ ಎನ್ನುವಂತಿದೆ ಅಧಿಕಾರಿಗಳ ಧೋರಣೆ. ಸ್ಥಳೀಯ ಆಡಳಿತವು ಇಂತಹ ತುರ್ತು ಸಂದರ್ಭಗಳಲ್ಲಿ ಸಿಬ್ಬಂದಿಯ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಯಾವುದಾದರೂ ಒಂದು ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಅವಕಾಶ ನೀಡಬೇಕಿದೆ. ಒಂದೇ ಬಾರಿಗೆ ಎರಡು ಭಾರೀ ಜವಾಬ್ದಾರಿಗಳನ್ನು ಹೆಗಲಿಗೇರಿಸಿ, ಪ್ರಾಣ ಹಿಂಡುವ ಇಂತಹ ಇಲಾಖಾ ಕಿರುಕುಳಕ್ಕೆ ಇನ್ನಾದರೂ ಬ್ರೇಕ್ ಬೀಳಬೇಕಿದೆ. ಇಲಾಖೆಯ ಈ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.













Leave a Reply