ಅಂಕೋಲಾ :ತಾಲೂಕಿನ ಉಪನೋಂದಣಿ ಕಚೇರಿಯಲ್ಲಿ ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಪ್ರಭಾರಿಯಾಗಿ ಸೇವೆ ಸಲ್ಲಿಸಿದ ಕುಂತಿಬಾಯಿ ಲಕ್ಷ್ಮಣ ಕುಮಾರನಾಯಕ ಅವರು ತಮ್ಮ ಮೂಲ ಸ್ಥಾನವಾದ ಕಾರವಾರದ ಜಿಲ್ಲಾ ಉಪನೋಂದಣಿ ಕೇಂದ್ರಕ್ಕೆ ಮರು ವರ್ಗಾವಣೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದಿನಾಂಕ 11/11/2026 ರಂದು ಕಚೇರಿಯ ಸಿಬ್ಬಂದಿ ಹಾಗೂ ವಕೀಲರ ವತಿಯಿಂದ ಅವರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ವಕೀಲರಾದ ಉಮೇಶ್ ನಾಯ್ಕ, ಗಜಾನನ ನಾಯ್ಕ, ಸುರೇಶ್ ಬಾನಾವಳಿಕರ, ಕಚೇರಿ ಸಿಬ್ಬಂದಿಗಳಾದ ಶೈಲಾ ಪ್ರಸನ್ನ ನಾಯಕ, ದಿವ್ಯಶ್ರೀ ಗುರುರಾಜ ನಾಯಕ ಸೇರಿದಂತೆ ಸ್ಥಳೀಯರಾದ ವೀಣಾ ಗಾಂವಕರ, ಈಶ್ವರ ನಾಯ್ಕ, ಮೂರ್ತಿ ನಾಯ್ಕ ಮುಂತಾದವರು ಉಪಸ್ಥಿತರಿದ್ದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲ ಉಮೇಶ್ ನಾಯ್ಕ ಅವರು, ಅಂಕೋಲಾದಲ್ಲಿ ಉಪನೋಂದಣಿ ಅಧಿಕಾರಿಯಾಗಿ ಹಲವಾರು ಕಷ್ಟದ ಪರಿಸ್ಥಿತಿಗಳನ್ನು ಎದುರಿಸಿ, ಒಬ್ಬ ಮಹಿಳಾ ಅಧಿಕಾರಿಯಾಗಿ ಕುಂತಿಬಾಯಿಯವರು ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿ ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ಅವರು, ಪ್ರಸ್ತುತ ತಹಶೀಲ್ದಾರ್ ಕಚೇರಿಯ ಎರಡನೇ ಮಹಡಿಯಲ್ಲಿ ಉಪನೋಂದಣಿ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಮೆಟ್ಟಿಲುಗಳನ್ನು ಹತ್ತಿ ಬರಲು ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ ಕೊಠಡಿಯೂ ತೀರಾ ಚಿಕ್ಕದಾಗಿರುವುದರಿಂದ ಗಾಳಿ-ಬೆಳಕಿನ ಕೊರತೆಯಾಗಿ ಉಸಿರಾಡಲೂ ಕಷ್ಟವಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅಂಕೋಲಾದ ಸತ್ಯಾಗ್ರಹ ಸ್ಮಾರಕದ ಕೆಳ ಅಂತಸ್ತಿನಲ್ಲಿ ಉಪನೋಂದಣಿ ಕಚೇರಿಯನ್ನು ಪ್ರಾರಂಭಿಸಲು ನಮ್ಮ ಹೋರಾಟ ಮುಂದುವರಿಯಲಿದ್ದು, ಈ ಕುರಿತು ನೂತನ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿಯ ಪ್ರಮುಖರಾದ ರಾಜೀವ್ ಗಾಂವಕರ ಅವರು ಕುಂತಿಬಾಯಿ ಅವರ ಕಾರ್ಯದಕ್ಷತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದರು.

ಬೆಂಗಳೂರಿನ ಲಗ್ಗೆರೆಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ಆರ್. ಶಂಭುಲಿಂಗ ಡಗ್ಗೆ ಅವರು ದಿನಾಂಕ 12/11/2026 ರಂದು ಅಂಕೋಲಾದ ನೂತನ ಉಪನೋಂದಣಿ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಅವರಿಗೂ ವಕೀಲರು ಹಾಗೂ ಸಿಬ್ಬಂದಿ ವರ್ಗದವರು ಶುಭ ಕೋರಿದರು. ಶಂಭುಲಿಂಗ ಡಗ್ಗೆ ಅವರು ಈ ಹಿಂದೆ 2019-2020ರ ಅವಧಿಯಲ್ಲಿಯೂ ಅಂಕೋಲಾದಲ್ಲಿ ಉಪನೋಂದಣಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇಲ್ಲಿನ ಕಚೇರಿಯ ಸಿಬ್ಬಂದಿ ಕೊರತೆ ಹಾಗೂ ಇನ್ನಿತರ ನ್ಯೂನತೆಗಳ ಬಗ್ಗೆ ಅವರಿಗೆ ಸಂಪೂರ್ಣ ಅರಿವಿರುವುದರಿಂದ, ಅವರ ಕಾರ್ಯವೈಖರಿಯ ಮೇಲೆ ಸಾರ್ವಜನಿಕರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿದೆ.













Leave a Reply