ಕಾರವಾರ : ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಡೆಯುವ ಪ್ರವಾಸೋದ್ಯಮ ಹಾಗೂ ಅರಣ್ಯ ಚಟುವಟಿಕೆಗಳಿಂದ ಸಂಗ್ರಹವಾಗುವ ಆದಾಯದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ನ್ಯಾಯಯುತ ಪಾಲು ನೀಡಬೇಕು ಮತ್ತು ಪ್ರವಾಸಿ ತಾಣಗಳ ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ಅಗತ್ಯ ಅನುದಾನ ಒದಗಿಸಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.

ಈ ಸಂಬಂಧ ಸಂಘದ ವತಿಯಿಂದ ಕಾರವಾರದ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ಇಲಾಖೆ, ವಿಲೇಜ್ ಫಾರೆಸ್ಟ್ ಕಮಿಟಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮಹತ್ವದ ಸಭೆ ನಡೆಯಿತು.ಜಿಲ್ಲೆಯ ಅನೇಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ VFC ಸಮಿತಿಗಳು ವಿವಿಧ ಚಟುವಟಿಕೆಗಳ ಮೂಲಕ ಶುಲ್ಕ ಸಂಗ್ರಹಿಸುತ್ತಿದ್ದರೂ, ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಯಾವುದೇ ಆದಾಯ ಸಿಗುತ್ತಿಲ್ಲ. ಆದರೆ, ಅಲ್ಲಿನ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ಕುಡಿಯುವ ನೀರು ಹಾಗೂ ಶೌಚಾಲಯಗಳ ನಿರ್ವಹಣೆಯ ಜವಾಬ್ದಾರಿ ಪಂಚಾಯಿತಿಗಳ ಮೇಲೆಯೇ ಬಿದ್ದು ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುತ್ತಿದೆ ಎಂದು ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಯಿತು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಕಲಂ 59ರ ಪ್ರಕಾರ ಅರಣ್ಯ ಪ್ರದೇಶಗಳ ನಿರ್ವಹಣೆ ಜೊತೆಗೆ ಆದಾಯದ ಸೂಕ್ತ ಪಾಲನ್ನು ಪಂಚಾಯಿತಿಗಳಿಗೆ ನೀಡಬೇಕು ಎಂದು ಸಂಘ ಒತ್ತಾಯಿಸಿತು. ಅಲ್ಲದೆ, ವಿಲೇಜ್ ಫಾರೆಸ್ಟ್ ಕಮಿಟಿಗಳು ಗ್ರಾಮಸಭೆಗಳ ಮೂಲಕವೇ ಆಯ್ಕೆಯಾಗಿ ಪಂಚಾಯಿತಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.ಈ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಅವರು, ಅರಣ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ, ಗ್ರಾಮ ಪಂಚಾಯಿತಿಗಳಿಗೆ ಆದಾಯದ ಪಾಲು ದೊರೆಯುವಂತೆ ಸರ್ಕಾರದ ಮಟ್ಟದಲ್ಲಿ ಆದೇಶ ಹೊರಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಈ-ಸ್ವತ್ತು ಅನುಷ್ಠಾನದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳು, ನಗರಾಭಿವೃದ್ಧಿ ಪ್ರಾಧಿಕಾರದ ಲೇಔಟ್ ಅನುಮೋದನೆ ಪ್ರಕ್ರಿಯೆ, ಕಟ್ಟಡ ಪರವಾನಗಿ ಹಾಗೂ ಪಂಚಾಯಿತಿಗಳ ಅಧಿಕಾರ ವ್ಯಾಪ್ತಿಯ ಗೊಂದಲಗಳ ಬಗ್ಗೆಯೂ ಸುದೀರ್ಘ ಚರ್ಚೆ ನಡೆದು, ಇವುಗಳ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಯಿತು. ಪ್ರವಾಸೋದ್ಯಮದಿಂದ ಸೂಕ್ತ ಆದಾಯ ದೊರೆತರೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೊಸ ಬಲ ಸಿಗಲಿದ್ದು, ಪಿಡಿಒ ಸಂಘದ ಈ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
✍️ಕ್ರಾಂತಿಕಾರಿ ನ್ಯೂಸ್. ಅಂಕೋಲಾ













Leave a Reply