ಧಾರವಾಡ ಪೀಠದಲ್ಲೇ ಅಂಕೋಲಾ ನ್ಯಾಯಾಲಯ ಮುಂದುವರಿಯಲಿ- ಅಂಕೋಲಾ ವಕೀಲರ ಸಂಘದ ಆಗ್ರಹ
ಅಂಕೋಲಾ ನ್ಯಾಯಾಲಯದ ವ್ಯಾಪ್ತಿಯನ್ನು ಧಾರವಾಡ ಹೈಕೋರ್ಟ್ ಪೀಠದಿಂದ ಮುಕ್ತಗೊಳಿಸಿ, ಮಂಗಳೂರಿನಲ್ಲಿ ಹೊಸದಾಗಿ ಸ್ಥಾಪಿಸುವ ಹೈಕೋರ್ಟ್ ಪೀಠಕ್ಕೆ ಸೇರಿಸುವ ನಡೆಗೆ ಅಂಕೋಲಾ ವಕೀಲರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿಂದೆ ಧಾರವಾಡ ಪೀಠದ ವ್ಯಾಪ್ತಿಯಲ್ಲಿದ್ದಾಗ ಉತ್ತರಕನ್ನಡ ಜಿಲ್ಲೆಯ ಎಲ್ಲಾ ಕಕ್ಷಿದಾರರಿಗೂ ಮತ್ತು ವಕೀಲರಿಗೂ ಪ್ರಯಾಣ ಹಾಗೂ ಸಮಯದ ದೃಷ್ಟಿಯಿಂದ ತುಂಬಾ ಸಹಾಯವಾಗುತ್ತಿತ್ತು. ಈಗ ದೂರದ ಮಂಗಳೂರು ಪೀಠಕ್ಕೆ ಸೇರಿಸುವುದರಿಂದ ಜಿಲ್ಲೆಯ ಕಕ್ಷಿದಾರರಿಗೆ ಭಾರೀ ಆರ್ಥಿಕ ನಷ್ಟ ಹಾಗೂ ಸಮಯದ ವ್ಯರ್ಥ ಉಂಟಾಗಲಿದೆ ಎಂದು ಸಂಘ ಎಚ್ಚರಿಸಿದೆ.
ಅರ್ಜಿಯಲ್ಲಿ ತಿಳಿಸಿರುವಂತೆ, ಈಗ ಇರುವಂತೆಯೇ ಧಾರವಾಡ ಹೈಕೋರ್ಟ್ ಪೀಠದಲ್ಲೇ ಅಂಕೋಲಾ ನ್ಯಾಯಾಲಯದ ವ್ಯಾಪ್ತಿಯನ್ನು ಮುಂದುವರಿಸಬೇಕು. ಒಂದು ವೇಳೆ ಹೊಸದಾಗಿ ಹೈಕೋರ್ಟ್ ಪೀಠ ನಿರ್ಮಾಣವಾಗುವುದಿದ್ದಲ್ಲಿ, ಅದನ್ನು ಅಂಕೋಲಾ ತಾಲೂಕಿನಲ್ಲೇ ಸ್ಥಾಪಿಸಬೇಕು ಎಂದು ವಕೀಲರು ಕಡಾಖಂಡಿತವಾಗಿ ಆಗ್ರಹಿಸಿದ್ದಾರೆ.
ಮಂಗಳೂರು ಪೀಠಕ್ಕೆ ಅಂಕೋಲಾ ನ್ಯಾಯಾಲಯವನ್ನು ಸೇರಿಸುವುದಕ್ಕೆ ತಮ್ಮ ತೀವ್ರ ವಿರೋಧವಿದ್ದು, ಈ ಕುರಿತು ವಕೀಲರ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮಾನ್ಯ ತಹಶೀಲ್ದಾರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ ಜೊತೆಗೆ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯಪಾಲರಿಗೆ ಸಲ್ಲಿಸಲಾಗಿದೆ.













Leave a Reply