ಅಂಕೋಲಾ :ಜುಲೈ 2. ತಾಲೂಕಿನ ಅವರ್ಸಾ ರಾಷ್ಟ್ರೀಯ ಹೆದ್ದಾರಿಯ ಬ್ರಿಜ್ ಸಮೀಪ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಪ್ರಯಾಣಿಕರಿದ್ದ ಸೀಬರ್ಡ್ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ.
ಅಂಕೋಲಾ ತಾಲೂಕಿನಿಂದ ಕಾರವಾರದ ಕಡೆಗೆ ಸಾಗುತ್ತಿದ್ದ ಈ ಸೀಬರ್ಡ್ ಬಸ್, ಅವರ್ಸಾ ಬ್ರಿಜ್ನಿಂದ ಅನತಿ ದೂರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬೆಳಿಗ್ಗೆ ಸಮಯ 10:20ಕ್ಕೆ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತಕ್ಕೀಡಾದ ಬಸ್ನ ಚಾಲಕ ಅಂಕೋಲಾದ ಕಾಕರಮಠದ ಸ್ಥಳೀಯ ನಿವಾಸಿ ರಫಿಕ್ ಎಂದು ತಿಳಿದು ಬಂದಿದೆ.
ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗುತ್ತಿದ್ದಂತೆ, ರಸ್ತೆ ಬದಿಯಲ್ಲಿದ್ದ ದೊಡ್ಡ ಮರದ ಕೊಂಬೆಯೊಂದು ಬಸ್ಸಿಗೆ ಅಡ್ಡ ಬಂದಿದೆ. ಈ ಮರದ ಕೊಂಬೆಯ ಆಸರೆಯಿಂದಾಗಿ ಬಸ್ ಮತ್ತೊಮ್ಮೆ ಉರುಳುವುದು ತಪ್ಪಿದೆ. ಇಲ್ಲದಿದ್ದರೆ ಭೀಕರ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.ಅಪಘಾತದ ತೀವ್ರತೆಗೆ ಬಸ್ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರು ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ನೆರವಿನಿಂದ ಗಾಯಾಳುಗಳನ್ನು ಚಿಕಿತ್ಸೆಗಾಗಿ ಅಂಕೋಲಾದ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅದೃಷ್ಟವಶಾತ್ ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ತಕ್ಷಣವೇ ಧಾವಿಸಿದ್ದು, ಸಾರ್ವಜನಿಕರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.













Leave a Reply