ಅಂಕೋಲಾ: ತಾಲೂಕಿನ ಬೊಬ್ರುವಾಡ ಪಂಚಾಯತಿ ವ್ಯಾಪ್ತಿಯ ತೆಂಕಣಕೇರಿ ಬಳಿ ಇರುವ ಎಂಎಸ್ಐಎಲ್ (MSIL) ಮದ್ಯದಂಗಡಿಯ ಪಕ್ಕದ ಜನರಲ್ ಸ್ಟೋರ್ಗಳಲ್ಲಿ ಸಾರ್ವಜನಿಕವಾಗಿ ಮತ್ತು ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಬಲವಾದ ಶಂಕೆಯ ಮೇರೆಗೆ ಅಂಕೋಲಾ ಪೊಲೀಸ್ ಠಾಣೆಯ ಪಿಎಸ್ಐ ಗುರುನಾಥ ಬಿ. ಹಾದಿಮನಿ ಅವರು ತಮ್ಮ ಸಿಬ್ಬಂದಿಯೊಂದಿಗೆ ಇಂದು ರಾತ್ರಿ ದಿಢೀರ್ ದಾಳಿ ನಡೆಸಿದ್ದಾರೆ. ಇಂದು ರಾತ್ರಿ ಸುಮಾರು 7.45 ರ ಸುಮಾರಿಗೆ ನಡೆದ ಈ ಭರ್ಜರಿ ಕಾರ್ಯಾಚರಣೆಯು ಇಡೀ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ವಿಶ್ವಾಸಾರ್ಹ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಗುರುನಾಥ ಬಿ. ಹಾದಿಮನಿ ಅವರ ನೇತೃತ್ವದ ಪೊಲೀಸ್ ತಂಡವು, ಅಂಗಡಿಯೊಳಗಿದ್ದವರು ತಪ್ಪಿಸಿಕೊಳ್ಳದಂತೆ ಹಾಗೂ ಯಾವುದೇ ಸಾಕ್ಷ್ಯಗಳು ನಾಶವಾಗದಂತೆ ತಡೆಯಲು ಅತ್ಯಂತ ಜಾಗರೂಕತೆಯಿಂದ ಕಾರ್ಯಾಚರಣೆ ರೂಪಿಸಿತ್ತು. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆಯೇ ಒಳಗಿದ್ದವರು ಅಲರ್ಟ್ ಆಗುವ ಮುನ್ನವೇ ಸ್ವತಃ ಪೊಲೀಸರೇ ಮುನ್ನುಗ್ಗಿ ಜನರಲ್ ಸ್ಟೋರ್ನ ಶಟರ್ಸ್ (ಸೇಟ್ರೇಸ್) ಅನ್ನು ಸಂಪೂರ್ಣವಾಗಿ ಮುಚ್ಚಿ ಬಿಟ್ಟರು ಎಂದು ತಿಳಿದು ಬಂದಿದೆ.
ಪೊಲೀಸರ ಈ ದಿಢೀರ್ ನಡೆಗೆ ಅಂಗಡಿಯ ಮಾಲೀಕರು ಹಾಗೂ ಒಳಗಿದ್ದವರು ತಬ್ಬಿಬ್ಬಾದರು.ಆದರೆ ಈ ಕಾರ್ಯಾಚರಣೆಯ ವೇಳೆ ಒಂದು ವಿಚಿತ್ರ ಸನ್ನಿವೇಶ ಸೃಷ್ಟಿಯಾಯಿತು. ದಾಳಿ ನಡೆಯುವ ಮೊದಲೇ ಆ ಅಂಗಡಿಗೆ ಕೇವಲ ಆಮ್ಲೆಟ್ ಹಾಗೂ ಇತರೆ ತಿಂಡಿಗಳನ್ನು ಸವಿಯುವ ಉದ್ದೇಶದಿಂದ ಬಂದಿದ್ದ ಕೆಲವು ಸಾಮಾನ್ಯ ಸಾರ್ವಜನಿಕರು ಸಹ ಹೊರಗೆ ಬರಲಾಗದೆ ಅಂಗಡಿಯೊಳಗೆ ಲಾಕ್ ಆಗಿ ಸಿಲುಕಿಕೊಂಡರು. ಪೊಲೀಸರು ಶಟರ್ಸ್ ಮುಚ್ಚಿದ್ದರಿಂದ ಒಳಗಿದ್ದವರು ಹೊರಗೆ ಬರಲಾರದೆ, ಇತ್ತ ಪೊಲೀಸರ ಕಾನೂನು ಪ್ರಕ್ರಿಗೆ ಹೆದರಿ ಕಂಗೆಟ್ಟಿದ್ದರು. ತದನಂತರ ಅಂಗಡಿಯೊಳಗಿದ್ದ ಪ್ರತಿಯೊಬ್ಬ ಸಾರ್ವಜನಿಕರ ಹೆಸರು, ವಿಳಾಸ ಹಾಗೂ ಇತರೆ ವಿವರಗಳನ್ನು ಪೊಲೀಸರು ತಮ್ಮ ಡೈರಿಯಲ್ಲಿ ಬರೆದುಕೊಂಡರು. ಈ ಇಡೀ ಪ್ರಕ್ರಿಯೆಯ ಸಂದರ್ಭದಲ್ಲಿ ಸ್ಥಳದಲ್ಲಿ ದೀರ್ಘಕಾಲ ತೀವ್ರ ಗೊಂದಲ, ಗದ್ದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸರ ಈ ಹಠಾತ್ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ನೂರಾರು ಜನ ಸ್ಥಳದಲ್ಲಿ ಜಮಾಯಿಸಿದ್ದರು. ನೆರೆದಿದ್ದ ಸಾರ್ವಜನಿಕರು ಸ್ಥಳೀಯ ಆಡಳಿತ ಹಾಗೂ ವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ ವ್ಯಂಗ್ಯವಾಡ ತೊಡಗಿದರು. “ಇಲ್ಲಿ ಪಕ್ಕದಲ್ಲೇ ಎಂಎಸ್ಐಎಲ್ ಬಾರ್ ಇದೆ, ಆದರೆ ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿಯ ಅಧಿಕೃತ ಅನುಮತಿ ಅಥವಾ ಪರ್ಮಿಷನ್ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪಂಚಾಯತಿ ಪರ್ಮಿಷನ್ ಇಲ್ಲದಿದ್ದರೂ ಇಲ್ಲಿ ಏನೇನೋ ಅಕ್ರಮ ವ್ಯವಹಾರಗಳು ನಡೆಯುತ್ತಿವೆ. ಯಾರ್ಯಾರಿಗೆ ಎಷ್ಟೆಷ್ಟು ಪಾಲೂ ಹೋಗುತ್ತಿದೆಯೋ, ಯಾರ ಕೈ ಬೆಚ್ಚಗಾಗುತ್ತಿದೆಯೋ?” ಎಂದು ಸಾರ್ವಜನಿಕರು ತೀವ್ರ ಆಕ್ರೋಶದಿಂದ ತಮ್ಮ ತಮ್ಮಲ್ಲೇ ಗುಸುಗುಸು ಮಾತನಾಡಿಕೊಳ್ಳುತ್ತಾ, ನಡೆಯುತ್ತಿದ್ದ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಅಂಕೋಲಾ ತಾಲೂಕಿನಾದ್ಯಂತ ಇತ್ತೀಚಿನ ದಿನಗಳಲ್ಲಿ ಇಂತಹ ಅಕ್ರಮ ದಂಧೆಗಳು ರಾಜಾರೋಷವಾಗಿ ನಡೆಯುತ್ತಿವೆ ಎಂಬ ಸಾರ್ವಜನಿಕ ದೂರುಗಳು ವ್ಯಾಪಕವಾಗಿವೆ. ಮುಖ್ಯವಾಗಿ ತಾಲೂಕಿನ ಪ್ರಮುಖ ಮದ್ಯದ ಅಂಗಡಿಗಳಿಂದ ಬಾಕ್ಸ್ ಗಟ್ಟಲೆ ಮದ್ಯವನ್ನು ಅನಧಿಕೃತವಾಗಿ ವಾಹನಗಳಲ್ಲಿ ಸಾಗಿಸಿ, ಗ್ರಾಮಾಂತರ ಪ್ರದೇಶದ ಸಣ್ಣಪುಟ್ಟ ಕಿರಾಣಿ ಅಂಗಡಿಗಳು ಹಾಗೂ ಜನರಲ್ ಸ್ಟೋರ್ಗಳಲ್ಲಿ ದುಬಾರಿ ಬೆಲೆಗೆ ಕಾನೂನು ಬಾಹಿರವಾಗಿ ಮರು ಮಾರಾಟ ಮಾಡಲಾಗುತ್ತಿದೆ. ನಿಯಮಗಳ ಪ್ರಕಾರ ಯಾವುದೇ ಪರವಾನಗಿ (ಲೈಸೆನ್ಸ್) ಇಲ್ಲದೆ ಸಾಮಾನ್ಯ ಅಂಗಡಿಗಳಲ್ಲಿ ಮದ್ಯ ಇಟ್ಟುಕೊಳ್ಳುವುದು ಅಥವಾ ಮಾರಾಟ ಮಾಡುವುದು ಕರ್ನಾಟಕ ಅಬಕಾರಿ ಕಾಯ್ದೆಯಡಿ ಗಂಭೀರ ಹಾಗೂ ಜಾಮಿನು ರಹಿತ ಅಪರಾಧವಾಗಿದೆ.













Leave a Reply