ಅಂಕೋಲಾ: ತಪ್ಪು ಮಾಡಿದವರನ್ನು ಶಿಕ್ಷಿಸಬೇಕಾದ ಸರ್ಕಾರಿ ಅಧಿಕಾರಿಯೇ, ಅಕ್ರಮ ಎಸಗಿದವರನ್ನು ರಕ್ಷಿಸಲು ಖುದ್ದಾಗಿ ನಿಂತರೆ ಹೇಗಿರುತ್ತದೆ? ಅದಕ್ಕೊಂದು ಜೀವಂತ ಉದಾಹರಣೆ ಅಂಕೋಲಾ ತಾಲೂಕಿನ ಹೊನ್ನೆಬೈಲ ಗ್ರಾಮ ಪಂಚಾಯತ್ನಲ್ಲಿ ಸೃಷ್ಟಿಯಾಗಿದೆ. ಇಲ್ಲಿನ ಪಿಡಿಒ ಲೀಲಾ ಬಿ. ಆಗೇರ್ ಅವರು ಕಾನೂನು ಜಾರಿ ಮಾಡುವುದನ್ನು ಬಿಟ್ಟು, ಅಕ್ರಮ ಕಟ್ಟಡವನ್ನು ಉಳಿಸಿಕೊಡಲು ಕಥೆ ಕಟ್ಟಿ ಕಂದಾಯ ಇಲಾಖೆಯನ್ನೇ ದಿಕ್ಕು ತಪ್ಪಿಸುತ್ತಿರುವ ನೈಜ ಚಿತ್ರಣ ಬಯಲಾಗಿದೆ.

ರಸ್ತೆಯಿಂದ 12 ಪುಟ್ ಬಿಟ್ಟು ಕಟ್ಟಡ ಕಟ್ಟಬೇಕು ಎಂಬ ನಿಯಮಾವಳಿ ಇದೆ.. ರಸ್ತೆಯ ಒಂದು ಪುಟ ಅಂತರದಲ್ಲಿ ಅಂಗಳ ನಿರ್ಮಾಣವಾಗಿದೆ.☝️
ಇಡೀ ಪ್ರಕರಣದ ಅಸಲಿ ಕಥೆ ಇಲ್ಲಿದೆ: ಹೊನ್ನೇಬೈಲ್ ಗ್ರಾಮದ ಸರ್ವೆ ನಂಬರ್ 214/6 ರ ಕೃಷಿ ಜಮೀನಿನಲ್ಲಿ ಶ್ರೀಮತಿ ಲಕ್ಷ್ಮಿ ಮೋನಪ್ಪ ನಾಯ್ಕ ಎಂಬುವವರು ಯಾವುದೇ ಭೂ ಪರಿವರ್ತನೆ (NA) ಮಾಡದೇ ಹಾಗೂ ಗ್ರಾಮ ಪಂಚಾಯತಿಯಿಂದ ಯಾವುದೇ ಪರವಾನಗಿ ಪಡೆಯದೇ ವಸತಿ ಮನೆಯನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ. ಕಾಮಗಾರಿ ಆರಂಭವಾದಾಗಲೇ ಪಂಚಾಯತ್ ವತಿಯಿಂದ ಕೆಲಸ ನಿಲ್ಲಿಸುವಂತೆ ದಿನಾಂಕ 08-01-2026 ರಂದು ತಡೆ ನೋಟಿಸ್ ನೀಡಲಾಗಿತ್ತು. ಆದರೆ, ಪಂಚಾಯತ್ ನೋಟಿಸಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಮಾಲೀಕರು ಇಡೀ ಮನೆಯನ್ನು ತರಾತುರಿಯಲ್ಲಿ ಕಟ್ಟಿ ಮುಗಿಸಿದರು. ಸರ್ಕಾರದ ಕಟ್ಟುನಿಟ್ಟಿನ ಆರ್ಡಿಪಿಆರ್ (RDPR) ಸುತ್ತೋಲೆಯ ಪ್ರಕಾರ, ನೋಟಿಸ್ ಉಲ್ಲಂಘಿಸಿ ಕಟ್ಟಡ ಕಟ್ಟಿದ ತಕ್ಷಣವೇ ಪೊಲೀಸ್ ಮತ್ತು ಕಂದಾಯ ಇಲಾಖೆಯ ನೆರವು ಪಡೆದು ಅದನ್ನು ನೆಲಸಮಗೊಳಿಸುವುದು ಪಿಡಿಒ ಅವರ ಕರ್ತವ್ಯವಾಗಿತ್ತು. ಆದರೆ, ಹೊನ್ನೇಬೈಲ್ ಪಿಡಿಒ ಅವರು ಇಲ್ಲಿ ಅಕ್ರಮದ ವಿರುದ್ಧ ಕ್ರಮ ಜರುಗಿಸದೆ, ಉಲ್ಟಾ ಮಾಲೀಕರ ಪರವಾಗಿ ನಿಂತು ಹೊಸ ನಾಟಕ ಶುರು ಮಾಡಿದ್ದಾರೆ.

ಅನಧಿಕೃತ ಕಟ್ಟಡ ನಿರ್ಮಾಣವಾದಲ್ಲಿ ನೆಲಸಮಗೊಳಿಸುವ ಪಂಚಾಯತ್ ರಾಜ್ ಇಲಾಖೆಯ ಸುತ್ತೋಲೆ.
ಇತ್ತೀಚೆಗೆ ಪಿಡಿಒ ಅವರು ಮಾನ್ಯ ತಹಶೀಲ್ದಾರರಿಗೆ ಬರೆದಿರುವ ಅಧಿಕೃತ ಪತ್ರವನ್ನು ಗಮನಿಸಿದರೆ ಅವರ ಅಕ್ರಮ ಪ್ರೇಮ ಎಂಥವರಿಗೂ ಅರ್ಥವಾಗುತ್ತದೆ. ಸದರಿ ಕಟ್ಟಡಕ್ಕೆ ಮಾಲೀಕರು ಯಾವುದೇ ‘ಫಾರ್ಮ್ ಹೌಸ್’ ಪರವಾನಗಿಯ ಅರ್ಜಿಯನ್ನೇ ಸಲ್ಲಿಸದಿದ್ದರೂ, ಜಮೀನಿನಲ್ಲಿ ಯಾವುದೇ ಕೃಷಿ ಚಟುವಟಿಕೆ ಇಲ್ಲದಿದ್ದರೂ, ಪಿಡಿಒ ಅವರು ತಾವಾಗಿಯೇ “ಕೃಷಿಕರಿಗೆ ಫಾರ್ಮ್ ಹೌಸ್ ಕಟ್ಟಲು ಕಂದಾಯ ಕಾಯ್ದೆಯಲ್ಲಿ ಅವಕಾಶವಿದೆ” ಎಂದು ತಹಶೀಲ್ದಾರರ ಮುಂದೆ ವಕಾಲತ್ತು ವಹಿಸಿದ್ದಾರೆ. ಅಂದರೆ, ತಪ್ಪು ಮಾಡಿದ ಮಾಲೀಕನಿಗೂ ತಿಳಿಯದ ಕಳ್ಳದಾರಿಗಳನ್ನು ಸ್ವತಃ ಸರ್ಕಾರಿ ಅಧಿಕಾರಿಯೇ ಹುಡುಕಿಕೊಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಪ್ರಾಥಮಿಕ ಹೊಣೆಗಾರಿಕೆ ಪಂಚಾಯತ್ಗೆ ಇರುತ್ತದೆ ಎಂಬ ಆರ್ಡಿಪಿಆರ್ ಸುತ್ತೋಲೆಯನ್ನು ಪತ್ರದಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಿ, “ತೆರವುಗೊಳಿಸುವ ಅಧಿಕಾರ ನಮಗಿದೆಯೋ ಇಲ್ಲವೋ ಸ್ಪಷ್ಟತೆ ಇಲ್ಲ” ಎಂದು ಇಡೀ ಜವಾಬ್ದಾರಿಯನ್ನು ತಹಶೀಲ್ದಾರರ ತಲೆಗೆ ಕಟ್ಟಿ ಕೈತೊಳೆದುಕೊಳ್ಳಲು ನೋಡುತ್ತಿದ್ದಾರೆ.
ಈ ಕಥೆಯ ಅತ್ಯಂತ ಕಟು ವಾಸ್ತವ ಎಂದರೆ, ಕಾನೂನುಬಾಹಿರ ಕಟ್ಟಡದ ವಿರುದ್ಧ ದೂರು ನೀಡಿದ ಪತ್ರಕರ್ತರನ್ನು ಹೆದರಿಸಲು ಮಾಲೀಕರ ಕಡೆಯವರು “ಆತ್ಮಹತ್ಯೆ ಮಾಡಿಕೊಳ್ಳುವುದಾಗಿ” ಬರೆದಿರುವ ಬೆದರಿಕೆ ಪತ್ರವನ್ನು ಪಿಡಿಒ ಅವರು ಅಧಿಕೃತವಾಗಿ ದಾಖಲಿಸಿಕೊಂಡು ತಹಶೀಲ್ದಾರರ ಕಚೇರಿಗೆ ರವಾನಿಸಿದ್ದಾರೆ. ತಪ್ಪು ಮಾಡಿದವರನ್ನು ಜೈಲಿಗಟ್ಟಬೇಕಾದ ಅಧಿಕಾರಿ, ಇಂತಹ ಬ್ಲ್ಯಾಕ್ಮೇಲ್ ತಂತ್ರಕ್ಕೆ ಸಾಥ್ ನೀಡಿ ದೂರುದಾರರ ಮೇಲೆ ಒತ್ತಡ ಹೇರಲು ಯತ್ನಿಸುತ್ತಿರುವುದು ಆಡಳಿತ ಯಂತ್ರದ ದುಸ್ಥಿತಿಯನ್ನು ತೋರಿಸುತ್ತದೆ. ಇಲಾಖೆಗಳು ಪರಸ್ಪರ ಪತ್ರ ವ್ಯವಹಾರ ನಡೆಸುತ್ತಾ ಕಾಲಹರಣ ಮಾಡುವಂತೆ ಮಾಡಿ, ಅಕ್ರಮ ಕಟ್ಟಡದ ಮಾಲೀಕರು ಅಲ್ಲಿ ನಿರಾತಂಕವಾಗಿ ವಾಸ ಹೂಡಲು ಪಿಡಿಒ ಅವರೇ ಪರೋಕ್ಷವಾಗಿ ದಾರಿ ಮಾಡಿಕೊಡುತ್ತಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಸದ್ಯಕ್ಕೆ ಇಬ್ಬರೂ ಅಧಿಕಾರಿಗಳು ಜಂಟಿ ತಂಡ ರಚಿಸಿ ಈ ಅನಧಿಕೃತ ಕಟ್ಟಡವನ್ನು ನೆಲಸಮಗೊಳಿಸದಿದ್ದರೆ, ಅಕ್ರಮಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಹೊನ್ನೇಬೈಲ್ ಪಿಡಿಒ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಅಕ್ರಮ ತಿಳಿದಿದ್ದರೂ ಕೂಡ ಅನಧಿಕೃತ ಕಟ್ಟಡಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಕೈಗೊಳ್ಳದ ಸಂಬಂಧಿಸಿದ ಅಧಿಕಾರಿಗಳ ಮೇಲೆ ದೂರು ಸಲ್ಲಿಸಿ ಕರ್ನಾಟಕ ಲೋಕಾಯುಕ್ತದ ಬೋನಿಗೆ ತಳ್ಳಲು ದೂರುದಾರರು ಸರ್ವಸನ್ನದ್ಧರಾಗಿದ್ದಾರೆ.













Leave a Reply