ಪಿಡಿಒ ಹಲ್ಲೆ ಪ್ರಕರಣ: ಜಿಲ್ಲಾ ಪಂಚಾಯತ್ ಸಿಇಒ ಅವರಿಂದ ಗಂಭೀರ ಪರಿಗಣನೆ – ಎಸ್‌ಪಿ ಅವರಿಗೂ ಮನವಿ ಸಲ್ಲಿಕೆ.
ಕಾರವಾರ: ಶಿರಳಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ ಆರ್. ನಾಯ್ಕ ಅವರ ಮೇಲೆ ನಡೆದ ಅಮಾನವೀಯ ಹಲ್ಲೆ ಮತ್ತು ಕೊಲೆ ಬೆದರಿಕೆ ಪ್ರಕರಣವನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ನಿನ್ನೆ ದಿನಾಂಕ 02-04-2026 ರಂದು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಅಧಿಕೃತ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷರಾದ ಗಿರೀಶ್ ನಾಯಕ್ ಅವರ ನೇತೃತ್ವದ ನಿಯೋಗವು ಮೊದಲು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು (CEO) ಭೇಟಿ ಮಾಡಿ ಸಿದ್ದಾಪುರದಲ್ಲಿ ನಡೆದ ಘಟನೆಯ ಸಂಪೂರ್ಣ ವಿವರಗಳನ್ನು ನೀಡಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿಇಒ ಅವರು, “ಸರ್ಕಾರಿ ಕರ್ತವ್ಯದಲ್ಲಿರುವ ಅಧಿಕಾರಿಯ ಮೇಲೆ ನಡೆದ ಈ ಹಲ್ಲೆ ಪ್ರಕರಣವನ್ನು ಜಿಲ್ಲಾ ಪಂಚಾಯತ್ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ” ಎಂದು ತಿಳಿಸಿದರು. ಅಧಿಕಾರಿಗಳ ರಕ್ಷಣೆ ಮತ್ತು ಘಟನೆಯ ಕುರಿತು ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಬಗ್ಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಅದರ ಬೆನ್ನಲ್ಲೇ ನಿಯೋಗವು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು (SP) ಭೇಟಿ ಮಾಡಿ, ಪ್ರಕರಣದ ಅಧಿಕೃತ ಮನವಿಯನ್ನು ಸಲ್ಲಿಸಿತು. ಆರೋಪಿ ಪ್ರಭು ದೊಡ್ಮನಿ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಂಘದ ವತಿಯಿಂದ ಈ ವೇಳೆ ಒತ್ತಾಯಿಸಲಾಯಿತು.
ಈ ಮಹತ್ವದ ಭೇಟಿಯ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಮಂಜುನಾಥ ಟಿ ಸಿ, ಸಂಘಟನಾ ಕಾರ್ಯದರ್ಶಿ ಗಿರೀಶ್ ತಳವಾರ್ ಹಾಗೂ ರಾಜ್ಯ ಪರಿಷತ್ ಸದಸ್ಯ ಅಣ್ಣಪ್ಪ ಮುಕ್ರಿ ಅವರು ಉಪಸ್ಥಿತರಿದ್ದರು. ಅಲ್ಲದೆ, ಮಹಿಳಾ ಪದಾಧಿಕಾರಿಗಳಾದ ಮಹಿಳಾ ಉಪಾಧ್ಯಕ್ಷೆ ಪವಿತ್ರ ಸಂದೀಪ್ ಕೊಠಾರ್ಕರ್, ಪ್ರಭಾವತಿ ಬಂಟ್ ಮತ್ತು ಮಧುರಾ ಅವರು ಕೂಡ ನಿಯೋಗದಲ್ಲಿದ್ದು, ನೌಕರರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈಗ ಪ್ರಕರಣವು ತಾರ್ಕಿಕ ಅಂತ್ಯ ಕಾಣುವ ನಿರೀಕ್ಷೆಯಿದೆ.






Leave a Reply