ಅಂಕೋಲಾ: ಪಟ್ಟಣದ ಹಳೆಯ ಸಮರ್ಥ ಟಾಕೀಸ್ ಆವರಣ ಗೋಡೆಯ ಮುಂದೆ, ಸಾರ್ವಜನಿಕ ರಸ್ತೆ ಬದಿಯಲ್ಲಿ ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ದೀರ್ಘಾವಧಿಯಿಂದ ವ್ಯಾಪಾರ ಮಾಡುತ್ತಿರುವ ತಮಗೆ ಒಕ್ಕಲೆಬ್ಬಿಸುವ ಭೀತಿ ಎದುರಾಗಿದ್ದು, ತಮ್ಮ ಬದುಕಿನ ಅಸ್ತಿತ್ವಕ್ಕೆ ಧಕ್ಕೆ ಬರದಂತೆ ಹಾಗೂ ಅಂಗಡಿಗಳನ್ನು ಪ್ರಸ್ತುತ ಸ್ಥಳದಿಂದ ತೆರವುಗೊಳಿಸದಂತೆ ಆಗ್ರಹಿಸಿ ಸ್ಥಳೀಯ ನೋಂದಾಯಿತ ಬೀದಿ ಬದಿ ವ್ಯಾಪಾರಸ್ಥರು ಇವತ್ತು ಜಂಟಿ ಮನವಿ ಸಲ್ಲಿಸಿದರು.

ಅಂಕೋಲಾ ಪುರಸಭೆ ವ್ಯಾಪ್ತಿಯ ಮಾರುಕಟ್ಟೆ ಪ್ರದೇಶದಲ್ಲಿರುವ ಈ ಹಿಂದಿನ ಸಮರ್ಥ ಚಲನಚಿತ್ರ ಮಂದಿರವನ್ನು ಕೆಡವಿ. ವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಾಣವಾಗುತ್ತಿರುವ ಕಟ್ಟಡವು ನಿಯಮಾವಳಿಗಳ ಪ್ರಕಾರ ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕಾದ ನಿಯಮಿತ ಅಂತರದ (ಸೆಟ್‌ಬ್ಯಾಕ್) ಉಲ್ಲಂಘನೆಯಾಗುತ್ತಿರುವ ಕುರಿತು ಹಾಗೂ ಕಟ್ಟಡದ ಮುಂಭಾಗದಲ್ಲಿ ಅನುಮೋದಿತ ನೀಲಿ ನಕ್ಷೆಯನ್ನು ಪ್ರದರ್ಶಿಸದ ಬಗ್ಗೆ ವ್ಯಾಪಾರಸ್ಥರು ತಮ್ಮ ಅರ್ಜಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಈ ಕುರಿತು ಬೀದಿ ಬದಿ ವ್ಯಾಪಾರಸ್ಥರು ಇಂದು ಅಂಕೋಲಾ ಪುರಸಭೆ ಕಾರ್ಯಾಲಯಕ್ಕೆ ತೆರಳಿ ಮುಖ್ಯಾಧಿಕಾರಿಗಳಾದ ಎಸು . ಎಸ್. ಬೆಂಗಳೂರು ಇವರಿಗೆ ಅಧಿಕೃತ ಅರ್ಜಿ ಸಲ್ಲಿಸಿದರು. ತದನಂತರ ಅಂಕೋಲಾ ತಹಶೀಲ್ದಾರ್ ಕಚೇರಿಗೂ ಭೇಟಿ ನೀಡಿ, ತಹಶೀಲ್ದಾರರ ಅನುಪಸ್ಥಿತಿಯಲ್ಲಿ ಅಲ್ಲಿನ ಉಪತಹಶೀಲ್ದಾರ್ ಗಿರೀಶ ಜಾಂಬಳೇಕರ್ ಅವರಿಗೆ ಮನವಿಯ ಪ್ರತಿಯನ್ನು ಹಸ್ತಾಂತರಿಸಿ ತಮಗೆ ಒಕ್ಕಲೆಬ್ಬಿಸದಂತೆ ಸೂಕ್ತ ಕಾನೂನು ರಕ್ಷಣೆ ನೀಡುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ನೋಂದಾಯಿತ ಬೀದಿ ಬದಿ ವ್ಯಾಪಾರಿಗಳಾದ ನಾಗರಾಜ ವಿಠೋಬ ನಾಯ್ಕ್, ಗಜಾನನ ಬಿ. ಗೌಡ, ವಿನಯ ನಾರಾಯಣ ನಾಯ್ಕ, ಉಷಾ ಸತೀಶ್ ನಾಯ್ಕ, ನಿತ್ಯಾನಂದ ಗಣಪತಿ ನಾಯ್ಕ, ಮನೋಹರ ಲಕ್ಷ್ಮಣ ನಾಯ್ಕ, ಗಿರಿಜಾ ಸೀತಾರಾಮ ನಾಯ್ಕ್ ಸೇರಿದಂತೆ ಪ್ರಮುಖರಾದ ಶ್ರೀನಿವಾಸ ರಾಮ ನಾಯ್ಕ, ವಿಜುಪೀಟರ್ ಪಿಳ್ಳೆ ಹಾಗೂ ಅನಿಲ್ ಎಂ. ನಾಯ್ಕ ಮುಂತಾದವರು ಮನವಿ ನೀಡುವ ಸ್ಥಳದಲ್ಲಿ ಉಪಸ್ಥಿತರಿದ್ದರು..
ಅನೇಕ ವರ್ಷಗಳಿಂದ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಗೌರವದಿಂದ ಕುಟುಂಬದ ಜೀವನೋಪಾಯ ನಡೆಸುತ್ತಿರುವ ತಮಗೆ ಈ ವ್ಯಾಪಾರ ಬಿಟ್ಟರೆ ಬೇರೆ ಯಾವುದೇ ಆದಾಯದ ಮೂಲವಿಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ “ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣ) ಕಾಯ್ದೆ, 2014” ರ ಅಡಿಯಲ್ಲಿ ತಮಗೆ ಕಾನೂನುಬದ್ಧ ರಕ್ಷಣೆ ಇದ್ದು, ಅಧಿಕಾರಿಗಳು ಹಾಗೂ ತಾಲೂಕು ಆಡಳಿತವು ಮಾನವೀಯತೆಯ ಆಧಾರದ ಮೇಲೆ ನಮ್ಮ ಪರಿಸ್ಥಿತಿಯನ್ನು ಪರಿಗಣಿಸಿ, ಯಾವುದೇ ಕಾರಣಕ್ಕೂ ಬೀದಿಬದಿ ಗೂಡಂಗಡಿಕಾರರಾದ ನಮ್ಮನ್ನು ಒಕ್ಕಲೆಬ್ಬಿಸದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.













Leave a Reply