ಸತ್ತವರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ 7 ಎಕರೆ ಜಮೀನು ಅಕ್ರಮ ಮಾರಾಟ: ಅಂಕೋಲಾದ ಈ ಭಾರಿ ಭೂ ಹಗರಣದ ಹಿಂದಿರುವ ಅಸಲಿ ಕಿರಾತಕರು ಯಾರು?

ಅಂಕೋಲಾ :ತಾಲೂಕಿನ ಅಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರಿ ಭೂ ಹಗರಣ ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೊಗ್ರಿಬೈಲ್ ಗ್ರಾಮದ ಸರ್ವೆ ನಂಬರ್ 25 ಹಿಸ್ಸಾ 1 ರಲ್ಲಿರುವ ಸುಮಾರು 7 ಎಕರೆ 26 ಗುಂಟೆ ಜಮೀನನ್ನು ಶಿವಮೊಗ್ಗ ಮೂಲದ ಶಿವಕುಮಾರ್ ಮುರುಗೇಶ್ ರಾಮಸ್ವಾಮಿ ಎಂಬುವವರಿಗೆ ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗಿದ್ದು, ಇದರ ಹಿಂದೆ ದೊಡ್ಡ ದಲ್ಲಾಳಿಗಳ ಜಾಲವೇ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ.​

ಈ ಜಮೀನಿನ ಮೂಲ ಮಾಲೀಕರು ಈಗಾಗಲೇ ಮೃತಪಟ್ಟಿದ್ದು, ಅವರ ಹೆಸರಿನಲ್ಲಿದ್ದ ಅಸಲಿ ದಾಖಲೆಗಳನ್ನು ತಿರುಚಿ, ನಕಲಿ ಪತ್ರಗಳನ್ನು ಸೃಷ್ಟಿಸಿ ಈ ದಂಧೆ ನಡೆಸಲಾಗಿದೆ ಎನ್ನಲಾಗಿದೆ. ಸತ್ತವರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಕಿರಾತಕರು ಯಾರು? ಈ ಭಾರಿ ಜಾಲದ ಹಿಂದೆ ಅಡಗಿರುವ ಅಸಲಿ ಮುಖಗಳು ಯಾವುವು? ಎಂಬ ಹತ್ತಾರು ಪ್ರಶ್ನೆಗಳು ಮತ್ತು ಅನುಮಾನಗಳು ಈಗ ಅಂಕೋಲಾ ಭಾಗದ ಜನರನ್ನು ಕಾಡತೊಡಗಿವೆ.​.

ಅಲಗೇರಿ ಪಂಚಾಯತ್ ವ್ಯಾಪ್ತಿಯ ಬಾಳೆಗುಳಿ, ಬೋಗ್ರಿಬೈಲ್ ಮತ್ತು ಶಿರಕುಳಿ ಗ್ರಾಮದ ಸಾರ್ವಜನಿಕರು ಈ ಅಕ್ರಮದ ವಿರುದ್ಧ ಸಿಡಿದೆದ್ದಿದ್ದು . ಅಂಕೋಲಾದಲ್ಲಿ ಇಂತಹ ಭೂ ವಂಚನೆ ಪ್ರಕರಣಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಹತ್ತಾರು ಅಮಾಯಕರು ದಲ್ಲಾಳಿಗಳ ಸಂಚಿಗೆ ಬಲಿಯಾಗಿ ತಮ್ಮ ಹಕ್ಕುಬಾಧ್ಯತೆಯ ಮೂಲ ಭೂಮಿಯನ್ನು ಕಳೆದುಕೊಂಡಿದ್ದಾರೆ. ಇಂದಿಗೂ ಎಷ್ಟೋ ಬಡ ರೈತರು, ಸಾರ್ವಜನಿಕರು ನ್ಯಾಯಕ್ಕಾಗಿ ಕೋರ್ಟ್ ಕಚೇರಿ ಮೆಟ್ಟಿಲೇರಿ ಅಲೆಯುತ್ತಿದ್ದಾರೆ. ಈಗ ನಡೆದಿರುವ ಈ ಹೊಸ ಹಗರಣ ಇಡೀ ತಾಲೂಕಿನ ಜನರಲ್ಲಿ ಆತಂಕ ಮೂಡಿಸಿದೆ.​ಈ ಹಿನ್ನೆಲೆಯಲ್ಲಿ ಅಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಸ್ತ ನಾಗರಿಕರು ಒಟ್ಟಾಗಿ ಸೇರಿ, ಅಂಕೋಲಾ ತಹಸಿಲ್ದಾರರ ಮುಖಾಂತರ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಗಂಭೀರ ಸ್ವರೂಪದ ಮನವಿ ಪತ್ರ ಸಲ್ಲಿಸಿದ್ದಾರೆ.

ಸದರಿ ಇಂತಹ ಭೂಗಳ್ಳರು ಮತ್ತು ದಲ್ಲಾಳಿಗಳ ಸ್ವಾರ್ಥಕ್ಕೆ ಅಮಾಯಕರ ಜಮೀನುಗಳು ಬಲಿಯಾಗಬಾರದು. ಈ ಪ್ರಕರಣವನ್ನು ಜಿಲ್ಲಾಡಳಿತ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು, ತಕ್ಷಣವೇ ಉನ್ನತ ಮಟ್ಟದ ತನಿಖೆ ನಡೆಸಿ ನಕಲಿ ದಾಖಲೆ ಸೃಷ್ಟಿಸಿದ ತಪ್ಪಿತಸ್ಥರನ್ನು ಜೈಲಿಗಟ್ಟಬೇಕು ಮತ್ತು ಅಂಕೋಲಾ ತಾಲೂಕಿನ ಜನತೆಗೆ ಸೂಕ್ತ ನ್ಯಾಯ ಕೊಡಿಸಬೇಕು ಎಂದು ನಾಗರಿಕರು ಆಗ್ರಹಿಸಿದರು.

..ಸದರಿ ಮನವಿಯನ್ನು ನಾಗೇಶ್ ಕಿಣಿ ಮಠಾಕೇರಿಯವರು ಓದಿ ಹೇಳಿದರು.. ತಹಶೀಲ್ದಾರ ಕಚೇರಿಯ ಶಿರಸ್ತೆದಾರ ರಾದ ಅನುಪಮಾ ನಾಯ್ಕ್ ಇವರು ಮನವಿಯನ್ನು ಸ್ವೀಕರಿಸಿದರು..ಇಷ್ಟೆಲ್ಲಾ ಆದರೂ ಜಿಲ್ಲಾಧಿಕಾರಿಗಳು ಈ ಕರಾಳ ಜಾಲಕ್ಕೆ ಬ್ರೇಕ್ ಹಾಕಿ ಭೂಮಿ ಲಪಟಾಯಿಸಲು ಹೊಂಚು ಹಾಕಿದ ಕಿರಾತಕರನ್ನು ಬಂಧಿಸಿ. ಸದರಿ ಭೂಮಿಗೆ ಸಂಬಂಧಪಟ್ಟ ಕುಟುಂಬಕ್ಕೆ ನ್ಯಾಯ ಒದಗಿಸುತ್ತಾರಾ? ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!