ಅಂಕೋಲಾ :ತಾಲೂಕಿನ ಹೊನ್ನೆಬೈಲ್ ಗ್ರಾಮದ ಸರ್ವೇ ನಂ. 214/5ರ ಸಾರ್ವಜನಿಕ ರಸ್ತೆ ವಿವಾದ ಇದೀಗ ತಾರಕಕ್ಕೇರಿದ್ದು, ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸಿ ದೂರುದಾರರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಜಮೀನಿನ ಮಾಲೀಕರಾದ ಮಂಗಲಾ ಮೋಹನ್ ನಾಯ್ಕ್, ಅವರ ಮಗ ಅಮರ್ ಮೋಹನ್ ನಾಯ್ಕ್ ಹಾಗೂ ತಂಗಿ ಲಕ್ಷ್ಮಿ ಮೋನಪ್ಪ ನಾಯ್ಕ್ ಎಂಬುವವರ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾನ್ಯ ಜೆ.ಎಮ್.ಎಫ್.ಸಿ ಅಂಕೋಲಾ ನ್ಯಾಯಾಲಯದ ಪಿಸಿಆರ್. ನಂ. 180/2026ರ ಆದೇಶದ ಅನ್ವಯ ಪೊಲೀಸರು ಈ ತನಿಖೆ ಕೈಗೊಂಡಿದ್ದಾರೆ.
ಹೊನ್ನೆಬೈಲ್ ಗ್ರಾಮದ ನಿವಾಸಿ ಕೃಷ್ಣ ನಾಗಪ್ಪ ನಾಯ್ಕ್ ಸೇರಿದಂತೆ ಸ್ಥಳೀಯ ಸಾರ್ವಜನಿಕರು ಅನಾದಿಕಾಲದಿಂದಲೂ ಓಡಾಡುತ್ತಿದ್ದ ರಸ್ತೆಗೆ, ಜಮೀನಿನ ಮಾಲೀಕರು ಕಳೆದ 3-4 ವರ್ಷಗಳಿಂದ ನಿರಂತರವಾಗಿ ಅಡ್ಡಿಪಡಿಸುತ್ತಾ ಬಂದಿದ್ದರು. ಈ ಹಿಂದೆ 2024 ರಲ್ಲಿ ಜಮೀನಿನ ಮಾಲೀಕರು ಏಕಾಏಕಿ ರಸ್ತೆಗೆ ಕೆಂಪು ಕಲ್ಲುಗಳನ್ನು ಸುರಿದು ಸಾರ್ವಜನಿಕರ ಸಂಚಾರವನ್ನು ಬಂದ್ ಮಾಡಿದಾಗ, ಏಕೈಕ ರಸ್ತೆಯನ್ನು ನಂಬಿಕೊಂಡಿರುವ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದ್ದರು.. ಅಂದು ಸ್ಥಳಕ್ಕೆ ಧಾವಿಸಿದ್ದ ತಹಶೀಲ್ದಾರರು, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕಲ್ಲುಗಳನ್ನು ತೆರವುಗೊಳಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಈ ಬೆಳವಣಿಗೆಯಿಂದ ಸಿಟ್ಟಾದ ಜಮೀನಿನ ಮಾಲೀಕರು ಅಧಿಕಾರಿಗಳನ್ನೇ ಪ್ರತಿವಾದಿಗಳನ್ನಾಗಿ ಮಾಡಿ ಅಂಕೋಲಾ ಸಿವಿಲ್ ನ್ಯಾಯಾಲಯದಲ್ಲಿ OS 125/2024 ರಂತೆ ತಡೆಯಾಜ್ಞೆ ಕೋರಿ ದಾವೆ ಹೂಡಿದ್ದರು.
ಆದರೆ, ಕಳೆದ ಎರಡು ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ಚಾಲ್ತಿಯಲ್ಲಿದ್ದರೂ, ಸಾರ್ವಜನಿಕ ರಸ್ತೆ ಬಂದ್ ಮಾಡಲು ನ್ಯಾಯಾಲಯ ಯಾವುದೇ ತಡೆಯಾಜ್ಞೆ ನೀಡಿರಲಿಲ್ಲ. ಆದರೂ ಜಮೀನಿನ ಮಾಲೀಕರೇ ತಮ್ಮ ಪರವಾಗಿ ಯಾವುದೇ ತಡೆಯಾಜ್ಞೆ ಇಲ್ಲದಿರುವುದು ಗೊತ್ತಿದ್ದರೂ ಸಹ ಪುನಃ ಪುನಃ ರಸ್ತೆಗೆ ದೊಡ್ಡ ಕಲ್ಲುಗಳನ್ನು ಹಾಕಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಕೊಡುತ್ತಾ ಬಂದಿದ್ದಾರೆ. ಕಳೆದ ಏಪ್ರಿಲ್ 23ರಂದು ರಸ್ತೆ ಬಂದ್ ಮಾಡಿದ್ದನ್ನು ಧೈರ್ಯದಿಂದ ಪ್ರಶ್ನಿಸಲು ಹೋದ ನೊಂದ ದೂರುದಾರ ಕೃಷ್ಣ ನಾಯ್ಕ್ ಅವರನ್ನು ಸಾರ್ವಜನಿಕವಾಗಿ ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಕೊಲೆ ಮಾಡುವುದಾಗಿ ಭೀಕರ ಬೆದರಿಕೆ ಹಾಕಿದ್ದಾರೆ.
ಜಮೀನಿನ ಮಾಲೀಕರು ತಾವೇ ಕೋರ್ಟ್ ಮೆಟ್ಟಿಲೇರಿದ್ದರೂ ಕಾನೂನಿಗೆ ಕಿಂಚಿತ್ತೂ ಗೌರವ ನೀಡದೆ, ನಿರಂತರವಾಗಿ ತೊಂದರೆ ಕೊಡುತ್ತಾ ಬಂದಿರುವುದರಿಂದಲೇ ಸ್ಥಳದಲ್ಲಿ ಇಷ್ಟೊಂದು ದೊಡ್ಡ ಅನಾಹುತ ಮತ್ತು ಅಶಾಂತಿಯ ವಾತಾವರಣ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಈ ದೌರ್ಜನ್ಯಕ್ಕೆ ಬ್ರೇಕ್ ಹಾಕಲು ನ್ಯಾಯಾಲಯದ ಆದೇಶದ ಬೆನ್ನಲ್ಲೇ ಪೋಲಿಸ್ ಇಲಾಖೆ ಮೂರು ಜನ ಆರೋಪಿತರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.













Leave a Reply