ಕೇಣಿ ಬಂದರು ವಿರೋಧಿ ಹೋರಾಟ: ಜುಲೈ 22 ರಂದು ಕಾರವಾರ ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಪಾದಯಾತ್ರೆ.

ಕಾರವಾರ್: ಕೇಣಿ ಬಂದರು ಯೋಜನೆಯ ವಿರುದ್ಧ 22/07/2026ರಂದು ನಡೆಯಲಿರುವ ಪ್ರತಿಭಟನಾ ಪಾದಯಾತ್ರೆಯ ಕುರಿತು ನಿನ್ನೆ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.​

ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ಆಳಸಮುದ್ರ ಗ್ರೀನ್ ಫೀಲ್ಡ್ ಬಂದರು ಯೋಜನೆಯನ್ನು ವಿರೋಧಿಸಿ ‘ಅಂಕೋಲಾ ಉತ್ತರ ಕನ್ನಡ ಉಳಿಸಿ ಸರ್ವ ಸಮಾಜಗಳ ಹಿತ ರಕ್ಷಣಾ ವೇದಿಕೆ’ ನಡೆಸುತ್ತಿರುವ ಹೋರಾಟವು 600 ದಿನಗಳನ್ನು ಪೂರೈಸಿದೆ. ಈ ವಿನಾಶಕಾರಿ ಯೋಜನೆಯನ್ನು ಸರ್ಕಾರ ಕೈಬಿಡದ ಹಿನ್ನೆಲೆಯಲ್ಲಿ, ಜುಲೈ 22ರ ಬುಧವಾರದಂದು ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಂದು ಅಂಕೋಲಾದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದ ಗಾಂಧಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿ, ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಕಾರವಾರದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಲಾಗುವುದು. ಕಳೆದ ವರ್ಷದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಸರ್ಕಾರ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲದ ಕಾರಣ, ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಜಿಲ್ಲಾಡಳಿತದ ಮೂಲಕ ಸರ್ಕಾರವನ್ನು ಮತ್ತೊಮ್ಮೆ ಆಗ್ರಹಿಸುವುದು ಈ ಪಾದಯಾತ್ರೆಯ ಉದ್ದೇಶವಾಗಿದೆ.​

ಈಗಾಗಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಪೂರ್ವಾನುಮತಿಗಾಗಿ ಅರ್ಜಿ ಸಲ್ಲಿಸಲಾಗಿದೆ. ಈ ಹೋರಾಟವು ಸಂಪೂರ್ಣ ಶಾಂತಿಯುತವಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡದೆ, ರಸ್ತೆ ಸುರಕ್ಷತೆ ಕಾಯ್ದುಕೊಂಡು ಮತ್ತು ಯಾವುದೇ ರಾಜಕೀಯ ಘೋಷಣೆಗಳಿಲ್ಲದೆ ಸಂವಿಧಾನಬದ್ಧವಾಗಿ ನಡೆಯಲಿದೆ. ಬಂದರು ಯೋಜನೆಯಿಂದ ಬಾಧಿತವಾಗಲಿರುವ ಗೋಕರ್ಣ, ಅಂಕೋಲಾ, ಕಾರವಾರ ಭಾಗದ ಸುಮಾರು 103 ಹಳ್ಳಿಗಳ ಸಾರ್ವಜನಿಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರವಾರ ಮತ್ತು ಅಂಕೋಲಾ ತಾಲೂಕಿನ ಮೀನುಗಾರರ ಸಂಘಟನೆಗಳು ಸ್ವಯಂಪ್ರೇರಿತವಾಗಿ ಅಂದು ಮೀನುಗಾರಿಕೆ ಸ್ಥಗಿತಗೊಳಿಸಿ ಬೆಂಬಲ ಸೂಚಿಸಿದ್ದು, ವಿವಿಧ ಕನ್ನಡಪರ ಸಂಘಟನೆಗಳು, ರಿಕ್ಷಾ-ಟ್ಯಾಕ್ಸಿ ಯೂನಿಯನ್‌ಗಳು, ವಕೀಲರ ಹಾಗೂ ವಿದ್ಯಾರ್ಥಿ ಒಕ್ಕೂಟಗಳು ಕೈಜೋಡಿಸಲಿವೆ. ಒಂದು ವೇಳೆ ಈ ಶಾಂತಿಯುತ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆದರೆ, ಮುಂದಿನ ದಿನಗಳಲ್ಲಿ ಸಾವಿರಾರು ಸಾರ್ವಜನಿಕರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಮತ್ತು ಅದರಿಂದಾಗುವ ಅನಾಹುತಗಳಿಗೆ ಆಡಳಿತ ವರ್ಗವೇ ಹೊಣೆಯಾಗಬೇಕಾಗುತ್ತದೆ ಎಂದು ವೇದಿಕೆಯ ಹೋರಾಟಗಾರರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!