​ಗೋಪಾಲಕೃಷ್ಣ ನಾಯಕನ ಪ್ರಸಾದದ ಆಣೆ-ಪ್ರಮಾಣ ‘ಭೂತದ ಬಾಯಲ್ಲಿ ಭಗವದ್ಗೀತೆ’ ಕೇಳಿದಂತಿದೆ: ನ್ಯಾಯವಾದಿ ನಾಗರಾಜ ನಾಯಕ ಕಟು ವಿಮರ್ಶೆ.​

ಅಂಕೋಲಾ: ಪೊಲೀಸ್ ಇಲಾಖೆಯ ವೈಫಲ್ಯ ಹಾಗೂ ಗೃಹ ಸಚಿವರ ಆಪ್ತ ಎನ್ನಲಾದ ಗೋಪಾಲಕೃಷ್ಣ ನಾಯಕ ಅವರ ದಬ್ಬಾಳಿಕೆಯನ್ನು ಖಂಡಿಸಿ ಹಮ್ಮಿಕೊಳ್ಳಲಾದ ಅನಿರ್ದಿಷ್ಟಾವಧಿ ಧರಣಿಯು ಜಿಲ್ಲಾ ವಕೀಲರ ಸಂಘ ಕಾರವಾರ, ಯಲ್ಲಾಪುರ ವಕೀಲರ ಸಂಘದ ಅಧ್ಯಕ್ಷರು ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ವಕೀಲರು ಬೆಂಬಲ ಸೂಚಿಸಿ ಪಾಲ್ಗೊಂಡಿದ್ದಾರೆ.

ನಿನ್ನೆ ದಿನಾಂಕ 8/05/2026ರ್ ಎರಡನೇ ದಿನದ ಹೋರಾಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಾಗರಾಜ ನಾಯಕ ಅವರು, ಗೋಪಾಲಕೃಷ್ಣ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ “ಆಣೆ ಪ್ರಮಾಣ”ದ ಸವಾಲನ್ನು ತೀವ್ರವಾಗಿ ಲೇವಡಿ ಮಾಡಿದ್ದಲ್ಲದೆ, ಅವರ ಹತ್ತಾರು ಅಕ್ರಮಗಳನ್ನು ಪುರಾವೆ ಸಮೇತ ಬಿಚ್ಚಿಟ್ಟರು.​

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದ ಗೋಪಾಲಕೃಷ್ಣ ನಾಯಕರು, ವಂದಿಗೆ ಘಟನೆ ನಡೆದಾಗ ನಾನು ಹೊರಗಿದ್ದೆ, ನನ್ನ ಪಾತ್ರವಿಲ್ಲ, ಸುಳ್ಳಾಗಿ ನಾಗರಾಜ ನಾಯಕರು ಕೇಸ್ ಕೊಟ್ಟಿದ್ದಾರೆ, ಬೇಕಿದ್ದರೆ ಪ್ರಸಾದ ಮುಟ್ಟಿ ಆಣೆ ಮಾಡುತ್ತೇನೆ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ನಾಗರಾಜ ನಾಯಕರು, “ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿ ನನಗೆ ನಗು ಬರುತ್ತಿದೆ. ಗೋಪಾಲಕೃಷ್ಣ ನಾಯಕರು ದೇವರನ್ನು ಮತ್ತು ಪ್ರಸಾದವನ್ನು ಆರಾಮಾಗಿ ಮುಟ್ಟುತ್ತಾರೆ, ಇಂತಹ ಹೇಳಿಕೆ ಅವರ ಬಾಯಲ್ಲಿ ನೂರಾರು ಬಾರಿ ಬಂದಿದೆ. ಯಾಕೆಂದರೆ ಅವರಿಗೆ ದೇವರೇ ಇಲ್ಲ ಎಂಬುದು ಮನದಟ್ಟಾಗಿದೆ. ಆದರೆ ನಮಗೆ ಈ ಹೃದಯದಲ್ಲಿ ದೇವರಿದ್ದಾನೆ, ಆ ದೇವರ ಸಾಕ್ಷಿಯಾಗಿಯೇ ಹೇಳುತ್ತಿದ್ದೇನೆ; ಈ ಇಡೀ ಪ್ರಕ್ರಿಯೆಯಲ್ಲಿ ಗೋಪಾಲಕೃಷ್ಣ ನಾಯಕನ ಇನ್ವಾಲ್ವ್‌ಮೆಂಟ್ ಇದ್ದೇ ಇದೆ,” ಎಂದು ಪ್ರತಿಪಾದಿಸಿದರು.

ತಾಲೂಕಿನ ವಂದಿಗೆ ಗ್ರಾಮದ ​ಯಕ್ಷಗಾನ ಕಲಾವಿದರ ನೆನಪಿನ ಕಾರ್ಯಕ್ರಮದ ಬಗ್ಗೆ ವಿವರಿಸಿದ ಅವರು, “ಯಕ್ಷಗಾನ ಕಲಾವಿದನಾದ ನನ್ನನ್ನು ಅತಿಥಿಯಾಗಿ ಕರೆಯುವ ವಿಚಾರ ಬಂದಾಗ, ಮೂರ್ನಾಲ್ಕು ದಿನಗಳ ಮೊದಲೇ ಸಂಘಟಕರ ಬಳಿ ಹೋಗಿ ‘ನಾಗರಾಜ ನಾಯಕರನ್ನು ಕರೆಯುತ್ತೀರಾ?’ ಎಂದು ವ್ಯಂಗ್ಯವಾಗಿ ಕೇಳಿದ್ದು ಇದೇ ಗೋಪಾಲಕೃಷ್ಣ ನಾಯಕರು. ನಂತರ ತನ್ನ ಸಹಚರರಾದ ಮಂಜುನಾಥ ಗಣಪತಿ ನಾಯಕ, ನಾರಾಯಣ ಹರೀಶ ನಾಯಕ ಹಾಗೂ ಸೂರಜ ಹಮ್ಮಣ್ಣ ನಾಯಕನನ್ನು ಕಳಿಸಿಕೊಟ್ಟು ನನ್ನನ್ನು ಕಾರ್ಯಕ್ರಮಕ್ಕೆ ಕರೆಯಬಾರದು ಎಂದು ಒತ್ತಡ ಹೇರಿದ್ದರು. ‘ನಾಗರಾಜ ನಾಯಕರನ್ನು ಕರೆದರೆ ಗೋಪಾಲಕೃಷ್ಣ ನಾಯಕರನ್ನೂ ಕರೆಯಬೇಕಾಗುತ್ತದೆ’ ಎಂಬ ಮಾತುಗಳನ್ನು ಹೇಳಿಸಿ ಗೊಂದಲ ಸೃಷ್ಟಿಸಿದ್ದರು. ನಮಗೆ ಅವರು ಅಲ್ಲಿ ಇರಬಾರದು ಎಂಬ ಉದ್ದೇಶವಿರಲಿಲ್ಲ, ಆದರೆ ರಾಜಕಾರಣಿಗಳ ಬದಲು ಕಲಾವಿದರ ಕೈಯಿಂದ ಕಾರ್ಯಕ್ರಮ ನಡೆಯಲಿ ಎಂಬುದು ಸಂಘಟಕರ ಆಶಯವಾಗಿತ್ತು. ನಾನು ಪ್ರಸಾದ ಮುಟ್ಟಲು ಸಿದ್ಧನಿದ್ದೇನೆ, ಆದರೆ ಗೋಪಾಲಕೃಷ್ಣ ನಾಯಕರು ಹೇಳಿದ ಮಾತ್ರಕ್ಕೆ ಪ್ರಸಾದ ಮುಟ್ಟುವುದಿಲ್ಲ. ಬದಲಾಗಿ, ಈ ಘಟನೆಯ ನಂತರ ಆರೋಪಿಗಳನ್ನು ರಕ್ಷಿಸಲು ಮತ್ತು ಸುಳ್ಳು ಫಿರ್ಯಾದು ಕೊಡಿಸಲು ಪ್ರಯತ್ನ ಮಾಡಿಲ್ಲ ಎಂದು ಇವರು ಆಣೆ ಮಾಡಿ ಹೇಳಲಿ? ಯಾರ ಯಾರ ಮುಖಾಂತರ ಇನ್ಫ್ಲುಯೆನ್ಸ್ ಮಾಡಿ ಆರೋಪಿಗಳನ್ನು ಬಚಾವ್ ಮಾಡಲು ಪ್ರಯತ್ನಿಸಿದ್ದಾರೆ ಎಂಬ ಸತ್ಯ ಹೇಳಲಿ ನೋಡೋಣ,” ಎಂದು ಸವಾಲು ಹಾಕಿದರು.

ಗೋಪಾಲಕೃಷ್ಣ ​ನಾಯಕನ ಹಳೆಯ ಇತಿಹಾಸವನ್ನು ಕೆದಕಿದ ಅವರು, “ನೈತಿಕ ಜೀವನ ನಡೆಸುವುದು ಒಂದು ದಿನದ ಪವಾಡವಲ್ಲ, ಅದಕ್ಕೆ ನಿರಂತರ ಶ್ರಮ ಮತ್ತು ತಪಸ್ಸು ಬೇಕು. 2023ರಲ್ಲಿ ಕಾರವಾರದಲ್ಲಿ ಮಂಗದಾಸ ಕಾಮತರ ಮಗಳ ಮದುವೆ ನಡೆದಾಗ, ನೀವೇ ಮೈಮೇಲೆ ಬಂದವರಂತೆ ವರ್ತಿಸಿ ನನ್ನ ಜೊತೆಗಿದ್ದ ವ್ಯಕ್ತಿಯ ಮೇಲೆ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿಸಿದ್ದು ಸುಳ್ಳೇ? ಅದಕ್ಕೆ ಪ್ರಸಾದ ಮುಟ್ಟಿ ಆಣೆ ಮಾಡುತ್ತೀರಾ? ಮದುವೆಯಂತಹ ಶುಭ ಸಮಾರಂಭದಲ್ಲಿ ಇದೆಲ್ಲ ಮಾಡಬಾರದು ಎಂಬುದು ನಿಮ್ಮ ಆತ್ಮಕ್ಕೆ ಗೊತ್ತಾಗಲಿಲ್ಲವೇ? ಹಾಗೆಯೇ, 2020ರಲ್ಲಿ ನಿಮ್ಮದೇ ಊರಿನ ಬಡ ಹಾಲಕ್ಕಿ ಗೌಡರ ಮೇಲೆ ಗನ್ ಇಟ್ಟು ಹಲ್ಲೆ ಮಾಡಲು ಪ್ರಯತ್ನಿಸಿದಾಗ ನಿಮ್ಮ ಮೇಲೆ 307 ಪ್ರಕರಣ ದಾಖಲಾಗಿತ್ತು. ಬೆಂಗಳೂರಿನಲ್ಲಿ ಪಡೆದ ಗನ್ ಪರವಾನಗಿಯನ್ನು ಅಂಕೋಲಾ, ಕಾರವಾರಕ್ಕೆ ತರುವ ಪ್ರಮೇಯ ಏನಿತ್ತು? ಅಲ್ಲಿ ಕೈಯಿಂದ ಗುಂಡು ಹಾರಿದ್ದು ಸುಳ್ಳೇ? ಪ್ರಸಾದ ಮುಟ್ಟಿ ಇದಕ್ಕೆ ಉತ್ತರಿಸಿ,” ಎಂದು ಆಗ್ರಹಿಸಿದರು.​

ಮುಂದುವರಿದು ಮಾತನಾಡುತ್ತಾ, “ಅಂಕೋಲಾ ಪೊಲೀಸ್ ಠಾಣೆಯ ಕ್ರೈಂ ನಂಬರ್ 71/25ರಲ್ಲಿ ನಿಮ್ಮ ಮತ್ತು ನಿಮ್ಮ ಸಹಚರರ ಮೇಲೆ ಪ್ರಕರಣ ದಾಖಲಾಗಿದೆ. ಈ ವಂದಿಗೆ ಗ್ರಾಮದ ಪ್ರಕರಣದಲ್ಲಿ ನಿಮ್ಮ ಪಾತ್ರವಿಲ್ಲ ಎಂದು ಆಣೆ ಮಾಡುತ್ತೀರಾ? ಊರು ಊರಿನಲ್ಲಿ ಜಗಳ ಹಚ್ಚಿಸಿ, ಮುಗ್ಧ ಯುವಕರ ತಲೆಗೆ ಕ್ರೌರ್ಯ ತುಂಬಿ, ಅವರು ಇನ್ನೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡುವಂತೆ ಮಾಡಿದ್ದು ನೀವೇ. ನಂತರ ಆ ಆರೋಪಿಗಳನ್ನು ಕಾರಿನಲ್ಲಿ ಸಾಗಿಸಿ ಬಚಾವ್ ಮಾಡಲು ನಿಮ್ಮ ಬಲಗೈ ಬಂಟ, ಅಕ್ರಮ ಚಟುವಟಿಕೆಗಳ ಕಿಂಗ್‌ಪಿನ್ ಸೂರಜ ಹಮ್ಮಣ್ಣ ನಾಯಕನ ಜೊತೆ ಸೇರಿ ಪ್ರಯತ್ನ ಮಾಡಿಲ್ಲವೇ? ಗೃಹ ಸಚಿವರ ಪ್ರಭಾವ ಬಳಸಿ ಚಾರ್ಜ್‌ಶೀಟ್‌ನಿಂದ ನಿಮ್ಮ ಮೂವರ ಹೆಸರನ್ನು ಕೈಬಿಡುವಂತೆ ಮಾಡಿದ್ದು ಸುಳ್ಳೇ? ಠಾಣೆಗೆ ಬಂದು ಫಿರ್ಯಾದಿದಾರರಿಗೆ ಹೀನಾಮಾನವಾಗಿ ಬೈದು ಬೆದರಿಕೆ ಹಾಕಿಲ್ಲ ಎಂದು ಇಲ್ಲಿನ ಗೋಡೆ ಗಣಪತಿಯ ಮುಂದೆ ಆಣೆ ಮಾಡುತ್ತೀರಾ? ಆಣೆ ಮಾಡಲು ಹೋದರೆ ಇಂತಹ ವಿಷಯಗಳು ಬಹಳಷ್ಟಿವೆ,” ಎಂದರು.​

ರಾಜಕೀಯ ನಿಷ್ಠೆಯ ಬಗ್ಗೆಯೂ ಪ್ರಶ್ನಿಸಿದ ಅವರು, “ಹತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ರಿಜಿಸ್ಟರ್‌ನಲ್ಲಿ ನೀವು ಒಂದು ಸಭೆಗೆ ಹಾಜರಾಗಿ ಸಹಿ ಮಾಡಿದ ದಾಖಲೆ ಇಲ್ಲ ಎಂದು ಉದಯ ವಾಮನ್ ನಾಯಕ ಹೇಳಿದ್ದಾರೆ. ಇನ್ನು ಪಕ್ಷ ನಿಷ್ಠೆಯ ಬಗ್ಗೆ ಮಾತನಾಡುತ್ತೀರಿ. ಕಳೆದ ಕೆಲವು ವರ್ಷಗಳ ಹಿಂದೆ ಉದ್ಯೋಗ ಖಾತರಿ ಯೋಜನೆಯ ಸಾಲವನ್ನೂ ತೀರಿಸಲಾಗದ ಸ್ಥಿತಿಯಲ್ಲಿದ್ದ ನೀವು, ಇಂದು ಕೋಟಿಗಟ್ಟಲೆ ಹಣ ಮಾಡಿದ್ದೀರಿ. ಈ ಹಣವೆಲ್ಲಾ ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ದುಡಿದಿದ್ದೇ ಎಂದು ಆಣೆ ಮಾಡಿ ಹೇಳಿ. ಎಂಎಲ್‌ಎ ಆಗಬೇಕು ಎನ್ನುವ ಒಂದೇ ಇಚ್ಛೆಯಿಂದ ಯುವಕರ ಮನಸ್ಸಿನಲ್ಲಿ ಕ್ರೌರ್ಯ ತುಂಬಿ ಊರು ತುಂಬಾ ಗಲಾಟೆ ಮಾಡಿಸುತ್ತಿದ್ದೀರಿ.

ನಿಮ್ಮದೇ ಪಕ್ಷದ ಪುರುಷೋತ್ತಮ್ ನಾಯ್ಕ್ ಮೇಲೆ ಹಲ್ಲೆ ಮಾಡಿದ್ದಕ್ಕೂ ಪ್ರಸಾದ ಮುಟ್ಟುತ್ತೀರಾ? ಒಂದು ಪ್ರಕರಣಕ್ಕೆ ಪ್ರಸಾದ ಮುಟ್ಟಿದರೆ ಸಾಲದು, ಇಡೀ ಜೀವನದ ನಡವಳಿಕೆಗೆ ಉತ್ತರ ನೀಡಬೇಕಾಗುತ್ತದೆ,” ಎಂದು ಗುಡುಗಿದರು.​ಗೋಪಾಲಕೃಷ್ಣ ನಾಯಕರು ಕೇವಲ ಪೊಲೀಸ್ ಇಲಾಖೆಯಲ್ಲದೆ ಇತರ ಇಲಾಖೆಗಳನ್ನೂ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದಾರೆ. ಬೇನಾಮಿ ಹೆಸರಿನಲ್ಲಿ ಕ್ವಾರಿ ದಂಧೆ ನಡೆಸುತ್ತಿದ್ದಾರೆ. ಸಡಗೇರಿ ಗ್ರಾಮದ ಮೂರು ಕ್ವಾರಿಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲಾ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಇಡಲಾಗುವುದು ಎಂದು ನಾಗರಾಜ ನಾಯಕ ಅವರು ಎಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!