ಗೃಹ ಸಚಿವರೇ, ನಿಮ್ಮ ಆಪ್ತ ಗೋಪಾಲಕೃಷ್ಣ ನಾಯಕನ ಆಟಾಟೋಪ ನಿಲ್ಲಿಸಿ: ನ್ಯಾಯವಾದಿ ನಾಗರಾಜ ನಾಯಕ ಆಗ್ರಹ.

ಕರ್ನಾಟಕದ ಇತರ ಭಾಗಕ್ಕೆ ಪರಮೇಶ್ವರ ಅವರೇ ಗೃಹ ಸಚಿವರಾಗಿರಲಿ, ಇಲ್ಲವಾದರೆ ಅಂಕೋಲಾಕ್ಕೆ ಬೇರೆ ಗೃಹ ಸಚಿವರನ್ನೇ ನೀಡಿ- ನ್ಯಾಯವಾದಿ ನಾಗರಾಜ್ ನಾಯಕ.

ಅಂಕೋಲಾ: ಗೃಹ ಸಚಿವರ ಹೆಸರು ಹೇಳಿಕೊಂಡು ಶಾಸಕ ಸ್ಥಾನದ ಅಪೇಕ್ಷೆಯಿಂದ ಗೋಪಾಲಕೃಷ್ಣ ನಾಯಕ ಅಂಕೋಲಾದಲ್ಲಿ ಆಟಾಟೋಪ ಮೆರೆಯುತ್ತಿದ್ದು, ಅದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಗೃಹ ಸಚಿವರ ಪ್ರಭಾವ ಇಲ್ಲಿ ನಿಲ್ಲಬೇಕು ಮತ್ತು ಸ್ವತಃ ಗೃಹ ಸಚಿವ ಪರಮೇಶ್ವರ ಅವರು ತಾಲ್ಲೂಕಿಗೆ ಆಗಮಿಸುವವರೆಗೆ ನಮ್ಮ ಅನಿರ್ದಿಷ್ಟಾವಧಿ ಧರಣಿ ಮುಂದುವರಿಯುತ್ತದೆ ಎಂದು ಖ್ಯಾತ ನ್ಯಾಯವಾದಿ ನಾಗರಾಜ ನಾಯಕ ಅವರು ಎಚ್ಚರಿಸಿದ್ದಾರೆ.​

ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಹಮ್ಮಿಕೊಳ್ಳಲಾದ ಸಾರ್ವಜನಿಕ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂಕೋಲಾದಲ್ಲಿ ಗೋಪಾಲಕೃಷ್ಣ ರಾಮಚಂದ್ರ ನಾಯಕ ಅಡ್ಲೂರು ಎಂಬ ವ್ಯಕ್ತಿಯ ಆಟಾಟೋಪ ಅತಿಯಾಗಿ ಹೋಗಿದೆ. ತಾನು ಗೃಹ ಮಂತ್ರಿಗಳ ಆಪ್ತ ಎಂದು ಹೇಳಿಕೊಳ್ಳುತ್ತಾ, ಗೃಹ ಮಂತ್ರಿಗಳ ಕಚೇರಿಯಿಂದ ನೇರವಾಗಿ ಅಂಕೋಲಾ ಪೊಲೀಸ್ ಠಾಣೆಗೆ ಕರೆ ಮಾಡಿಸುತ್ತಾ ಅನೇಕ ದುಷ್ಕೃತ್ಯಗಳಲ್ಲಿ ತೊಡಗಿರುವ ಘಟನೆಗಳು ನಡೆಯುತ್ತಿವೆ.

ತಾನು ಶಾಸಕನಾಗಬೇಕು ಎಂಬ ಒಂದೇ ಹಠದಿಂದ ಎಂಥ ಕೆಲಸಕ್ಕೂ ಕೈಹಾಕುವ ಗೋಪಾಲಕೃಷ್ಣ ನಾಯಕ, ಅಂಕೋಲಾದ ಎಷ್ಟೋ ಶಾಂತ ಊರುಗಳಲ್ಲಿ ಭೀತಿ ಉಂಟುಮಾಡಿ ಜನರಲ್ಲಿ ಜಗಳ ಮತ್ತು ಮತ್ಸರಗಳನ್ನು ಸೃಷ್ಟಿಸಿ ಅಶಾಂತಿ ನಿರ್ಮಿಸಿದ್ದಾರೆ. ಆದ್ದರಿಂದ ಗೃಹ ಮಂತ್ರಿಗಳು ಇಲ್ಲಿಗೆ ಬರುವವರೆಗೆ ನಾವು ಧರಣಿ ಹಿಂತೆಗೆದುಕೊಳ್ಳುವುದಿಲ್ಲ. ಕರ್ನಾಟಕದ ಇತರ ಭಾಗಕ್ಕೆ ಪರಮೇಶ್ವರ ಅವರೇ ಗೃಹ ಸಚಿವರಾಗಿರಲಿ, ಇಲ್ಲವಾದರೆ ಅಂಕೋಲಾಕ್ಕೆ ಬೇರೆ ಗೃಹ ಸಚಿವರನ್ನೇ ನೀಡಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.​

ಅಂಕೋಲಾ ಪೊಲೀಸ್ ಠಾಣೆಯ ಪೊಲೀಸರಿಗೆ ಸರಿಯಾಗಿ ಕೆಲಸ ಮಾಡಲು ಸ್ವತಂತ್ರವಿಲ್ಲದಂತಾಗಿದೆ. ಪೊಲೀಸ್ ಠಾಣೆಯು ಸಿಆರ್‌ಪಿಸಿ ಅಥವಾ ಬಿಎನ್‌ಎಸ್ ಕಾನೂನಿನಡಿ ನಡೆಯುವ ಬದಲು ಗೋಪಾಲಕೃಷ್ಣ ನಾಯಕನ ಕಾನೂನಿನಡಿ ನಡೆಯುತ್ತಿರುವುದು ಒಂದು ದೊಡ್ಡ ದುರಂತ. ಇದನ್ನು ಖಂಡಿಸಿಯೇ ಇಂದು ಈ ಧರಣಿ ನಡೆಸಲಾಗುತ್ತಿದೆ.

ಈ ಹಿಂದೆ ಗೋಪಾಲಕೃಷ್ಣ ನಾಯಕನಿಗೆ ಸಂಬಂಧಪಟ್ಟ ಪ್ರಕರಣವೊಂದರಲ್ಲಿ ನಾನು ವಕಾಲತ್ತು ಹಾಕಿದ್ದಕ್ಕೆ ಆತ ನನ್ನ ಮೇಲೆ ಸಿಟ್ಟಾಗಿದ್ದ. ನಿನ್ನೆ ಅಂಕೋಲಾ ತಾಲ್ಲೂಕಿನ ವಂದಿಗೆ ಎಂಬಲ್ಲಿ ದಿವಂಗತ ಯಕ್ಷಗಾನ ಕಲಾವಿದರ ನೆನಪಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ನಮ್ಮನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಅಲ್ಲಿ ನಾನು ಮಾತನಾಡಲು ನಿಂತಾಗ ಗೋಪಾಲಕೃಷ್ಣ ನಾಯಕ, ಸೂರಜ ನಾಯಕ ಮತ್ತು ಮಂಜುನಾಥ ನಾಯಕನ ಚಿತಾವಣೆಯಿಂದ ಮಂಜುನಾಥ ಗಣಪತಿ ನಾಯಕ, ನಾರಾಯಣ ಹರೀಶ ನಾಯಕ, ಹನೀಶ ಬೀರಣ್ಣ ನಾಯಕ ಮತ್ತು ಪ್ರೀತಮ್ಮ ಗೋಪಾಲ ನಾಯಕ್ ಎಂಬುವವರು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದು ಇರುತ್ತದೆ. ಸದರಿ ನನ್ನ ಜೊತೆ ದೂರು ನೀಡಲು ಹೋದ ಸಂದರ್ಭದಲ್ಲಿ ನನ್ನ ಜೊತೆಗೆ ಬಂದಿದ್ದ ಅಮಾಯಕ ವ್ಯಕ್ತಿಗಳ ಮೇಲೆಯೂ ಗುರುತು ಮಾಡಿ ಅವರ ಮೇಲೂ ಸಹ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ . ಇದೆಲ್ಲವೂ ಗೋಪಾಲಕೃಷ್ಣ ನಾಯಕನ ಚಿತಾವಣೆಯಿಂದಲೇ ನಡೆಯುತ್ತಿದೆ ಎಂದು ಅವರು ದೂರಿದರು.​

ಅಂಕೋಲಾ ಪೊಲೀಸರು ಗೋಪಾಲಕೃಷ್ಣ ನಾಯಕನಿಗೆ ಎಷ್ಟು ಹೆದರುತ್ತಾರೆ ಎಂದರೆ, ಒಂದು ವೇಳೆ ಆತ ಠಾಣೆಗೆ ಬಂದರೆ ಸಿಪಿಐ ತನ್ನ ಚೇರನ್ನೇ ಬಿಟ್ಟುಕೊಡಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ಗೃಹ ಸಚಿವರೇ ಮುಖ್ಯ ಕಾರಣ. ಹೋಂ ಮಿನಿಸ್ಟರ್ ಸ್ವಭಾವತಃ ಒಳ್ಳೆಯವರು ಎಂದು ಕೇಳಿದ್ದೇನೆ, ಆದರೆ ಐದಾರು ಕೇಸುಗಳಲ್ಲಿ ಆರೋಪಿಯಾಗಿರುವ ಇಂತಹ ವ್ಯಕ್ತಿಯನ್ನು ಯಾಕೆ ತಮ್ಮ ಸಮೀಪ ಇಟ್ಟುಕೊಂಡಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಬಡ ಹಾಲಕ್ಕಿ ಯುವಕನ ಈ ಹಿಂದೆ ಗುಂಡಿನ ದಾಳಿ ಮಾಡಿರುವ ವ್ಯಕ್ತಿಯನ್ನು ಹೋಂ ಮಿನಿಸ್ಟರ್ ಆಪ್ತ ಎನ್ನುತ್ತಾರೆ, ಪತ್ರಿಕೆಗಳಲ್ಲಿಯೂ ಹಾಗೆಯೇ ಬರುತ್ತದೆ. ಪೊಲೀಸರು ವರದಿ ಸಲ್ಲಿಸುವಾಗ ಇಂತಹ ವ್ಯಕ್ತಿಯನ್ನು ಪ್ರತಿಷ್ಠಿತ ವ್ಯಕ್ತಿ ಎಂದು ಕರೆಯುತ್ತಾರೆ. ಅಂಕೋಲಾ ಪೊಲೀಸ್ ಸ್ಟೇಷನ್ ಈಗ ಸಿಪಿಐ ಅಥವಾ ಡಿವೈಎಸ್ಪಿ ಕಂಟ್ರೋಲ್‌ನಲ್ಲಿ ಇಲ್ಲ, ಬದಲಾಗಿ ಗೋಪಾಲಕೃಷ್ಣ ನಾಯಕನ ಕಂಟ್ರೋಲ್‌ನಲ್ಲಿದೆ.​ಗೋಪಾಲಕೃಷ್ಣ ನಾಯಕ ಅಕ್ರಮ ಸಂಪಾದನೆಯ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದು, ಆತನಿಗೆ ಯಾವುದೇ ಕಾನೂನುಬದ್ಧ ದಂಧೆ ಇಲ್ಲ. ಬೇನಾಮಿ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದು, ಅದರ ಎಲ್ಲ ವಿವರಗಳನ್ನು ನಾನು ಹೊರಹಾಕುತ್ತೇನೆ.

ಆತನ ಜೊತೆಗಿರುವ ಸೂರಜ ನಾಯಕ ಎಂಬುವವನು ಅಕ್ರಮ ಮರಳು ಮತ್ತು ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದು, ಅಂಕೋಲಾದ ಯುವಕರನ್ನು ಹಾಳು ಮಾಡುವ ಕೇಂದ್ರ ನಡೆಸುತ್ತಿದ್ದಾನೆ. ಒಬ್ಬ ನ್ಯಾಯವಾದಿಯಾಗಿ ಇವುಗಳ ವಿರುದ್ಧ ಸುಮ್ಮನಿರಲು ಸಾಧ್ಯವಿಲ್ಲ. ಗೃಹ ಸಚಿವರ ಕಚೇರಿಯವರು ಅಂಕೋಲಾ ಪೊಲೀಸ್ ಠಾಣೆಯ ಕರ್ತವ್ಯದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಬೇಕು. ಹಿಂದೆ ವಂದಿಗೆ ಗ್ರಾಮದಲ್ಲಿ ನಿರಪರಾಧಿ ಹುಡುಗನ ಮನೆಗೆ ನುಗ್ಗಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಗೋಪಾಲಕೃಷ್ಣ ನಾಯಕ ಸೇರಿದಂತೆ ಐವರ ಮೇಲೆ ಕಲಂ 307 ಅಡಿ ಕೇಸ್ ದಾಖಲಾಗಿತ್ತು, ಆದರೆ ಪ್ರಭಾವ ಬಳಸಿ ನಾಯಕ ಸೇರಿದಂತೆ ಮೂವರ ಹೆಸರನ್ನು ಡಿಲೀಟ್ ಮಾಡಿಸಲಾಗಿದೆ. ಇಂತಹ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಉತ್ತರ ಕನ್ನಡದ ಎಸ್ಪಿ ಅವರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದರೂ ಇಲ್ಲಿ ಅವರ ಅಧಿಕಾರ ನಡೆಯುತ್ತಿಲ್ಲ, ಎಲ್ಲವೂ ಗೃಹ ಇಲಾಖೆಯ ಫೋನ್ ಕರೆಗಳ ಮೂಲಕ ನಿಯಂತ್ರಿಸಲ್ಪಡುತ್ತಿದೆ ಎಂದು ನಾಗರಾಜ ನಾಯಕ ಅವರು ಗಂಭೀರವಾಗಿ ಆರೋಪಿಸಿದರು.

ಈ ಶಾಂತಿಯುತ ಪ್ರತಿಭಟನೆಯಲ್ಲಿ ರಾಜು ಹರಿಕಂತ್ರ. ವಕೀಲರು. ಅನಂತ ತಲಗೇರಿ ವಕೀಲರು. ಪ್ರಸಾದ್ ವಕೀಲರು. ಸೇರಿದಂತೆ ತಾಲೂಕಿನ ಕೆಲವು ಬಿಜೆಪಿ ಮುಖಂಡರು. ವಂದಿಗೆಯ ನಾಗರಿಕರು ಪ್ರಮುಖರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!