ಅಂಕೋಲಾ :”ಉತ್ತಮ ಕಲಿಕೆ, ಉಜ್ವಲ ಭವಿಷ್ಯ” ಎಂಬ ಧ್ಯೇಯವಾಕ್ಯದೊಂದಿಗೆ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಟ್ಟಿಕೇರಿ ಯಲ್ಲಿ 2026-27 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನವನ್ನು ಜೂನ್ 1 ರಂದು ಅತ್ಯಂತ ಸಡಗರದಿಂದ ಆಚರಿಸಲಾಯಿತು
.ಊರಿನ ಹಿರಿಯರು ಹಾಗೂ ಶ್ರೀ ರೇಣುಕಾ ದೇವಿ ದೇವಸ್ಥಾನದ ಮುಖ್ಯಸ್ಥರಾದ ಶ್ರೀಮತಿ ರಾಧಾಬಾಯಿ ನಾಯ್ಕ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಮಹಿಳಾ ಜಿಲ್ಲಾ ಅಧ್ಯಕ್ಷೆ ಮೋಹಿನಿ ನಾಯ್ಕ ಅವರು ಮಕ್ಕಳಿಗೆ ಸಿಹಿ ಹಂಚಿ, ಪ್ರೀತಿಯಿಂದ ಶಾಲೆಗೆ ಸ್ವಾಗತ ಕೋರಿದರು.
ಹಟ್ಟಿಕೇರಿ ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷರಾದ ಮಾನಸ ಮಹೇಶ ನಾಯ್ಕ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿಲೀಪ ಜೆ ನಾಯ್ಕ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪ್ರಸಾದ್ ಪಟೇಲ್, ಶಾಲೆಯ ದಾನಿಗಳಾದ ವಿವೇಕಪಂತ್ ಹಾಗೂ ನೆರೆದಿದ್ದ ಗಣ್ಯರೆಲ್ಲರೂ ಸೇರಿ ಮಕ್ಕಳಿಗೆ ಸರಕಾರದಿಂದ ಬಂದ ನೂತನ ಪಠ್ಯಪುಸ್ತಕಗಳನ್ನು ವಿತರಿಸಿದರು

.ಇದೇ ವೇಳೆ ಹಟ್ಟಿಕೇರಿ ಶಾಲೆಯ ಒಂದನೇ ತರಗತಿಗೆ ಸೇರಿದ ಮಕ್ಕಳಿಗೆ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಪ್ರೋತ್ಸಾಹ ಧನದ ಬಾಂಡ್ ನೀಡುತ್ತಾ ಬಂದಿರುವ ಉದ್ಯಮಿ ಶ್ರೀ ಗಣಪತಿ ಮೂಲೆಮನೆ ಹಾಗೂ ಕುಟುಂಬದವರು ಈ ಬಾರಿಯೂ ಮಕ್ಕಳಿಗೆ ಬಾಂಡ್ ವಿತರಿಸಿ, ಅವರ ಶೈಕ್ಷಣಿಕ ಪ್ರಗತಿಗೆ ಶುಭ ಹಾರೈಸಿದ್ದು ಎಲ್ಲರ ಶ್ಲಾಘನೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಭಾರತಿ ಬಿ ನಾಯಕ್, ಸಹ ಶಿಕ್ಷಕರಾದ ಅಕ್ಷತಾ ರಾಮನಾಥನ್, ಅತಿಥಿ ಶಿಕ್ಷಕಿಯರಾದ ಕುಮಾರಿ ಭಾಗ್ಯಶ್ರೀ ರಮೇಶ್ ನಾಯ್ಕ ಹಾಗೂ ನವೀನ ಆಗೇರ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಗ್ರಾಮದ ಪಾಲಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಾಲೆಯ ಮೊದಲ ದಿನವನ್ನು ಯಶಸ್ವಿಗೊಳಿಸಿದರು.













Leave a Reply