ಜನಸ್ನೇಹಿ ಸೇವೆಗೆ ಹೆಸರುವಾಸಿಯಾಗಿದ್ದ ಅಂಚೆ ಅಧಿಕಾರಿ ಅಮಿತಾ ಶಾನಭಾಗ್ ಇಂದು ನಿವೃತ್ತಿ

ಅಂಕೋಲಾ :ಸೇವೆಯೇ ಜೀವನವೆಂದು ಭಾವಿಸಿ, ಕಳೆದ ಮೂರೂವರೆ ದಶಕಗಳಿಂದ ಅಂಚೆ ಇಲಾಖೆಯಲ್ಲಿ ಪ್ರಾಮಾಣಿಕ ಹಾಗೂ ನಿಷ್ಠೆಯ ಸೇವೆಯನ್ನು ಸಲ್ಲಿಸಿರುವ ವಂದಿಗೆ ಪೋಸ್ಟ್ ಆಫೀಸ್‌ನ ಸಬ್ ಪೋಸ್ಟ್ ಮಾಸ್ಟರ್ ಅಮಿತಾ ರಾಮನಾಥ್ ಶಾನಭಾಗ್ ಅವರು ಇಂದು ತಮ್ಮ 60 ನೇ ವಯಸ್ಸಿನಲ್ಲಿ ನಿವೃತ್ತಿಯಾಗುತ್ತಿದ್ದಾರೆ.

ಅಗಸ್ಟ್ 1991 ರಲ್ಲಿ ಅಂಚೆ ಇಲಾಖೆಗೆ ಸೇರ್ಪಡೆಗೊಂಡ ಇವರು, ಆರಂಭದಲ್ಲಿ ಶಿರಸಿಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ, ತದನಂತರ ಕಾರವಾರ ಮತ್ತು ಅಂಕೋಲಾದ ಮುಖ್ಯ ಅಂಚೆ ಕಚೇರಿಗಳಲ್ಲಿ ಕೆಲಸ ನಿರ್ವಹಿಸಿದರು. ಎಲ್‌ಎಸ್‌ಜಿ (LSG) ಮೂಲಕ ಬಡ್ತಿ ಪಡೆದು ಸಬ್ ಪೋಸ್ಟ್ ಮಾಸ್ಟರ್ ಆಗಿ ಜವಾಬ್ದಾರಿ ನಿರ್ವಹಿಸಿದ ಇವರು, ಹಾಲಿ ವಂದಿಗೆ ಪೋಸ್ಟ್ ಆಫೀಸ್‌ನಲ್ಲಿ ಕಳೆದ ಎರಡುವರೆ ವರ್ಷಗಳಿಂದ ಸಬ್ ಪೋಸ್ಟ್ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಸತತ 35 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ, ಅತ್ಯಂತ ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ವಂದಿಗೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಕಚೇರಿಗೆ ಬರುವ ಪ್ರತಿಯೊಬ್ಬ ಗ್ರಾಹಕರಿಗೂ ಪಿಎಲ್‌ಐ (PLI), ಆರ್‌ಪಿಎಲ್‌ಐ (RPLI) ಹಾಗೂ ಸರ್ಕಾರದ ವಿವಿಧ ಉಳಿತಾಯ ಯೋಜನೆಗಳ ಕುರಿತು ಮನವರಿಕೆ ಮಾಡಿಕೊಟ್ಟು, ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸದಾ ಮುಂದಿದ್ದರು.ಸರಳ ಹಾಗೂ ಸೌಮ್ಯ ಸ್ವಭಾವದ ಇವರು, ಕುಮಟಾದ ಅರ್ಬನ್ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿರುವ ಪತಿಯೊಂದಿಗೆ ಸುಂದರ ಸಂಸಾರ ನಡೆಸುತ್ತಿದ್ದಾರೆ. ಇವರಿಗೆ ಇಂಜಿನಿಯರ್‌ಗಳಾದ ಇಬ್ಬರು ಗಂಡು ಮಕ್ಕಳಿದ್ದಾರೆ.ಸುಮಾರು ಮೂರೂವರೆ ದಶಕಗಳ ಕಾಲ ಇಲಾಖೆಗೆ ಸಲ್ಲಿಸಿದ ಅನನ್ಯ ಸೇವೆಯನ್ನು ಸ್ಮರಿಸುತ್ತಾ, ಅಂಚೆ ಇಲಾಖೆಯ ಸಹೋದ್ಯೋಗಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇವರ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ.

✍️ಕಿರಣ ಗಾಂವಕರ

Leave a Reply

Your email address will not be published. Required fields are marked *

error: Content is protected !!