ಪೊಲೀಸ್ ‘ಕಾಪ್ ಆಫ್ ದಿ ಮಂತ್’ ಗೌರವಕ್ಕೆ ಅಂಕೋಲಾ ಎಎಸ್‌ಐ ಮಹಾಬಲೇಶ್ವರ ಎ. ಗಡಾರ್.
ಕಾರವಾರ: ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಅಪರಾಧ ಪತ್ತೆ ಹಚ್ಚುವಿಕೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ, ಜಿಲ್ಲಾ ಪೊಲೀಸ್ ವತಿಯಿಂದ ಜೂನ್-2026ರ ಸಾಲಿನ “ಕಾಪ್ ಆಫ್ ದಿ ಮಂತ್” (Cop of the Month) ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.ಈ ಪ್ರಶಂಸನೀಯ ಪಟ್ಟಿಯಲ್ಲಿ ನಮ್ಮ ಅಂಕೋಲಾ ಪೊಲೀಸ್ ಠಾಣೆಯ (ಎ.ಎಸ್.ಐ) ಶ್ರೀ ಮಹಾಬಲೇಶ್ವರ ಎ. ಗಡೇರ ಅವರು ಅತ್ಯುನ್ನತ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಜೂನ್ ತಿಂಗಳಿನಲ್ಲಿ ಅತ್ಯಂತ ಜವಾಬ್ದಾರಿಯುತ ಹಾಗೂ ಸವಾಲಿನದ್ದಾದ **”ವಾರೆಂಟ್ ಆಸಾಮಿ ಪತ್ತೆ ಕರ್ತವ್ಯ“**ವನ್ನು ಅತ್ಯಂತ ಚಾಣಾಕ್ಷತನ ಮತ್ತು ನಿಷ್ಠೆಯಿಂದ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಇವರು ಈ ಪ್ರತಿಷ್ಠಿತ ಗೌರವವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಅಂಕೋಲಾ ತಾಲ್ಲೂಕಿನ ಕಾನೂನು ಸುವ್ಯವಸ್ಥೆಯನ್ನು ಗಟ್ಟಿಗೊಳಿಸುವಲ್ಲಿ ಇವರು ತೋರಿದ ಪ್ರಾಮಾಣಿಕತೆ ಹಾಗೂ ಸಮರ್ಪಣಾ ಭಾವವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು (SP) ವಿಶೇಷವಾಗಿ ಶ್ಲಾಘಿಸಿ, ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.ಇವರ ಈ ಮಹೋನ್ನತ ಸಾಧನೆಯೊಂದಿಗೆ ಜಿಲ್ಲೆಯಾದ್ಯಂತ ಒಟ್ಟು 19 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅವರ ಅತ್ಯುತ್ತಮ ಸೇವೆಗಾಗಿ ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದ್ದು,
ಉಳಿದ ಸಿಬ್ಬಂದಿಗಳ ವಿವರವನ್ನು ನೋಡುವುದಾದರೆ, ಕಾರವಾರ ಉಪವಿಭಾಗದಲ್ಲಿ ಅಂಕೋಲಾದ ಎ.ಎಸ್.ಐ ಇವರ ಜೊತೆಗೆ ಇನ್ನು 03 ಸಿಬ್ಬಂದಿಗಳು ಕಾಣೆಯಾದ ಪ್ರಕರಣಗಳ ಪತ್ತೆ, ಆರೋಪಿ ಬಂಧನ ಹಾಗೂ ರಾತ್ರಿ ಗಸ್ತು ಕರ್ತವ್ಯಕ್ಕಾಗಿ ಗೌರವಿಸಲ್ಪಟ್ಟಿದ್ದಾರೆ.
ಹಾಗೆಯೇ ಶಿರಸಿ ಉಪವಿಭಾಗದಿಂದ ಕೋಲೆ ಆರೋಪಿ ಪತ್ತೆ, ತನಿಖಾ ಸಹಾಯ ಹಾಗೂ ಸಮನ್ಸ್ ಕರ್ತವ್ಯ ನಿರ್ವಹಿಸಿದ ಒಟ್ಟು 04 ಸಿಬ್ಬಂದಿಗಳಿಗೆ ಈ ಪ್ರಶಸ್ತಿ ಒಲಿದಿದೆ. ಭಟ್ಕಳ ಉಪವಿಭಾಗದಲ್ಲಿ ಕೋರ್ಟ್ ಮಾನಿಟರಿಂಗ್ ಹಾಗೂ ಆರೋಪಿ ಪತ್ತೆ ಕಾರ್ಯಕ್ಕಾಗಿ ಒಟ್ಟು 04 ಸಿಬ್ಬಂದಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಾಂಡೇಲಿ ಉಪವಿಭಾಗದಲ್ಲಿ ಉತ್ತಮ ಗಸ್ತು ಮತ್ತು ವಾರೆಂಟ್ ಕರ್ತವ್ಯ ನಿರ್ವಹಿಸಿದ ಒಟ್ಟು 04 ಸಿಬ್ಬಂದಿಗಳನ್ನು ಗೌರವಿಸಲಾಗಿದ್ದು, ಡಿ.ಎ.ಆರ್ (DAR) ವಿಭಾಗದಲ್ಲಿ ಬೆಂಗಾವಲು ಹಾಗೂ ಸಾಮಾನ್ಯ ಕರ್ತವ್ಯದಲ್ಲಿ ಶ್ರಮಿಸಿದ ಒಟ್ಟು 03 ಸಿಬ್ಬಂದಿಗಳು ಈ ಜಿಲ್ಲಾ ಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಈ ಜನಸ್ನೇಹಿ ಹಾಗೂ ಪ್ರೋತ್ಸಾಹದಾಯಕ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.













Leave a Reply