ಅಂಕೋಲಾ ತಾಲೂಕಿನ ಬೊಬ್ರುವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಬೈಕ್ ರ‍್ಯಾಲಿಗೆ ನಿನ್ನೆ, ದಿನಾಂಕ 13/07/2026 ರಂದು ಯಶಸ್ವಿ ಚಾಲನೆ ನೀಡಲಾಯಿತು.
ರ‍್ಯಾಲಿಗೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಬೊಬ್ರುವಾಡ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ನಾಗೇಂದ್ರ ನಾಯ್ಕ್ ಅವರು, ಅರ್ಹ ಮತದಾರರ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಪಂಚಾಯತಿಯಿಂದ ಈ ಜಾಗೃತಿ ರ‍್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಭಾರತೀಯ ಸೇನೆಯಲ್ಲಿ ಸುದೀರ್ಘ 22 ವರ್ಷಗಳ ಕಾಲ ದೇಶಸೇವೆ ಸಲ್ಲಿಸಿ 2023 ರಲ್ಲಿ ನಿವೃತ್ತರಾಗಿರುವ ಹೆಮ್ಮೆಯ ಯೋಧ ನಾಗರಾಜ ನಾಯ್ಕ ಅವರು ಆಗಮಿಸಿದ್ದು,ಸದ್ರಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ 10 ವರ್ಷ, ರಾಜಸ್ಥಾನದಲ್ಲಿ 3 ವರ್ಷ, ಅಸ್ಸಾಂನಲ್ಲಿ ಎರಡುವರೆ ವರ್ಷ, ಉತ್ತರ ಪ್ರದೇಶದಲ್ಲಿ ಎರಡುವರೆ ವರ್ಷ ಹಾಗೂ ದೆಹಲಿಯಲ್ಲಿ ಎರಡುವರೆ ವರ್ಷಗಳ ಕಾಲ ದೇಶದ ಗಡಿ ಕಾಯ್ದಿದ್ದ ಇವರು, ಪ್ರಸ್ತುತ ಕೋಸ್ಟಲ್ ಗಾರ್ಡ್‌ನಲ್ಲಿ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದು. ಇವರು ಮತದಾರರ ವಿಶೇಷ ಪರಿಷ್ಕರಣೆಯ ಮಹತ್ವದ ಕುರಿತು ಭಾಗವಹಿಸಿದನ್ನು ಪಂಚಾಯತಿ ಮಂಡಳಿ ಹಾಗೂ ಸಾರ್ವಜನಿಕರು ಯೋಧನ ಉಪಸ್ಥಿತಿಗೆ ಅಪಾರ ಹೆಮ್ಮೆ ಮತ್ತು ಗೌರವ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಹಿರಿಯ ವಕೀಲರಾದ ಉಮೇಶ್ ನಾಯ್ಕ್ ಅವರು, ಬೊಬ್ರುವಾಡ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ನಾಗೇಂದ್ರ ನಾಯ್ಕ್ ಅವರು ಸಾರ್ವಜನಿಕ ಹಿತದೃಷ್ಟಿಯಿಂದ ನಿರಂತರವಾಗಿ ಇಂತಹ ಹತ್ತಾರು ಉಪಯುಕ್ತ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಮುಂದುವರಿದು ಮಾತನಾಡಿದ ಅವರು, ಪರೀಕ್ಷೆ ಬರೆಯುವಾಗ ನಾವು ಎಷ್ಟು ಎಚ್ಚರಿಕೆ ವಹಿಸುತ್ತೇವೆಯೋ ಅದೇ ಶ್ರದ್ಧೆಯಿಂದ ಪ್ರತಿಯೊಬ್ಬರೂ ಮತದಾರರ ಪರಿಷ್ಕರಣೆಯ ಅರ್ಜಿಗಳನ್ನು ನಿಖರವಾಗಿ ಭರ್ತಿ ಮಾಡಬೇಕು. ಭಾರತದ ಜವಾಬ್ದಾರಿಯುತ ಪ್ರಜೆಯಾಗಿ ಮತದಾನದ ಹಕ್ಕನ್ನು ಚಲಾಯಿಸಲು ಇದು ಅತ್ಯಂತ ಪ್ರಮುಖವಾದ ಹಂತವಾಗಿದ್ದು, ಸಾರ್ವಜನಿಕರು ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳ ನಡುವೆಯೂ ಈ ಪ್ರಕ್ರಿಯೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು ಹಾಗೂ ಇಂತಹ ಜವಾಬ್ದಾರಿಯುತ ಕಾರ್ಯಕ್ರಮ ಹಮ್ಮಿಕೊಂಡ ಗ್ರಾಮ ಪಂಚಾಯತಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಅನಿಲ್ ನಾಯ್ಕ್, ಮಾಜಿ ಸದಸ್ಯರಾದ ರಾಜೇಶ್ ಮಿತ್ರ ನಾಯ್ಕ್, ಸ್ಥಳೀಯ ಬೀಟ್ ಪೊಲೀಸ್ ಅಧಿಕಾರಿ, ಗ್ರಾಮ ಆಡಳಿತ ಅಧಿಕಾರಿ ಹಾಗೂ ಗ್ರಾಮದ ಹಿರಿಯರು, ಸಾರ್ವಜನಿಕರು ಉಪಸ್ಥಿತರಿದ್ದು ಅಧಿಕಾರಿಗಳನ್ನು ಮತ್ತು ದೇಶದ ಹೆಮ್ಮೆಯ ಯೋಧರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ ಗಣ್ಯರು ಜಂಟಿಯಾಗಿ ಬೈಕ್ ರ‍್ಯಾಲಿಗೆ ಹಸಿರು ನಿಶಾನೆ ತೋರುವ ಮೂಲಕ ಅಧಿಕೃತ ಚಾಲನೆ ನೀಡಿದರು..
ಬೊಬ್ರುವಾಡ ಪಂಚಾಯತಿಯ ಪ್ರಮುಖ ರಸ್ತೆ ಹಾಗೂ ಗಲ್ಲಿಗಳಲ್ಲಿ ಸಂಚರಿಸಿದ ಬೈಕ್ ರ‍್ಯಾಲಿಯು, ಮತದಾರರ ಪಟ್ಟಿಯ ಪರಿಷ್ಕರಣೆಯ ಕುರಿತು ಗ್ರಾಮಸ್ಥರಲ್ಲಿ ಯಶಸ್ವಿಯಾಗಿ ಜಾಗೃತಿ ಮೂಡಿಸಿತು.













Leave a Reply