14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೀಕರ ರಸ್ತೆ ಅಪಘಾತ ಪ್ರಕರಣದ ಆರೋಪಿ ಅಂಕೋಲಾ ಪೊಲೀಸರ ಬಲೆಗೆ

ಅಂಕೋಲಾ :ಕಳೆದ 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಭೀಕರ ರಸ್ತೆ ಅಪಘಾತ ಪ್ರಕರಣದ ಪ್ರಮುಖ ಆರೋಪಿಯನ್ನು ಅಂಕೋಲಾ ಪೊಲೀಸರು ಕೊನೆಗೂ ಸಿನಿಮೀಯ ಶೈಲಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕೊಟಬಾಗಿ ಗ್ರಾಮದ ನಿವಾಸಿಯಾದ ರಫೀಕ್ ಅಹ್ಮದ್ ತಂದೆ ಮೆಹಬೂಬ ಸುಬಾನಿ ಕಮಟಗಿ ಬಂಧಿತ ಆರೋಪಿಯಾಗಿದ್ದಾನೆ.​ಕಳೆದ 2012ರ ನವೆಂಬರ್ 28 ರಂದು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಲಾರಿ ಚಲಾಯಿಸಿಕೊಂಡು ಹೋಗುತ್ತಿದ್ದ ಈತ, ಸುಂಕಸಾಳ ರಾಷ್ಟ್ರೀಯ ಹೆದ್ದಾರಿ-52 ರ ಬಳಿ ಎದುರುಗಡೆಯಿಂದ ಬರುತ್ತಿದ್ದ ಸ್ಕಾರ್ಪಿಯೋ ವಾಹನಕ್ಕೆ ಭೀಕರವಾಗಿ ಡಿಕ್ಕಿ ಹೊಡೆಸಿದ್ದನು. ಈ ಭೀಕರ ಅಪಘಾತದಲ್ಲಿ ಸ್ಕಾರ್ಪಿಯೋ ಚಾಲಕ 73 ವರ್ಷದ ಲೋರೆನ್ಸಸ್ ಫರ್ನಾಂಡಿಸ್ ಅವರು ಸ್ಥಳದಲ್ಲೇ ಮರಣ ಹೊಂದಿದ್ದರು ಹಾಗೂ ವಾಹನದಲ್ಲಿದ್ದ ಇನ್ನುಳಿದ ಮೂವರು ತೀವ್ರವಾಗಿ ಗಾಯಗೊಂಡಿದ್ದರು.

ಈ ಸಂಬಂಧ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತಾದರೂ, ಆರೋಪಿಯು 2013 ರಿಂದ ನ್ಯಾಯಾಲಯಕ್ಕೆ ಹಾಜರಾಗದೇ ತನ್ನ ಖಾಯಂ ವಿಳಾಸವನ್ನೂ ಬದಲಾಯಿಸಿ ತಲೆಮರೆಸಿಕೊಂಡಿದ್ದನು.​ಖಚಿತ ಮಾಹಿತಿ ಬೆನ್ನಟ್ಟಿದ ಅಂಕೋಲಾ ಪೊಲೀಸರ ವಿಶೇಷ ತನಿಖಾ ತಂಡವು, ಹುಬ್ಬಳ್ಳಿಯಿಂದ ಕೇರಳದ ಕಡೆಗೆ ಲಾರಿ ಚಾಲಕನಾಗಿ ಹೋಗುತ್ತಿರುವಾಗ ಆರೋಪಿಯನ್ನು ಅಂಕೋಲಾದ ಬಾಳೆಗುಳಿಯಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ.

ಒಟ್ಟು 14 ವರ್ಷಗಳ ಬಳಿಕ ಆರೋಪಿಯನ್ನು ಅಂಕೋಲಾದ ಮಾನ್ಯ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಕಾರವಾರ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಿದೆ.​ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ದೀಪನ್ ಎಮ್ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೃಷ್ಣಮೂರ್ತಿ ಡಿ. ಹಾಗೂ ಕಾರವಾರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಗಿರೀಶ್ ಎಸ್.ವಿ. ರವರುಗಳ ಮಾರ್ಗದರ್ಶನದಲ್ಲಿ, ಅಂಕೋಲಾ ಪೊಲೀಸ್ ನಿರೀಕ್ಷಕರಾದ ಶ್ರೀ ಚಂದ್ರಶೇಖರ ಮಠಪತಿ ನೇತೃತ್ವದ ತಂಡ ನಡೆಸಿದ ಈ ಯಶಸ್ವಿ ಕಾರ್ಯಾಚರಣೆಯನ್ನು ಇಲಾಖೆಯ ಉನ್ನತ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ತನಿಖಾ ತಂಡದ ಉಸ್ತುವಾರಿ ಅಧಿಕಾರಿಗಳಾದ ಸುನಿಲ ಹುಲ್ಲೋಳ್ಳಿ (ಪಿ.ಎಸ್.ಐ ಸಂಚಾರ), ದೇವಿದಾಸ ಜಾಪೋಲೇಕರ (ಎ.ಎಸ್.ಐ) ಹಾಗೂ ಸಿಬ್ಬಂದಿಗಳಾದ ಮೋಹನ ಗೌಡ (ಸಿ.ಹೆಚ್.ಸಿ 502), ಮಹಾದೇವ ಸಿದ್ದಿ (ಸಿ.ಹೆಚ್.ಸಿ 1314), ರಮೇಶ ತುಂಗಳ (ಸಿಪಿಸಿ-1766), ರಯೀಸ ಬಾಗವಾನ (ಸಿಪಿಸಿ-1208) ಮತ್ತು ವಾಹನ ಚಾಲಕರಾದ ಉಮೇಶ ಗಾಳಿ (ಎಪಿಸಿ-207) ಇವರುಗಳು ಪ್ರಮುಖ ಪಾತ್ರ ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!