ಅಂಕೋಲಾ: ಪುರಸಭೆಯ ಮಾಜಿ ಸದಸ್ಯ ಹಾಗೂ ಪ್ರಮುಖ ದಲಿತ ನಾಯಕರಾಗಿದ್ದ ಅಶೋಕ್ ಮಂಗೇಶ್ ಶೇಡಗೇರಿ ಅವರ ಅಕಾಲಿಕ ನಿಧನವು ಇಡೀ ತಾಲೂಕನ್ನು ಕಂಬನಿಯಲ್ಲಿ ಮುಳುಗಿಸಿದೆ. ಕಳೆದ ಜುಲೈ 7ರ ಮಂಗಳವಾರ ರಾತ್ರಿ ಅಂಕೋಲಾದಿಂದ ಕಾರವಾರಕ್ಕೆ ಕರೆದೊಯ್ಯುವಾಗ, ಜಿಲ್ಲಾಸ್ಪತ್ರೆ ಸೇರುವ ಮುನ್ನವೇ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಆಸ್ಪತ್ರೆಯ ವ್ಯವಸ್ಥೆಯ ನಿರ್ಲಕ್ಷ್ಯವೇ ಮೂಲ ಕಾರಣ ಎಂದು ಆರೋಪಿಸಿ ದಲಿತ ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕರು ನಿನ್ನೆ ದಿನಾಂಕ: 10/07/2026ಆಸ್ಪತ್ರೆಗೆ ಧಾವಿಸಿ ಆಕ್ರೋಶ ಹೊರಹಾಕಿದ್ದಾರೆ.
ಘಟನೆಯ ವಿವರ ನೋಡುವುದಾದರೆ, ಜುಲೈ 7ರಂದು ಅಶೋಕ್ ಶೇಡಗೇರಿಯವರು ಮನೆಯಲ್ಲಿ ಮಂಚದ ಮೇಲಿಂದ ಕುಸಿದು ಬಿದ್ದಿದ್ದರು. ಇದರಿಂದ ಅವರಿಗೆ ತಲೆಗೆ ಚಿಕ್ಕಪುಟ್ಟ ಗಾಯವಾಗಿತ್ತು. ತಕ್ಷಣವೇ ಅವರನ್ನು ಮೊದಲು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಅವರಿಗೆ ಉಸಿರಾಟದ ಯಾವುದೇ ಗಂಭೀರವಾದ ಸಮಸ್ಯೆ ಇರಲಿಲ್ಲ ಎಂದು ಅವರನ್ನು ಪರೀಕ್ಷಿಸಿದ ಕಾರ್ಯನಿರತ ವೈದ್ಯರು ತಿಳಿಸಿದ್ದರು. ಆದರೆ, ಹೆಚ್ಚಿನ ಸ್ಕ್ಯಾನಿಂಗ್ ಸೌಲಭ್ಯಗಳು ಅಂಕೋಲಾದಲ್ಲಿ ಇಲ್ಲದ ಕಾರಣ, ಅವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ರೆಫರ್ ಮಾಡಲಾಯಿತು. ಅಂಕೋಲಾದಿಂದ ಕಾರವಾರ 36 ಕಿಲೋಮೀಟರ್ ದೂರವಿದ್ದು, ದುರದೃಷ್ಟವಶಾತ್ ಅಶೋಕ್ ಅವರು ಜಿಲ್ಲಾ ಆಸ್ಪತ್ರೆ ತಲುಪುವ ಮುನ್ನವೇ ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ .ಈ ಘಟನೆಯ ಬೆನ್ನಲ್ಲೇ ಆಸ್ಪತ್ರೆಗೆ ಧಾವಿಸಿದ ಆಗೇರ್ ಸಮಾಜದ ಪ್ರಮುಖ ಮುಖಂಡರು ಆಸ್ಪತ್ರೆಯ ಸಿಬ್ಬಂದಿ ಮತ್ತು ವ್ಯವಸ್ಥೆಯ ವಿರುದ್ಧ ತೀವ್ರವಾಗಿ ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.
ಅಶೋಕ್ ಅವರಿಗೆ ಉಸಿರಾಟದ ಗಂಭೀರ ಸಮಸ್ಯೆ ಇರಲಿಲ್ಲ ಎಂದಾದರೆ, ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲದ ವಿಷಯವನ್ನು ನಮಗೆ ಮೊದಲೇ ತಿಳಿಸಬೇಕಿತ್ತಲ್ಲವೇ? ಹಾಗಿದ್ದಲ್ಲಿ ನಾವು ಕಾಲಹರಣ ಮಾಡದೆ ಹತ್ತಿರದ ಖಾಸಗಿ ಆಸ್ಪತ್ರೆಗಾದರೂ ಕರೆದೊಯ್ದು ಅವರ ಪ್ರಾಣ ಉಳಿಸಿಕೊಳ್ಳುತ್ತಿದ್ದೆವು ಎಂದು ಆಸ್ಪತ್ರೆಯಲ್ಲಿ ಅಂದು ಅಶೋಕ್ ರವರಿಗೆ ಚಿಕಿತ್ಸೆ ನೀಡಿದ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಅಂಕೋಲಾದಿಂದ ಸಣ್ಣಪುಟ್ಟ ಸಮಸ್ಯೆಗಳಿಗೂ ಕಾರವಾರಕ್ಕೆ ರೆಫರ್ ಮಾಡುವುದರಿಂದ ದಾರಿಯಲ್ಲೇ ಅದೆಷ್ಟೋ ಪ್ರಾಣಹಾನಿಯಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ 108 ಅಂಬುಲೆನ್ಸ್ ಸರಿಯಾದ ಸಮಯಕ್ಕೆ ಬರುವುದಿಲ್ಲ. ಆಸ್ಪತ್ರೆಯಲ್ಲಿರುವ ಇತರೆ ವಾಹನಗಳಲ್ಲಿ ಕರೆದೊಯ್ಯುವಾಗ ತುರ್ತು ಸೇವೆಗೆ ಇಲಾಖೆಯಿಂದ ನರ್ಸ್‌ಗಳನ್ನು ನಿಯೋಜಿಸುವುದಿಲ್ಲ ಹಾಗೂ ವಾಹನಗಳಲ್ಲಿ ಆಕ್ಸಿಜನ್ ಕೊರತೆಯೂ ಇದೆ. ಈ ರೀತಿಯ ದಯನೀಯ ವ್ಯವಸ್ಥೆಯಿಂದ ಇನ್ನು ಎಷ್ಟು ಬಡವರ ಪ್ರಾಣಗಳ ಜೊತೆ ಚೆಲ್ಲಾಟವಾಡುತ್ತೀರಿ ಎಂದು ಮುಖಂಡರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರ ಮತ್ತು ಮುಖಂಡರ ಈ ತೀವ್ರ ಆಕ್ರೋಶದ ಬೆನ್ನಲ್ಲೇ, ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಜಗದೀಶ್ ನಾಯ್ಕ್ ಅವರು ಗೋಕರ್ಣದಲ್ಲಿ ಎರಡು ಶವಗಳ ಮರಣೋತ್ತರ ಪರೀಕ್ಷೆಯಲ್ಲಿ ಭಾಗವಹಿಸಿ ತಕ್ಷಣವೇ ಅಂಕೋಲಕ್ಕೆ ಧಾವಿಸಿ ಬಂದರು. ಅವರು ತುರ್ತು ಸಿಬ್ಬಂದಿಗಳ ಸಭೆಯನ್ನು ಕರೆದು, ದಲಿತ ನಾಯಕರ ಹಾಗೂ ಸಾರ್ವಜನಿಕರ ಸಮ್ಮುಖದಲ್ಲೇ ನಡೆದ ಘಟನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಈ ಸಭೆಯಲ್ಲೂ ಸಾರ್ವಜನಿಕರು ಆಸ್ಪತ್ರೆಯ ದುಸ್ಥಿತಿಯ ಬಗ್ಗೆ ಬಿಸಿಬಿಸಿ ಚರ್ಚೆ ನಡೆಸಿ ಪ್ರಶ್ನೆಗಳ ಸುರಿಮಳೆಯನ್ನೇ ಗರೆದರು. 108 ವಾಹನದ ವಿಳಂಬ, ಹೆರಿಗೆಯಂತಹ ಪ್ರಮುಖ ತಜ್ಞ ವೈದ್ಯರಿಲ್ಲದಿರುವುದು, ತುರ್ತು ಅಂಬುಲೆನ್ಸ್‌ಗೆ ನರ್ಸ್‌ಗಳ ಕೊರತೆ ಹಾಗೂ ಅಲ್ಟ್ರಾ ಸೌಂಡ್ ಉಪಕರಣಗಳು ಇಲ್ಲದಿರುವುದನ್ನು ಕಂಡು, “ಕೇವಲ ಜ್ವರ, ತಂಡಿ ಯಂತಹ ಸಣ್ಣಪುಟ್ಟ ಕಾಯಿಲೆಗಳಿಗಷ್ಟೇ ಈ ಸರ್ಕಾರಿ ಆಸ್ಪತ್ರೆ ಇರುವುದಾದರೆ ಸಾರ್ವಜನಿಕರಿಗೆ ಇದು ಯಾಕೆ ಬೇಕು?” ಎಂಬ ಆಕ್ರೋಶದ ಕೂಗು ಸಭೆಯಲ್ಲಿ ಕೇಳಿಬಂದಿತು.ಸಾರ್ವಜನಿಕರ ಈ ಎಲ್ಲಾ ಆಕ್ಷೇಪಗಳಿಗೆ ಉತ್ತರಿಸಿದ ಆಡಳಿತಾಧಿಕಾರಿ ಡಾ. ಜಗದೀಶ್ ನಾಯ್ಕ್ ಅವರು, ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಡಿ-ಗ್ರೂಪ್ ನೌಕರರ ತೀವ್ರ ಕೊರತೆಯಿದೆ. ಈ ನೇಮಕಾತಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ಇಲಾಖೆಯ ಮೇಲಾಧಿಕಾರಿಗಳಿಗೆ ಹಲವು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದ ಕೋಲಾರ ಹಾಗೂ ಇತರ ಭಾಗಗಳಲ್ಲಿ ಸಾಕಷ್ಟು ವೈದ್ಯರಿದ್ದಾರೆ, ಆದರೆ ಅವರಾರೂ ನಮ್ಮ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಭಾಗಕ್ಕೆ ಬಂದು ಸೇವೆ ಸಲ್ಲಿಸಲು ಸಿದ್ಧರಿಲ್ಲ. ಇದು ಸರ್ಕಾರಿ ಮಟ್ಟದಲ್ಲಿ ಬಗೆಹರಿಯಬೇಕಾದ ಸಮಸ್ಯೆಯಾಗಿದೆ. ಆಸ್ಪತ್ರೆಗೆ ಅಲ್ಟ್ರಾ ಸೌಂಡ್ ಯಂತ್ರ ಹಾಗೂ ಅದನ್ನು ನಿರ್ವಹಿಸಲು ತಜ್ಞ ವೈದ್ಯರ ಅಗತ್ಯವಿದ್ದು, ಸಾರ್ವಜನಿಕರ ಬೇಡಿಕೆ ಇರುವ ಈ ಎಲ್ಲಾ ವಿಷಯಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ನಮ್ಮ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಂಕೋಲಾ ಆಸ್ಪತ್ರೆಯ ಇನ್ನಿತರ ತಜ್ಞ ವೈದ್ಯರು, ಸ್ಟಾಪ್ ನರ್ಸ್‌ಗಳು ಹಾಗೂ ಹಿರಿಯ-ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಅಂಕೋಲಾ ಆಸ್ಪತ್ರೆಯ ಆಡಳಿತಾಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದರೂ, ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ. ಸ್ಥಳೀಯ ಶಾಸಕರು ಹಾಗೂ ಮಾನ್ಯ ಆರೋಗ್ಯ ಸಚಿವರು ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಕೇವಲ ಪ್ರಸ್ತಾವನೆಗಳಿಗೆ ಸೀಮಿತವಾಗದೆ, ಅಂಕೋಲಾ ಆಸ್ಪತ್ರೆಗೆ ತಕ್ಷಣವೇ ಅಗತ್ಯವಿರುವ ತಜ್ಞ ವೈದ್ಯರನ್ನು, ನರ್ಸ್‌ಗಳನ್ನು ಹಾಗೂ ಅಲ್ಟ್ರಾ ಸೌಂಡ್ ಸೇರಿದಂತೆ ತುರ್ತು ಚಿಕಿತ್ಸಾ ಉಪಕರಣಗಳನ್ನು ಮಂಜೂರು ಮಾಡಬೇಕು. ಪ್ರತಿಯೊಬ್ಬ ಸಾರ್ವಜನಿಕರ ಜೀವಕ್ಕೂ ಅಮೂಲ್ಯವಾದ ಬೆಲೆಯಿದೆ. ಸೌಲಭ್ಯಗಳ ಕೊರತೆಯಿಂದಾಗಿ ಅಶೋಕ್ ಶೇಡಗೇರಿಯವರಂತಹ ಜನಪ್ರಿಯ ದಲಿತ ನಾಯಕರನ್ನು ಕಳೆದುಕೊಂಡಿರುವುದು ತಾಲೂಕಿಗೆ ತುಂಬಲಾರದ ನಷ್ಟ. ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಸರ್ಕಾರ ತಕ್ಷಣವೇ ಸ್ಪಂದಿಸಿ, ಇಲ್ಲಿನ ಆಸ್ಪತ್ರೆಯ ಮೂಲಭೂತ ಸಮಸ್ಯೆಗಳನ್ನು ಯುದ್ಧೋಪಾದಿಯಲ್ಲಿ ಬಗೆಹರಿಸಬೇಕಾಗಿದೆ.













Leave a Reply