ಅಂಕೋಲಾ: ಸಾರ್ವಜನಿಕ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಕಸ ಹಾಕಲು ಹೋದ ವೃದ್ಧೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವಬೆದರಿಕೆ ಒಡ್ಡಿದ ಕಾರವಾರದ ನಗರಾಭಿವೃದ್ಧಿ ಕೋಶದ (DUDC) ಸರ್ಕಾರಿ ನೌಕರ ರಾಬರ್ಟ್ ಕೆ. ಜಾರ್ಜ್ ಎಂಬಾತನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್.ಐ.ಆರ್. (FIR) ದಾಖಲಾಗಿದೆ.
ಅಂಕೋಲಾ ತಾಲೂಕಿನ ಹೊನ್ನೇಕೇರಿ ನಿವಾಸಿ ಸಂತ್ರಸ್ತೆ ರೋಹಿಣಿ ಗಂಗಾಧರ ನಾಯ್ಕ ಅವರು ಪುರಸಭೆಯ ಕಸದ ವಾಹನಕ್ಕೆ ಕಸ ಹಾಕಲು ಹೋದಾಗ, ಈ ಸರ್ಕಾರಿ ನೌಕರ ರಾಬರ್ಟ್ ಜಾರ್ಜ್ ತನ್ನ ಹೆಂಡತಿಯೊಂದಿಗೆ ಸೇರಿ ಜಗಳ ತೆಗೆದು, “ಕಸದ ಗಾಡಿಯಲ್ಲೇ ತುಂಬಿ ಪಾರ್ಸಲ್ ಮಾಡುತ್ತೇನೆ” ಎಂದು ಹೆದರಿಸಿ, ತನ್ನ ಮಗನನ್ನು ಕೊಲ್ಲುವುದಾಗಿ ಜೀವಬೆದರಿಕೆ ಹಾಕಿದ್ದನು. ಈ ದೂರಿನ ಹಿನ್ನೆಲೆಯಲ್ಲಿ ಮಾನ್ಯ ಸಿವಿಲ್ ಜಡ್ಜ್ ಮತ್ತು JMFC ನ್ಯಾಯಾಲಯ ಅಂಕೋಲಾ ಇವರ ಆದೇಶದಂತೆ ಅಂಕೋಲಾ ಪೊಲೀಸರು ಆರೋಪಿತ ರಾಬರ್ಟ್ ಜಾರ್ಜ್ ಮೇಲೆ ಬಿಎನ್ಎಸ್ ಸೆಕ್ಷನ್ 351(2) ಹಾಗೂ 352 ರ ಅಡಿಯಲ್ಲಿ ಕ್ರೈಂ ನಂಬರ್ 0127/2026 ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಈ ಪೊಲೀಸ್ ಪ್ರಕರಣದ ಜೊತೆ ಇಡೀ ವಿವಾದದ ಹಿನ್ನೆಲೆಯಾಗಿದ್ದ ಸಾರ್ವಜನಿಕ ರಸ್ತೆಯ ಅಕ್ರಮದ ವಿರುದ್ಧ ಪುರಸಭೆಯೂ ಸಹ ಕ್ರಮಕ್ಕೆ ಮುಂದಾಗಿದ್ದು, ಆರೋಪಿತ ರಾಬರ್ಟ್ ಜಾರ್ಜ್ನ ಹೆಂಡತಿಯಾದ ಭಾರತಿ ಓಮು ನಾಯ್ಕಳಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿದೆ. ಸಾರ್ವಜನಿಕರು ತಿರುಗಾಡುವ ರಸ್ತೆಯಲ್ಲೇ ಈಕೆ ಅನಧಿಕೃತವಾಗಿ ಗೊಬ್ಬರ ಗುಂಡಿ ನಿರ್ಮಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರ ಸ್ಥಳ ಪರಿಶೀಲನೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ, ಮುಖ್ಯಾಧಿಕಾರಿಗಳು ಸದರಿ ಗೊಬ್ಬರ ಗುಂಡಿಯನ್ನು ಕೂಡಲೇ ಖುಲ್ಲಾಪಡಿಸುವಂತೆ ಸೂಚಿಸಿ ನೋಟಿಸ್ ನೀಡಿದ್ದಾರೆ. ಸದ್ಯಕ್ಕೆ ಆರೋಪಿತನ ಹೆಂಡತಿ ಭಾರತಿ ವಿರುದ್ಧ ಪೊಲೀಸ್ ಪ್ರಕರಣವೇನೂ ದಾಖಲಾಗಿಲ್ಲವಾದರೂ, ಪುರಸಭೆಯಿಂದ ನೋಟಿಸ್ ಜಾರಿಯಾಗಿ ಇಷ್ಟು ದಿನ ಕಳೆದರೂ ಇಲ್ಲಿಯವರೆಗೂ ಆ ಅಕ್ರಮ ಗೊಬ್ಬರ ಗುಂಡಿಯನ್ನು ತೆರವುಗೊಳಿಸುವ ಕಾರ್ಯ ನಡೆದಿಲ್ಲ ಎಂದು ತಿಳಿದುಬಂದಿದೆ.













Leave a Reply