ಅಂಕೋಲಾ :ಕರ್ನಾಟಕದ ಬಾರ್ಡೋಲಿ, ಹೋರಾಟದ ಕರ್ಮಭೂಮಿ ಎಂದೇ ಹೆಸರಾದ ಅಂಕೋಲಾ ತಾಲ್ಲೂಕಿನಲ್ಲಿ ಈಗ ಮತ್ತೊಂದು ಸುನಾಮಿ ಏಳುವ ಲಕ್ಷಣಗಳು ಗೋಚರಿಸುತ್ತಿವೆ. ಅಲಗೇರಿ ಮತ್ತು ಭಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪರಿಸರ ವಿನಾಶಕ್ಕೆ ಕಾರಣವಾಗಬಹುದಾದ ಅವೈಜ್ಞಾನಿಕ ಯೋಜನೆಗಳಿಗಾಗಿ ಜಲಮೂಲ, ಕೃಷಿ ಭೂಮಿ ಹಾಗೂ ಅರಣ್ಯ ಪ್ರದೇಶವನ್ನು ಬಲಿ ಕೊಡಲು ತೆರೆಮರೆಯಲ್ಲಿ ದೊಡ್ಡ ಸ್ಕೆಚ್ ಸಿದ್ಧವಾಗುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಇತ್ತೀಚೆಗೆ ಅಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಗ್ರಿಬೈಲ್‌ನ ಸರ್ವೆ ನಂ 25 ಹಿಸ್ಸಾ 1 ರ 7 ಎಕರೆ 26 ಗುಂಟೆ ಜಮೀನಿನ ದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿ, ಪರವೂರಿನ ಬೇನಾಮಿ ವ್ಯಕ್ತಿಗಳಿಗೆ ಮಾರಾಟ ಮಾಡಿರುವುದು ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.
ಕಣ್ಣೆದುರೇ ಇಷ್ಟೆಲ್ಲಾ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರಲ್ಲಿ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಉಡೀಸ್ ಮಾಡಿದೆ. ಈ ಜಮೀನು ಏಕಾಏಕಿ ಬೇನಾಮಿಯಾಗಿ ಪರಭಾರೆಯಾಗಿರುವುದರ ಹಿಂದೆ, ಕೇಣಿಯಲ್ಲಿ ಜೆ.ಎಸ್.ಡಬ್ಲ್ಯೂ (JSW) ಕಂಪನಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರಿನ ಚಟುವಟಿಕೆಗಳನ್ನು ಚುರುಕುಗೊಳಿಸುವ ಕಾಣದ ಕೈಗಳ ಬೃಹತ್ ಷಡ್ಯಂತ್ರ ಅಡಗಿದೆ ಎಂಬ ಸಂಶಯ ಈಗ ದಟ್ಟವಾಗಿದೆ.
ಹಿಂದೆ ಬೆಲೆಕೇರಿ ಬಂದರಿನ ಮೂಲಕ ನಡೆದ ಅದಿರು ಸಾಗಾಟದ ಕರಾಳ ದಿನಗಳನ್ನು ಅಂಕೋಲಾದ ಜನತೆ ಇಂದಿಗೂ ಮರೆತಿಲ್ಲ. ಸಾವಿರಾರು ಲಾರಿಗಳ ಸಂಚಾರದಿಂದ ಸಂಭವಿಸಿದ ಅಸಂಖ್ಯಾತ ರಸ್ತೆ ಅಪಘಾತಗಳು, ಅದಿರು ಧೂಳಿನಿಂದ ಹರಡಿದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು, ಕಲುಷಿತಗೊಂಡ ಪರಿಸರ ಮತ್ತು ಬಲಿಯಾದ ಜಾನುವಾರುಗಳ ನೆನಪು ಇಂದಿಗೂ ಹಸಿರಾಗಿದೆ. ಈಗಾಗಲೇ ಕೊಂಕಣ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ನೌಕಾನೆಲೆಯಂತಹ ಯೋಜನೆಗಳಿಗಾಗಿ ಇಲ್ಲಿನ ಹಸಿರು ಬೆಟ್ಟಗಳು ಬರಿದಾಗಿವೆ. ಉರುವಲು ಕಟ್ಟಿಗೆ ಹಾಗೂ ದನಕರುಗಳ ಸೊಪ್ಪಿಗಾಗಿ ಪರದಾಡುವಂತಾಗಿದ್ದು, ಮನುಷ್ಯ ಮತ್ತು ಕಾಡುಪ್ರಾಣಿಗಳ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ಜಿ.ಎಸ್.ಡಬ್ಲ್ಯೂ ಕಂಪನಿಯ ವಾಣಿಜ್ಯ ದಾಸ್ತಾನು ಕೇಂದ್ರಕ್ಕೆ ಇಲ್ಲಿ ಅವಕಾಶ ನೀಡಿದರೆ, ಇಡೀ ಜನಜೀವನ ಅಸ್ತವ್ಯಸ್ತಗೊಂಡು ಕುಡಿಯುವ ನೀರಿನ ಬಾವಿಗಳೂ ಸೇರಿದಂತೆ ಸಮಸ್ತ ಜಲಮೂಲಗಳು ನಾಶವಾಗುವುದು ಸೂರ್ಯನಷ್ಟೇ ಸತ್ಯ.ಈ ಹಿನ್ನೆಲೆಯಲ್ಲಿ ಅಂಕೋಲಾ ಸರ್ವ ಸಮಾಜಗಳ ಹಿತ ರಕ್ಷಣಾ ಒಕ್ಕೂಟ ಹಾಗೂ ಕೇಣಿ ವಾಣಿಜ್ಯ ಬಂದರು ವಿರೋಧಿ ಉತ್ತರ ಕನ್ನಡ ಉಳಿಸಿ ಹೋರಾಟಗಾರರು ಅಂಕೋಲಾ ತಹಸೀಲ್ದಾರ್ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಯಾವುದೇ ಕಾರಣಕ್ಕೂ ಜನವಸತಿ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ಅವೈಜ್ಞಾನಿಕ ಯೋಜನೆಗಳಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಲಾಗಿದೆ. ಒಂದು ವೇಳೆ ರಾಜಕೀಯ ಪ್ರಭಾವಕ್ಕೋ ಅಥವಾ ಧನಬಲದ ಒತ್ತಡಕ್ಕೋ ಮಣಿದು ಬೊಗ್ರಿಬೈಲ್ ಮತ್ತು ಸುತ್ತಲಿನ ಜಾಗವನ್ನು ಕಂಪನಿಗೆ ಬಿಟ್ಟುಕೊಟ್ಟರೆ, ಮುಂದಿನ ದಿನಗಳಲ್ಲಿ ಇಡೀ ಉತ್ತರ ಕನ್ನಡ ಜಿಲ್ಲೆ ಉರಿಯುವಂತಹ ತೀವ್ರ ಸ್ವರೂಪದ ನಿರಂತರ ಕ್ರಾಂತಿಕಾರಿ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಹೋರಾಟಗಾರರು ವ್ಯವಸ್ಥೆಗೆ ಎಚ್ಚರಿಕೆ ನೀಡಿದ್ದಾರೆ. ಧನದಾಹಿ ಕಂಪನಿಗಳ ಆಟಕ್ಕೆ ಅಂಕೋಲಾದ ಅಸ್ತಿತ್ವವನ್ನು ಬಲಿಗೊಡಲು ಬಿಡುವುದಿಲ್ಲ ಎಂಬ ಸಂಕಲ್ಪ ಈಗ ಹಳ್ಳಿ ಹಳ್ಳಿಗಳಲ್ಲಿ ಮೊಳಗುತ್ತಿದೆ.













Leave a Reply