ಹೆಸ್ಕಾಂ ಸಭೆಗೆ ಬರುವವರೇ ಇಲ್ಲ; ಫೋನ್‌ನಲ್ಲೇ ದೂರು ಹೇಳುತ್ತಿರುವ ಗ್ರಾಹಕರು – ಕುಂದುಕೊರತೆ ಸಭೆಯ ಸದುಪಯೋಗ ಪಡೆದುಕೊಳ್ಳಿ: ಎಇಇ ಪ್ರವೀಣ್ ನಾಯ್ಕ.

ವಿದ್ಯುತ್ ಬಗ್ಗೆ ಯಾವುದೇ ಸಮಸ್ಯೆ ಇದ್ದರೂ ಮೂರನೇ ಶನಿವಾರದ ಕುಂದುಕೊರತೆ ಸಭೆಯ ಸದುಪಯೋಗ ಪಡೆದುಕೊಳ್ಳಿ – AEE ಪ್ರವೀಣ ನಾಯ್ಕ ಮನವಿ.

​ಅಂಕೋಲಾ: ಹೆಸ್ಕಾಂ ಇಲಾಖೆಯು ತಾಲೂಕಿನ ಗ್ರಾಹಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ತಕ್ಷಣದ ಪರಿಹಾರ ಒದಗಿಸಲು ರೂಪಿಸಿರುವ ಅದಾಲತ್ ಹಾಗೂ ಗ್ರಾಹಕರ ಕುಂದುಕೊರತೆ ಸಭೆಗಳಿಗೆ ಸಾರ್ವಜನಿಕರ ಸ್ಪಂದನೆ ತೀರಾ ನಿರೀಕ್ಷಿತ ಮಟ್ಟದಲ್ಲಿಲ್ಲದಿರುವುದು ಕಂಡುಬಂದಿದೆ. ಪ್ರಸ್ತುತ ಇಂದಿನ ಕಾಲಘಟ್ಟದಲ್ಲಿ ವಿದ್ಯುತ್ ಗ್ರಾಹಕರು ಕೇವಲ ಫೋನಿನಲ್ಲಿಯೇ ತಮ್ಮ ದೂರು ದುಮ್ಮಾನಗಳನ್ನು ಹೇಳುತ್ತಿದ್ದಾರೆಯೇ ಹೊರತು, ತಾಲೂಕು ವ್ಯಾಪ್ತಿಯಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರದಂದು ನಿಯಮಿತವಾಗಿ ನಡೆಯುವ ಈ ಮಹತ್ವದ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿಸುತ್ತಿಲ್ಲ, ಕೇವಲ ಬೆರಳಣಿಕೆಯಷ್ಟು ಜನರು ಮಾತ್ರ ಬಂದು ಹೋಗುತ್ತಿದ್ದಾರೆ ಎಂದು ಅಂಕೋಲಾ ಹೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆದ ಪ್ರವೀಣ ನಾಯ್ಕ ಅವರು ದಿನಾಂಕ 20-06-2026 ರಂದು ನಡೆದ ಸಭೆಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ವ್ಯಾಪ್ತಿಯಲ್ಲಿರುವ ಗ್ರಾಹಕರಿಗೋಸ್ಕರವೇ ಇಲಾಖೆಯಿಂದ ಪ್ರತಿ ತಿಂಗಳ ಮೂರನೇ ಶನಿವಾರ ಈ ಸಭೆಯನ್ನು ಮಾಡುತ್ತಾ ಬರಲಾಗುತ್ತಿದ್ದು, ಹೊಸ ವಿದ್ಯುತ್ ಸಂಪರ್ಕ ಪಡೆಯುವ ವಿಷಯ ಇರಬಹುದು, ಮನೆ ಬಳಿ ಇರುವ ಲೈನ್‌ಗಳ ದೂರು ಇರಬಹುದು ಅಥವಾ ವಿದ್ಯುತ್ ಕಂಬಗಳ ಸ್ಥಳಾಂತರದಂತಹ ಯಾವುದೇ ಕೆಲಸಗಳಿದ್ದರೂ ಇಲಾಖೆಯಿಂದ ಸೂಕ್ತ ಮಾಹಿತಿ ಹಾಗೂ ಪರಿಹಾರ ನೀಡಲಾಗುತ್ತದೆ. ಗ್ರಾಹಕರು ಈ ಸಭೆಗೆ ಖುದ್ದಾಗಿ ಬಂದು ಅರ್ಜಿ ಮುಖಾಂತರ ದೂರು ನೀಡಿದರೆ, ಅದನ್ನು ತಕ್ಷಣವೇ ಸಂಬಂಧಪಟ್ಟ ಶಾಕಾಧಿಕಾರಿಗಳ ಮುಖಾಂತರ ಪರಿಶೀಲಿಸಿ, ಅವರಿಗೆ ತಕ್ಷಣವೇ ಸ್ಪಂದನೆ ನೀಡುವುದರ ಜೊತೆಗೆ ಕೆಲಸವನ್ನು ಯಾವ ರೀತಿ ಮಾಡಬೇಕೆಂಬ ಸೂಕ್ತ ಮಾರ್ಗದರ್ಶನವನ್ನೂ ನೀಡಲಾಗುತ್ತದೆ. ನಿಮ್ಮ ಪ್ರತಿ ಅರ್ಜಿಗೂ ಇಲ್ಲಿ ತ್ವರಿತ ರೀತಿಯ ಸ್ಪಂದನೆ ಸಿಗಲಿದ್ದು, ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಉತ್ಸುಕರಾಗಿ ತಮ್ಮದೇನೇ ವಿದ್ಯುತ್ ಸಮಸ್ಯೆಗಳಿದ್ದರೂ ಕಚೇರಿಗೆ ಬರಬೇಕು ಹಾಗೂ ಇಲಾಖೆಯ ಇಂತಹ ಸಭೆಗೆ ಬಂದು ಮಾಹಿತಿ ಪಡೆದು ಸಾರ್ವಜನಿಕರು ಈ ವ್ಯವಸ್ಥೆಗೆ ಒಂದು ಒಳ್ಳೆಯ ಬೆಲೆ ಸಿಗುವಂತೆ ಮಾಡಬೇಕು ಎಂದು ಅವರು ಪ್ರಕಟಣೆಯ ಮೂಲಕ ಕಳಕಳಿಯ ವಿನಂತಿ ಮಾಡಿಕೊಂಡಿದ್ದಾರೆ.

ಇದೇ ವೇಳೆ ತಾಲೂಕಿನ ಗ್ರಾಹಕರಿಗೆ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಸೇವೆ ಒದಗಿಸುವ ನಿಟ್ಟಿನಲ್ಲಿ ಹೆಸ್ಕಾಂ ಇಲಾಖೆಗೆ ತುರ್ತಾಗಿ ವಿಶೇಷ ಅನುದಾನದ ಅವಶ್ಯಕತೆಯಿರುವುದು ಕ್ರಾಂತಿಕಾರಿ ನ್ಯೂಸ್ ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ. ಅಂಕೋಲಾ ಹೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 1,100 ವಿದ್ಯುತ್ ಪರಿವರ್ತಕಗಳು (ಟ್ರಾನ್ಸ್‌ಫಾರ್ಮರ್‌ಗಳು) ಇದ್ದು, ಇದರಲ್ಲಿ ಹಾರವಾಡದಿಂದ ಬೆಳಂಬಾರದವರೆಗಿನ ಸಮುದ್ರ ತೀರದಿಂದ ಕೇವಲ 1 ರಿಂದ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಸುಮಾರು 100 ಟ್ರಾನ್ಸ್‌ಫಾರ್ಮರ್‌ಗಳ ಎಲ್‌ಟಿ (LT) ಮಾರ್ಗಗಳು ಪ್ರಸ್ತುತ ತೀವ್ರ ಸಮಸ್ಯೆಯನ್ನು ಎದುರಿಸುತ್ತಿವೆ. ಸಾಮಾನ್ಯವಾಗಿ ಈ ವಿದ್ಯುತ್ ಲೈನ್‌ಗಳು ಕನಿಷ್ಠ 30 ವರ್ಷಗಳ ಕಾಲ ಬಾಳಿಕೆ ಬರಬೇಕಾಗಿದ್ದರೂ, ಕರಾವಳಿ ಭಾಗದಲ್ಲಿ ಸಮುದ್ರದ ಉಪ್ಪಿನಂಶದ ಗಾಳಿ ಹೆಚ್ಚಿರುವುದರಿಂದ ಕೇವಲ 10 ವರ್ಷಗಳಲ್ಲೇ ಇವು ಸಂಪೂರ್ಣವಾಗಿ ತುಕ್ಕು ಹಿಡಿದು ಹಾಳಾಗುತ್ತಿವೆ. ಇದರಿಂದಾಗಿ ತಂತಿಗಳು ಪದೇ ಪದೇ ತುಂಡಾಗುತ್ತಿದ್ದು, ಗ್ರಾಹಕರಿಗೆ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಈ ಲೈನ್‌ಗಳ ತುರ್ತು ಬದಲಾವಣೆ ಹಾಗೂ ಮಹತ್ತರ ತಾಂತ್ರಿಕ ಸುಧಾರಣೆಗಳಿಗಾಗಿ ಸುಮಾರು 5ಕೋಟಿ ರೂಪಾಯಿಗಳ ವಿಶೇಷ ಬಜೆಟ್ ಅನುದಾನದ ಅವಶ್ಯಕತೆಯಿದ್ದು, ಈ ಕುರಿತು ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಈ ಹಿಂದಿನ ಸರ್ಕಾರದ ಆದೇಶದಂತೆ ಬಜೆಟ್ ಬಿಡುಗಡೆಯಾದಲ್ಲಿ ಈ ಭಾಗದ ಕಾಮಗಾರಿಗೆ ತುಂಬಾ ಸಹಕಾರಿಯಾಗಲಿದ್ದು, ಉಪ್ಪಿನ ಗಾಳಿಯಿಂದ ಲೈನ್‌ಗಳು ಬೇಗನೆ ಹಾಳಾಗುವುದನ್ನು ತಡೆಯಲು ಹೆಸ್ಕಾಂ ಕೆಲವು ಮಹತ್ವದ ತಾಂತ್ರಿಕ ಬದಲಾವಣೆಗಳನ್ನು ಮಾಡಲು ಮುಂದಾಗಬೇಕಿದೆ.

ಟ್ರಾನ್ಸ್‌ಫಾರ್ಮರ್ ಲೈನ್‌ಗಳಿಗೆ ಬಳಸುವ ಕಬ್ಬಿಣದ ಅಡ್ಡಪಟ್ಟಿಗಳು ಬೇಗನೆ ತುಕ್ಕು ಹಿಡಿಯುವುದರಿಂದ, ಪ್ರಸ್ತುತ ಇರುವ ಸಾಮಾನ್ಯ ಎಂ.ಎಸ್ (Mild Steel) ಚಾನೆಲ್‌ಗಳ ಬದಲಿಗೆ ಹೆಚ್ಚಿನ ಬಾಳಿಕೆ ಬರುವ ಜಿಐ (Galvanized Iron) ಅಡ್ಡಪಟ್ಟಿಗಳನ್ನು ಅಳವಡಿಸಬೇಕಿದೆ. ಇದರ ಜೊತೆಗೆ ಸದ್ಯ ಚಾಲ್ತಿಯಲ್ಲಿರುವ ಸಾಧಾರಣ ‘2-ACSR’ ತಂತಿಗಳ ಬದಲಿಗೆ, ಹೆಚ್ಚು ದಪ್ಪ ಹಾಗೂ ಬಲಿಷ್ಠವಾಗಿರುವ ‘ರ್ಯಾಬಿಟ್ ಕಂಡಕ್ಟರ್’ (Rabbit Conductor) ತಂತಿಗಳನ್ನು ಅಳವಡಿಸಬೇಕಾಗಿದೆ.. ಈ ಹೊಸ ತಾಂತ್ರಿಕ ಮೇಲ್ದರ್ಜೀಕರಣದಿಂದಾಗಿ ತಂತಿಗಳು ತುಕ್ಕು ಹಿಡಿದು ತುಂಡಾಗುವುದು ಸಂಪೂರ್ಣವಾಗಿ ತಪ್ಪಲಿದ್ದು, ಕರಾವಳಿ ಭಾಗದ ಗ್ರಾಹಕರಿಗೆ ನಿರಂತರ ಹಾಗೂ ಉತ್ತಮ ಗುಣಮಟ್ಟದ ವಿದ್ಯುತ್ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೆಸ್ಕಾಂ ಮೂಲಗಳು ತಿಳಿಸಿವೆ. ಆದ್ದರಿಂದ ಭ್ರಷ್ಟಾಚಾರ ಮುಕ್ತ ಹಾಗೂ ಜವಾಬ್ದಾರಿಯುತ ಆಡಳಿತಕ್ಕಾಗಿ ಸರ್ಕಾರ ಕೂಡಲೇ ಈ 5 ಕೋಟಿ ರೂಪಾಯಿಗಳ ತುರ್ತು ಅನುದಾನವನ್ನು ಬಿಡುಗಡೆ ಮಾಡಬೇಕಿದೆ ಎಂಬುದು ಇಡೀ ತಾಲೂಕಿನ ಸಾರ್ವಜನಿಕರ ತೀವ್ರ ಒತ್ತಾಯವಾಗಿದೆ.

✍️ಕಿರಣ ಗಾಂವಕರ

Leave a Reply

Your email address will not be published. Required fields are marked *

error: Content is protected !!