​”ಅಂಕೋಲಾದಲ್ಲಿ ಬಿ.ಎ.ಲ್ಓ ಸಭೆಯಲ್ಲೇ ದೌರ್ಜನ್ಯ ಆರೋಪ: ಪುರಸಭೆ ಅಧಿಕಾರಿ ರಾಥೋಡ್ ವಿರುದ್ಧ ಡಿಸಿಗೆ ದೂರು – ಆಸ್ಪತ್ರೆ ಸೇರಿದ ಮಹಿಳಾ ನೌಕರಳು!”​

ಅಂಕೋಲಾ:ಸರ್ಕಾರದ ಆದೇಶದಂತೆ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ನಡೆದ ಅಧಿಕೃತ ಸಭೆಯೊಂದರಲ್ಲಿ ಮಹಿಳಾ ಬಿ.ಎಲ್.ಓಗೆ ಸಾರ್ವಜನಿಕವಾಗಿ ಅವಮಾನಿಸಿ, ಬೆದರಿಕೆ ಹಾಕಿದ ಗಂಭೀರ ಘಟನೆಗೆ ಸಂಬಂಧಿಸಿದಂತೆ ನೊಂದ ನೌಕರಳು ಜಿಲ್ಲಾಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.

ಕಳೆದ 13 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿ.ಎ.ಲ್ಓ (BLO) ಆಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ವೀಣಾ ರಾಜು ನಾಯ್ಕ ಅವರು ತನಗಾದ ಅನ್ಯಾಯವನ್ನು ಉಲ್ಲೇಖಿಸಿ ಕಾರವಾರದ ಜಿಲ್ಲಾಧಿಕಾರಿಗಳು ಹಾಗೂ ಅಂಕೋಲಾ ತಹಶೀಲ್ದಾರರಿಗೆ ಲಿಖಿತ ದೂರು ನೀಡಿದ್ದು, ಅರ್ಜಿಯಲ್ಲಿನ ಪ್ರಮುಖಾಂಶಗಳು ಈ ಕೆಳಗಿನಂತಿವೆ.​

ನೊಂದ ಮಹಿಳಾ ನೌಕರಳು ದೂರಿನಲ್ಲಿ ವಿವರಿಸಿರುವಂತೆ, ವಾರ್ಡ್ ನಂ. 10, ಬೂತ್ ಸಂಖ್ಯೆ 195 ಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಧಿಕೃತ ‘SIR 2002’ ಮ್ಯಾಪಿಂಗ್ ಪ್ರಕ್ರಿಯೆಯಡಿ ಮಾಹಿತಿ ಸಂಗ್ರಹಿಸಲು ಅವರು ಜೂನ್ 17 ರಂದು ವಾರ್ಡ್‌ನ ನಿಕಟಪೂರ್ವ ಸದಸ್ಯೆಯಾದ ಶ್ರೀಮತಿ ಶಾಂತಲಾ ಅರುಣ ನಾಡಕರ್ಣಿ ಅವರಿಗೆ ಕರೆ ಮಾಡಿದ್ದರು. ಈ ವೇಳೆ ಶಾಂತಲಾ ಅವರ ತಾಯಿಯ ಹೆಸರು, ತಾಯಿಯ ಮನೆಯ ವಾಸ್ತವ್ಯ ಮತ್ತು ಮತಗಟ್ಟೆ ಸಂಖ್ಯೆಯ ಕುರಿತು ವಿವರ ಕೇಳಿದಾಗ, ಅವರು ಸ್ಪಷ್ಟ ಮಾಹಿತಿ ನೀಡದೆ ಉಡಾಫೆ ತೋರಿದ್ದಾರೆ. ಈ ಜವಾಬ್ದಾರಿಯುತ ಮಾಹಿತಿ ನಿರಾಕರಣೆಯ ವಿಷಯವನ್ನು ಬಿ.ಎ.ಲ್ಓ ವೀಣಾ ಅವರು ತಕ್ಷಣವೇ ತಮ್ಮ ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದರು.​ಆದರೆ ಈ ಘಟನೆಯ ಬೆನ್ನಲ್ಲೇ, ಜೂನ್ 18 ರಂದು ಬೆಳಗ್ಗೆ 11 ಗಂಟೆಗೆ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲೇ ಇಡೀ ಬಿ.ಎ.ಲ್ಓ ಮತ್ತು ಬಿ.ಎ.ಲ್ಓ-2 ಗಳ ಅಧಿಕೃತ ಸಭೆ ನಡೆಯುತ್ತಿದ್ದಾಗ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ. ಈ ಸಭೆಗೆ ಬಂದ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಡಿ.ಎ.ಲ್. ರಾಥೋಡ್ ಅವರು ಯಾವುದೇ ಮುನ್ಸೂಚನೆ ನೀಡದೆ, ನೂರಾರು ಸಾರ್ವಜನಿಕರು ಮತ್ತು ಸಹೋದ್ಯೋಗಿಗಳ ಮಧ್ಯೆ ವೀಣಾ ನಾಯ್ಕ ಅವರನ್ನು ಕರೆದು ನಿಂದಿಸಿದ್ದಾರೆ. “ನಿನ್ನನ್ನು ನೌಕರಿಯಿಂದ ತೆಗೆಯುತ್ತೇನೆ, ನೀರಿಲ್ಲದ ಜಾಗಕ್ಕೆ ವರ್ಗಾಯಿಸುತ್ತೇನೆ, ಇವತ್ತಲ್ಲ ಪುರಸಭೆಯಲ್ಲಿ ನಿನಗೆ ತೋರಿಸುತ್ತೇನೆ” ಎಂದು ಸಾರ್ವಜನಿಕವಾಗಿಯೇ ನೇರ ಬೆದರಿಕೆ ಹಾಕಿದ್ದಾರೆ ಎಂದು ವೀಣಾ ನಾಯ್ಕ ಅರ್ಜಿಯಲ್ಲಿ ಕಣ್ಣೀರಿಟ್ಟಿದ್ದಾರೆ.​

ಅಧಿಕಾರಿಯೊಬ್ಬರಿಂದ ಸಾರ್ವಜನಿಕವಾಗಿ ಎದುರಾದ ಅಪಮಾನ ಹಾಗೂ ದರ್ಪದ ಮಾತಿನಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾದ ವೀಣಾ ಅವರಿಗೆ ತಲೆಸುತ್ತು ಬಂದು ಸಭೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ದಂಡಾಧಿಕಾರಿಗಳ ವಾಹನದಲ್ಲಿಯೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ .

ಈ ಇಡೀ ಕರಾಳ ಘಟನೆಗೆ ಸಭೆಯಲ್ಲಿದ್ದ ಶ್ವೇತಾ ನಾಗರಾಜ ನಾಯ್ಕ್, ಲೀಲಾವತಿ ಗೌಡ, ಶ್ರೀಶೈಲ್, ಕುಸುಮ ಬಿ. ಗೌಡ, ವಿಜಯಲಕ್ಷ್ಮಿ ಅಶೋಕ್ ನಾಯ್ಕ, ಮೀನಾಕ್ಷಿ ಗಿರಿಯಾ ನಾಯ್ಕ ಮತ್ತು ಸುಧಾ ಅರುಣ ನಾಯ್ಕ ಸೇರಿದಂತೆ ಏಳಕ್ಕೂ ಹೆಚ್ಚು ಸಹೋದ್ಯೋಗಿ ನೌಕರರು ಪ್ರತ್ಯಕ್ಷದರ್ಶಿಗಳಾಗಿದ್ದಾರೆ ಎಂದು ದೂರಿನಲ್ಲಿ ಸಾಕ್ಷಿಗಳ ವಿವರ ಲಗತ್ತಿಸಲಾಗಿದೆ.​ಈ ದೂರಿನ ಮೂಲಕ ನೊಂದ ಮಹಿಳಾ ನೌಕರಳು ಜಿಲ್ಲಾಡಳಿತಕ್ಕೆ ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಇಟ್ಟಿದ್ದಾರೆ. ಸರ್ಕಾರಿ ನೌಕರರಾಗಿ ಕರ್ತವ್ಯ ಮರೆತು ಮಹಿಳಾ ನೌಕರಿಗೆ ಸಾರ್ವಜನಿಕವಾಗಿ ಅವಮಾನಿಸಿ ಬೆದರಿಸಿದ ಡಿ.ಎ.ಲ್. ರಾಥೋಡ್ ಅವರ ವಿರುದ್ಧ ತಕ್ಷಣ ತನಿಖೆ ನಡೆಸಿ ಶಿಸ್ತು ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು, ಪ್ರಸ್ತುತ ನಡೆಯುತ್ತಿರುವ SIR 2002 ಮತ್ತು ಮುಂದಿನ ಎಲ್ಲಾ ಸರ್ಕಾರಿ ಕರ್ತವ್ಯಗಳನ್ನು ನಿರ್ವಹಿಸಲು ತಮಗೂ ಹಾಗೂ ಇಲಾಖೆಯ ಎಲ್ಲಾ ಬಿ.ಎ.ಲ್ಓಗಳಿಗೆ ಸೂಕ್ತ ರಕ್ಷಣೆ ಮತ್ತು ಸಹಕಾರ ನೀಡಬೇಕು, ಹಾಗೂ ಇಂತಹ ಘಟನೆಗಳು ಇನ್ಮುಂದೆ ಎಲ್ಲೂ ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ

13 ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿಯುತ್ತಿರುವ ತನಗೆ ಜಿಲ್ಲಾಡಳಿತ ನ್ಯಾಯ ಒದಗಿಸಬೇಕು ಮತ್ತು ಮುಂದೆ ನಿರ್ಭಯವಾಗಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ವೀಣಾ ರಾಜು ನಾಯ್ಕ ಕೋರಿದ್ದಾರೆ. ಈ ಶೋಷಣೆಯ ವಿರುದ್ಧ ತನಿಖೆ ನಡೆದು ನೊಂದ ಮಹಿಳೆಗೆ ನ್ಯಾಯ ಸಿಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ..

Leave a Reply

Your email address will not be published. Required fields are marked *

error: Content is protected !!