ಅಂಕೋಲಾ ವಕೀಲರ ಸಂಘಕ್ಕೆ ನೂತನ ಸಾರಥಿ: ಅಧ್ಯಕ್ಷರಾಗಿ ವಿನಾಯಕ ಎಸ್. ನಾಯ್ಕ ಅವಿರೋಧ ಆಯ್ಕೆ​.

​ಅಂಕೋಲಾ: ಇಲ್ಲಿನ ವಕೀಲರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಹಿರಿಯ ವಕೀಲರಾದ ವಿ.ಎಸ್. ನಾಯಕ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು.

ಸಭೆಯಲ್ಲಿ ಬೊಬ್ರುವಾಡದ ವಿನಾಯಕ ಎಸ್. ನಾಯ್ಕ ಅವರು ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಂಘದ ಚುಕ್ಕಾಣಿ ಹಿಡಿದಿದ್ದಾರೆ. ನೂತನ ಗೌರವಾಧ್ಯಕ್ಷರಾಗಿ ಹಿರಿಯ ವಕೀಲ ಹಾಗೂ ನೋಟರಿ ನಿತ್ಯಾನಂದ ಕವರಿ ಅವರನ್ನು ನೇಮಿಸಲಾಗಿದ್ದು, ಉಪಾಧ್ಯಕ್ಷರಾಗಿ ನಾರಾಯಣ ಆರ್. ನಾಯಕ, ಕಾರ್ಯದರ್ಶಿಯಾಗಿ ರಾಮಚಂದ್ರ ಟಿ. ಗೌಡ, ಸಹ ಕಾರ್ಯದರ್ಶಿಯಾಗಿ ತೇಜಾ ಎಸ್. ಬಂಟ್ ಹಾಗೂ ಖಜಾಂಚಿಯಾಗಿ ಪ್ರಕೃತಿ ವಿ. ನಾಯಕ ಅವರು ಆಯ್ಕೆಯಾಗಿದ್ದಾರೆ.​

ಇದೇ ಸಂದರ್ಭದಲ್ಲಿ ಸಂಘದ ಕಾರ್ಯಕಾರಿ ಸಮಿತಿಗೆ ಎಂ.ಪಿ. ಭಟ್, ವಿನೋದ ಶಾನಭಾಗ, ವಿ.ಎಸ್. ನಾಯ್ಕು, ಬಿ.ಡಿ. ನಾಯ್ಕು, ದೀಕ್ಷಿತ್ ನಾಯ್ಕು, ಬಿ.ಟಿ. ನಾಯ್ಕು, ಜಿ.ಎನ್. ನಾಯ್ಕು, ಸುರೇಶ್ ಬಾನಾವಳಿಕರ್, ಎಸ್.ಜಿ. ನಾಯ್ಕು, ಜೆ.ವಿ. ನಾಯ್ಕು ಹಾಗೂ ಪಿ.ಎಲ್. ನಾಯ್ಕು ಅವರನ್ನು ಆರಿಸಲಾಗಿದ್ದು, ಉಳಿದ ವಕೀಲರು ಸಂಘದ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷೆ ಪ್ರತಿಭಾ ನಾಯ್ಕು ಹಾಗೂ ನಿಕಟಪೂರ್ವ ಕಾರ್ಯದರ್ಶಿ ಮಮತಾ ಕೆರೆಮನೆ ಅವರು ಕಳೆದ ಸಾಲಿನ ಸಂಘದ ಕಾರ್ಯಚಟುವಟಿಕೆಗಳ ವರದಿ ಮತ್ತು ಲೆಕ್ಕಪತ್ರಗಳನ್ನು ಸಭೆಯ ಮುಂದಿಟ್ಟು ಅನುಮೋದನೆ ಪಡೆದರು. ಅವಿರೋಧವಾಗಿ ಅಸ್ತಿತ್ವಕ್ಕೆ ಬಂದಿರುವ ಈ ನೂತನ ಆಡಳಿತ ಮಂಡಳಿಯು ವಕೀಲರ ಹಿತರಕ್ಷಣೆ ಹಾಗೂ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದೆ ಎಂಬ ವಿಶ್ವಾಸವನ್ನು ಸದಸ್ಯರು ವ್ಯಕ್ತಪಡಿಸಿದ್ದು, ಸಭೆಯಲ್ಲಿ ಸಂಘದ ಹಿರಿಯ-ಕಿರಿಯ ವಕೀಲರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!